ಮುಂಬಯಿ: ಮೀರಾರೋಡ್ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ ಇದರ ಪ್ರಥಮ ವಾರ್ಷಿಕ ಶ್ರೀ ನಾಗದೇವರ ಪ್ರತಿಷ್ಠಾಪನಾ ಉತ್ಸವವು ಮೀರಾರೋಡ್ ಪೂರ್ವದ ಪ್ಲೆಸೆಂಟ್ ಪಾರ್ಕಿನ ಮೀರಾಧಾಮ ಸೊಸೈಟಿಯಲ್ಲಿರುವ ಶ್ರೀ ಶನಿದೇವರ ಮಂದಿರದ ಆವರಣದಲ್ಲಿ ಫೆ. 7 ರಂದು ವಿಷ್ಣುಮೂರ್ತಿ ಅಡಿಗ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ನೆರವೇರಿತು.
ಧಾರ್ಮಿಕ ಕಾರ್ಯಕ್ರಮವಾಗಿ ತನು ತಂಬಿಲ, ನವಕ ಕಲಶ, ಪಂಚಾಮೃತ ಅಭಿಷೇಕ, ಸಾಮೂಹಿಕ ಆಶ್ಲೇಷ ಬಲಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿತರಣೆ ನೆರವೇರಿತು. ಮಧ್ಯಾಹ್ನ ನಾರಾಯಣ ಭಟ್ ರೆಂಜಾಳ ಅವರಿಂದ ಶ್ರೀ ನಾಗದೇವರ ದರ್ಶನ ನೆರವೇರಿತು.
ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಪುರಂದರ ಶ್ರೀಯಾನ್ ಅವರು ಶ್ರೀ ಕ್ಷೇತ್ರದ ಬಗ್ಗೆ ಮಾಹಿತಿ ನೀಡಿ, ದಿವಂಗತ ಅಶೋಕ್ ಕರ್ಕೇರ ಅವರ ಮುಂದಾಳತ್ವದಲ್ಲಿ ಶ್ರೀ ಶನಿದೇವರ ಮೂರ್ತಿಯೊಂದಿಗೆ ಸ್ಥಾಪಿಸಿದ ಶನಿಮಂದಿರದಲ್ಲಿ ಒಂದು ವರ್ಷದ ಹಿಂದೆ ಶ್ರೀ ನಾಗದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಯಿತು. ಪ್ರತೀ ತಿಂಗಳ ಪಂಚಮಿಯಂದು ತನು ತಂಬಿಲ, ಪಂಚಾಮೃತ ಅಭಿಷೇಕ, ನಾಗರ ಪಂಚಮಿ, ಷಷ್ಠಿ ಉತ್ಸವ ಇನ್ನಿತರ ವೈದಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಗುತ್ತಿದೆ. ಪ್ರತೀ ಶನಿವಾರ ಗ್ರಂಥ ಪಾರಾಯಣ, ಪ್ರತೀ ತಿಂಗಳ ಕೊನೆಯಲ್ಲಿ ಅನ್ನಸಂತರ್ಪಣೆಯೊಂದಿಗೆ ವಿಶೇಷ ಪೂಜೆ, ಶನಿಜಯಂತಿ, ಆಷಾಡ ಮಾಸ ಶನಿಪೂಜೆ, ಪರಿವಾರ ದೇವರಾದ ಶ್ರೀ ಗಣಪತಿಗೆ ಚತುರ್ಥಿಯಂದು ವಿಶೇಷ ಪೂಜೆ, ಶ್ರೀ ಆಂಜನೇಯ ಆರಾಧನೆ, ಅರಸಿನ ಕುಂಕುಮ, ಉಚಿತ ಯಕ್ಷಗಾನ ತರಬೇತಿ ನೀಡಲಾಗುತ್ತಿದೆ ಎಂದರು.
ಕಾರ್ಯಕಾರಿ ಸಮಿತಿಯ ಗೌರವಾಧ್ಯಕ್ಷ ವಿನೋದ್ ವಘಾಸಿಯಾ, ಅಧ್ಯಕ್ಷೆ ವಿದ್ಯಾ ಅಶೋಕ್ ಕರ್ಕೇರ, ಉಪಾಧ್ಯಕ್ಷರುಗಳಾದ ಸಂಪತ್ ಶೆಟ್ಟಿ, ಗುಣಕಾಂತ್ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿಗಳಾದ ಲೋಹಿತಾಕ್ಷ ಕೆ. ಬಂಗೇರ, ಸುಜಾತಾ ಜಿ. ಶೆಟ್ಟಿ, ಕೋಶಾಧಿಕಾರಿ ಅಚ್ಚುತ ಕೋಟ್ಯಾನ್, ಜಯಕರ ಎಸ್. ಶೆಟ್ಟಿ, ಭಾರತಿ ಅಂಚನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಕೆ. ಶೆಟ್ಟಿ, ಕಾರ್ಯದರ್ಶಿ ಲೀಲಾ ಡಿ. ಪೂಜಾರಿ, ಪೂಜಾ ಮತ್ತು ಸಾಂಸ್ಕೃತಿಕ ಸಮಿತಿಯ ಸದಸ್ಯರು, ಸಲಹೆಗಾರರು, ಸರ್ವ ಸದಸ್ಯರು, ಮಹಿಳಾ ವಿಭಾಗದ ಸದಸ್ಯೆಯರು ಸಹಕರಿಸಿದರು.
ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆ ನಡೆಯಿತು. ಸ್ಥಳೀಯ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರಾಜಕೀಯ ನೇತಾರರು, ತುಳು-ಕನ್ನಡಿಗರು, ಕನ್ನಡೇತರರರು ಉಪಸ್ಥಿತರಿದ್ದು ಶ್ರೀ ನಾಗದೇವರ ಮತ್ತು ಶ್ರೀ ಶನಿದೇವರ ದರ್ಶನ ಪಡೆದರು.
ಚಿತ್ರ-ವರದಿ : ರಮೇಶ್ ಅಮೀನ್