ಮ್ಯಾಂಚೆಸ್ಟರ್: ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಪಾಕಿಸ್ಥಾನ ಹಿಡಿತ ಸಾಧಿಸಿದೆ. ಆರಂಭಿಕ ಆಟಗಾರ ಶಾನ್ ಮಸೂದ್ ಭರ್ಜರಿ ಶತಕ ಮತ್ತು ಬೌಲರ್ ಗಳ ದಾಳಿಯಿಂದ ಪಾಕ್ ತಂಡ ಆಂಗ್ಲರ ಮೇಲೆ ಸವಾರಿ ನಡೆಸಿದೆ.
ಮೊದಲ ದಿನದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 139 ರನ್ ಗಳಿಸಿದ್ದ ಪಾಕ್ ಎರಡನೇ ದಿನದ ಮೊದಲ ಓವರ್ ನಲ್ಲೇ ಬಾಬರ್ ಅಜಂ ವಿಕೆಟ್ ಕಳೆದುಕೊಂಡಿತು. 176 ರನ್ ಗೆ ಐದು ವಿಕೆಟ್ ಕಳೆದುಕೊಂಡಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಮತ್ತೊಂದೆಡೆ ಆರಂಭಿಕ ಆಟಗಾರ ಶಾನ್ ಮಸೂದ್ ರನ್ ಗಟ್ಟಿಯಾಗಿ ನಿಂತರು. ಭರ್ಜರಿ ಶತಕ ಬಾರಿಸಿದ ಮಸೂದ್ 156 ರನ್ ಗಳಿಸಿದರು. ಇದು ಕಳೆದ ಮೂರು ಟೆಸ್ಟ್ ನಲ್ಲಿ ಮಸೂದ್ ಬಾರಿಸಿದ ಮೂರನೇ ಶತಕ.
ಶದಾಬ್ ಖಾನ್ 45 ರನ್ ಗಳಿಸಿದರು. ಅಂತಿಮವಾಗಿ ಪಾಕ್ 326 ರನ್ ಗಳಿಸಿತು. ಇಂಗ್ಲೆಂಡ್ ಪರ ಬ್ರಾಡ್ ಮತ್ತು ಆರ್ಚರ್ ತಲಾ ಮೂರು ವಿಕೆಟ್ ಪಡೆದರು. ವೋಕ್ಸ್ ಎರಡು ವಿಕೆಟ್ ಕಬಳಿಸಿದರೆ, ಆ್ಯಂಡರ್ಸನ್ ಮತ್ತು ಬೆಸ್ ತಲಾ ಒಂದು ವಿಕೆಟ್ ಪಡೆದರು.
ಅಂತಿಮ ಸೆಶನ್ ನಲ್ಲಿ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ಗೆ ಪಾಕ್ ವೇಗಿಗಳು ಆಘಾತ ನೀಡಿದರು. 12 ರನ್ ಆಗುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ನಾಯಕ ಜೋ ರೂಟ್ ಕೂಡ 14 ರನ್ ಗಳಿಸಲಷ್ಟೇ ಶಕ್ತವಾದರು. ಒಲಿ ಪೋಪ್ 46 ರನ್ ಗಳಿಸಿ, ಬಟ್ಲರ್ 15 ರನ್ ಗಳಿಸಿ ಆಡುತ್ತಿದ್ದಾರೆ. ಇಂಗ್ಲೆಂಡ್ 92 ರನ್ ಗೆ ನಾಲ್ಕು ವಿಕೆಟ್ ಕಳೆದುಕೊಂಡಿದೆ.
ಪಾಕ್ ಪರ ಮೊಹಮ್ಮದ್ ಅಬ್ಬಾಸ್ ಎರಡು ವಿಕೆಟ್ ಪಡೆದರೆ, ಶಹೀನ್ ಅಫ್ರಿದಿ ಮತ್ತು ಯಾಸಿರ್ ಶಾ ತಲಾ ಒಂದು ವಿಕೆಟ್ ಪಡೆದರು.