Advertisement

ಶಮಿ ಹ್ಯಾಟ್ರಿಕ್‌ ಪರಾಕ್ರಮಿ

12:05 AM Jun 24, 2019 | Team Udayavani |

ಸೌತಾಂಪ್ಟನ್‌: ಅಫ್ಘಾನಿ ಸ್ಥಾನ ವಿರುದ್ಧ ಸೋಲಿನ ಅಂಜಿಕೆಯಲ್ಲಿದ್ದ ಟೀಮ್‌ ಇಂಡಿಯಾವನ್ನು ಮೊಹಮ್ಮದ್‌ ಶಮಿ ಹ್ಯಾಟ್ರಿಕ್‌ ಪರಾಕ್ರಮದ ಮೂಲಕ ಕಾಪಾಡಿದ್ದು ಈಗ ಇತಿಹಾಸ. ಅವರ ಈ ಹ್ಯಾಟ್ರಿಕ್‌ ಸಾಹಸಕ್ಕೆ ಮಹೇಂದ್ರ ಸಿಂಗ್‌ ಧೋನಿ ನೀಡಿದ ಸಲಹೆಯೇ ಕಾರಣ ಎಂಬುದು ಕುತೂಹಲದ ಸಂಗತಿ. ಇದನ್ನು ಸ್ವತಃ ಶಮಿಯೇ ಹೇಳಿಕೊಂಡಿದ್ದಾರೆ.

Advertisement

ಮೊಹಮ್ಮದ್‌ ನಬಿ, ಅಫ್ತಾಬ್‌ ಆಲಂರನ್ನು ಸತತ 2 ಎಸೆತ ಗಳಲ್ಲಿ ಪೆವಿಲಿಯನ್ನಿಗೆ ಅಟ್ಟಿದ ಬಳಿಕ ಶಮಿ ಹ್ಯಾಟ್ರಿಕ್‌ ಹಾದಿ ಯಲ್ಲಿ ದ್ದರು. ಆಗ ಶಮಿಯನ್ನು ಕರೆದ ಧೋನಿ ಯಾರ್ಕರ್‌ ಎಸೆತವಿಕ್ಕುವಂತೆ ಸೂಚಿಸುತ್ತಾರೆ. ಇದು ಕ್ಲಿಕ್‌ ಆಯಿತು.”ಈ ಸಮಯದಲ್ಲಿ ಬೌಲಿಂಗ್‌ ಶೈಲಿಯಲ್ಲಿ ಯಾವುದೇ ಬದಲಾವಣೆ ಬೇಡ. ಯಾರ್ಕರ್‌ ಎಸೆತವನ್ನಿಕ್ಕಿ. ನಿಮಗೆ ಹ್ಯಾಟ್ರಿಕ್‌ ಸಾಧಿಸುವ ಉತ್ತಮ ಅವಕಾಶವಿದೆ ಎಂದು ಧೋನಿ ಸಲಹೆಯಿತ್ತರು. ಅವರು ಹೇಳಿದಂತೆಯೇ ಮಾಡಿದೆ’ ಎಂದು ಮೊಹಮ್ಮದ್‌ ಶಮಿ ಗೆಲುವಿನ ಬಳಿಕ ಹೇಳಿದರು.

ನಬಿ ಮೊದಲ ಎಸೆತವನ್ನು ಬೌಂಡರಿಗೆ ಅಟ್ಟಿದಾಗಲೂ ಶಮಿಯನ್ನು ಕರೆದ ಧೋನಿ ಸೂಚನೆ ನೀಡಿದ್ದರು. ಅನಂತರದ ಎಸೆತ ಡಾಟ್‌ ಆಯಿತು. ಮುಂದಿನದೇ ಹ್ಯಾಟ್ರಿಕ್‌ ಸಾಹಸ.ಶಮಿ ಸಾಧನೆ 40ಕ್ಕೆ 4 ವಿಕೆಟ್‌. ಅಂತಿಮ ಓವರಿನ 3, 4 ಹಾಗೂ 5ನೇ ಎಸೆತದಲ್ಲಿ ಅವರು ಕ್ರಮವಾಗಿ ನಬಿ, ಆಲಂ ಮತ್ತು ಮುಜೀಬ್‌ ವಿಕೆಟ್‌ ಹಾರಿಸಿ ಹ್ಯಾಟ್ರಿಕ್‌ ಜತೆಗೆ ಭಾರತದ ಗೆಲುವನ್ನು ಸಾರಿದರು.

ಅವಕಾಶ ಸಿಕ್ಕಿದ್ದೇ ಅದೃಷ್ಟ
“ನನಗೆ ಆಡುವ ಬಳಗದಲ್ಲಿ ಅವಕಾಶ ಲಭಿಸಿದ್ದೇ ಒಂದು ಲಕ್‌. ಇದನ್ನು ಪರಿಪೂರ್ಣವಾಗಿ ಬಳಸಿಕೊಳ್ಳುವುದು ನನ್ನ ಯೋಜನೆಯಾಗಿತ್ತು. ಹ್ಯಾಟ್ರಿಕ್‌ ಸಾಧನೆ ವಿಪರೀತ ಖುಷಿ ಕೊಟ್ಟಿದೆ. ಅದರಲ್ಲೂ ಇದು ವಿಶ್ವಕಪ್‌ನಲ್ಲಿ ಬಂದಿರುವುದಕ್ಕೆ ಇನ್ನಷ್ಟು ಸಂತಸವಾಗಿದೆ’ ಎಂದರು ಶಮಿ.

“ಮೊಹಮ್ಮದ್‌ ನಬಿ ಪಂದ್ಯವನ್ನು ಕಸಿಯುವ ಎಲ್ಲ ಸಾಧ್ಯತೆ ಇತ್ತು. ನಬಿ ಔಟಾದರೆ ಪಂದ್ಯ ನಮ್ಮದಾಗುವ ಬಗ್ಗೆ ಅನುಮಾನವಿರಲಿಲ್ಲ. ಇಂಥ ಸಂದರ್ಭದಲ್ಲಿ ನಾವು ಹತಾಶರಾಗುವುದು, ದೌರ್ಬಲ್ಯ ತೋರ್ಪಡಿಸುವುದು ಸಲ್ಲದು. ಎದುರಾಳಿ ಬ್ಯಾಟ್ಸ್‌ಮನ್‌ಗೆ ಇದರಿಂದ ಬೇರೆಯೇ ಸಂದೇಶ ರವಾನೆಯಾಗಲಿದೆ…’ ಎಂಬುದು ಶಮಿ ಲೆಕ್ಕಾಚಾರವಾಗಿತ್ತು.

Advertisement

ಇದು ವಿಶ್ವಕಪ್‌ ಇತಿಹಾಸದ 10ನೇ ಹ್ಯಾಟ್ರಿಕ್‌ ಸಾಹಸ. ಭಾರತದ 2ನೇ ನಿದರ್ಶನ. 1987ರ ನ್ಯೂಜಿಲ್ಯಾಂಡ್‌ ಎದುರಿನ ನಾಗ್ಪುರ ಪಂದ್ಯದಲ್ಲಿ ಚೇತನ್‌ ಶರ್ಮ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್‌ ಸಾಧಿಸಿದ್ದರು.

ಮೊಹಮ್ಮದ್‌ ಶಮಿ ಸದಾ ಫಿಟ್‌ನೆಸ್‌ ಸಮಸ್ಯೆಯಿಂದ ಬಳಲುವ ಆಟಗಾರ. ಕೆಲವು ಶಸ್ತ್ರಚಿಕಿತ್ಸೆಗಳಿಗೂ ಒಳಗಾಗಿದ್ದಾರೆ. ಈಗ ಡಯಟ್‌ ಮೂಲಕ ದೈಹಿಕ ಕ್ಷಮತೆ ಕಾಯ್ದುಕೊಂಡಿದ್ದಾರೆ.

“ನಾನು ಡಯಟ್‌ ಮಾಡುತ್ತಿದ್ದೇನೆಂದರೆ ಎಲ್ಲರೂ ನಗಬಹುದು. ಇದು ಭಾರೀ ಡಯಟ್‌ ಏನಲ್ಲ. ವೈದ್ಯರ ಸೂಚನೆ ಮೇರೆಗೆ ಇದನ್ನು ಅಳವಡಿಸಿಕೊಂಡಿದ್ದೇನೆ. ಸದ್ಯ ನಾನು ಸಿಹಿ ಮತ್ತು ಗೋಧಿ ಪದಾರ್ಥಗಳನ್ನು ತಿನ್ನುತ್ತಿಲ್ಲ. ಇದರಿಂದ ಲಾಭವಾಗಿದೆ. ಮೊದಲಾದರೆ ಒಂದು ಓವರ್‌ ಎಸೆದೊಡನೆ ಸಿಕ್ಕಾಪಟ್ಟೆ ಸುಸ್ತಾಗುತ್ತಿತ್ತು. ಈಗ ಹೀಗಿಲ್ಲ…’ ಎಂದು ಶಮಿ ತಮ್ಮ ಡಯಟ್‌ ರಹಸ್ಯವನ್ನು ಬಿಚ್ಚಿಟ್ಟರು.

ಸ್ಕೋರ್‌ ಪಟ್ಟಿ
ಭಾರತ: 8 ವಿಕೆಟಿಗೆ 224
ಅಫ್ಘಾನಿಸ್ಥಾನ
ಹಜ್ರತುಲ್ಲ ಜಜಾಯ್‌ ಬಿ ಶಮಿ 10
ಗುಲ್ಬದಿನ್‌ ನೈಬ್‌ ಸಿ ಶಂಕರ್‌ ಬಿ ಪಾಂಡ್ಯ 27
ರಹಮತ್‌ ಶಾ ಸಿ ಚಹಲ್‌ ಬಿ ಬುಮ್ರಾ 36
ಹಶ್ಮತುಲ್ಲ ಶಾಹಿದಿ ಸಿ ಮತ್ತು ಬಿ ಬುಮ್ರಾ 21
ಅಸYರ್‌ ಅಫ್ಘಾನ್‌ ಬಿ ಚಹಲ್‌ 8
ಮೊಹಮ್ಮದ್‌ ನಬಿ ಸಿ ಪಾಂಡ್ಯ ಬಿ ಶಮಿ 52
ನಜೀಬುಲ್ಲ ಜದ್ರಾನ್‌ ಸಿ ಚಹಲ್‌ ಬಿ ಪಾಂಡ್ಯ 21
ರಶೀದ್‌ ಖಾನ್‌ ಸ್ಟಂಪ್ಡ್ ಧೋನಿ ಬಿ ಚಹಲ್‌ 14
ಇಕ್ರಮ್‌ ಅಲಿ ಖೀಲ್‌ ಔಟಾಗದೆ 7
ಅಫ್ತಾಬ್‌ ಆಲಂ ಬಿ ಶಮಿ 0
ಮುಜೀಬ್‌ ಬಿ ಶಮಿ 0
ಇತರ 17
ಒಟ್ಟು (49.5 ಓವರ್‌ಗಳಲ್ಲಿ ಆಲೌಟ್‌) 213
ವಿಕೆಟ್‌ ಪತನ: 1-20, 2-64, 3-106, 4-106, 5-130, 6-166, 7-190, 8-213, 9-213.
ಬೌಲಿಂಗ್‌:
ಮೊಹಮ್ಮದ್‌ ಶಮಿ 9.5-1-40-4
ಜಸ್‌ಪ್ರೀತ್‌ ಬುಮ್ರಾ 10-1-39-2
ಯಜುವೇಂದ್ರ ಚಹಲ್‌ 10-0-36-2
ಹಾರ್ದಿಕ್‌ ಪಾಂಡ್ಯ 10-1-51-2
ಕುಲದೀಪ್‌ ಯಾದವ್‌ 10-0-39-0
ಪಂದ್ಯಶ್ರೇಷ್ಠ: ಜಸ್‌ಪ್ರೀತ್‌ ಬುಮ್ರಾ

ಎಕ್ಸ್‌ಟ್ರಾ ಇನ್ನಿಂಗ್ಸ್‌
-ಭಾರತ ವಿಶ್ವಕಪ್‌ನಲ್ಲಿ 50ನೇ ಗೆಲುವು ದಾಖಲಿಸಿದ 3ನೇ ತಂಡವೆನಿಸಿತು. ಉಲಿದೆರಡು ತಂಡಗಳೆಂದರೆ ಆಸ್ಟ್ರೇಲಿಯ (67) ಮತ್ತು ನ್ಯೂಜಿಲ್ಯಾಂಡ್‌ (52).
-ಭಾರತ ವಿಶ್ವಕಪ್‌ನಲ್ಲಿ ರನ್‌ ಅಂತರದ ಅತೀ ಸಣ್ಣ ಗೆಲುವು ಕಂಡಿತು (11 ರನ್‌). 1987ರಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ಬೆಂಗಳೂರಿನಲ್ಲಿ 16 ರನ್ನುಗಳಿಂದ ಗೆದ್ದದ್ದು ಹಿಂದಿನ ದಾಖಲೆ.
-ಮೊಹಮ್ಮದ್‌ ಶಮಿ ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್‌ ಸಾಧಿಸಿದ ಭಾರತದ 2ನೇ ಹಾಗೂ ವಿಶ್ವದ 9ನೇ ಬೌಲರ್‌. ಭಾರತದ ಮೊದಲಿಗನೆಂದರೆ ಚೇತನ್‌ ಶರ್ಮ. ಅವರು 1987ರ ನ್ಯೂಜಿಲ್ಯಾಂಡ್‌ ಎದುರಿನ ನಾಗ್ಪುರ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಲಸಿತ ಮಾಲಿಂಗ ವಿಶ್ವಕಪ್‌ನಲ್ಲಿ 2 ಸಲ ಹ್ಯಾಟ್ರಿಕ್‌ಗೆçದಿದ್ದಾರೆ.
-ಶಮಿ ಏಕದಿನದಲ್ಲಿ ಹ್ಯಾಟ್ರಿಕ್‌ ಸಾಧಿಸಿದ ಭಾರತದ ಕೇವಲ 4ನೇ ಬೌಲರ್‌. ಹಾಗೆಯೇ ಭಾರತದಾಚೆ ಹ್ಯಾಟ್ರಿಕ್‌ ಗಳಿಸಿದ ಮೊದಲ ಬೌಲರ್‌. ಇದಕ್ಕೂ ಮೊದಲು ಚೇತನ್‌ ಶರ್ಮ (ನ್ಯೂಜಿಲ್ಯಾಂಡ್‌ ವಿರುದ್ಧ, 1987), ಕಪಿಲ್‌ದೇವ್‌ (ಶ್ರೀಲಂಕಾ ವಿರುದ್ಧ, 1991) ಮತ್ತು ಕುಲದೀಪ್‌ ಯಾದವ್‌ (ಆಸ್ಟ್ರೇಲಿಯ ವಿರುದ್ಧ, 2017) ಹ್ಯಾಟ್ರಿಕ್‌ ವಿಕೆಟ್‌ ಹಾರಿಸಿದ್ದರು.
-ವಿರಾಟ್‌ ಕೊಹ್ಲಿ ವಿಶ್ವಕಪ್‌ ಕೂಟವೊಂದರಲ್ಲಿ ಸತತ 3 ಅರ್ಧ ಶತಕ ಬಾರಿಸಿದ ಭಾರತದ ದ್ವಿತೀಯ ನಾಯಕನೆನಿಸಿ ದರು. 1992ರಲ್ಲಿ ಮೊಹಮ್ಮದ್‌ ಅಜರುದ್ದೀನ್‌ ಈ ಸಾಧನೆ ಮಾಡಿದ್ದರು.
-ಭಾರತ 50 ಓವರ್‌ಗಳ ವಿಶ್ವಕಪ್‌ನಲ್ಲಿ ಪೂರ್ತಿ 50 ಓವರ್‌ ಆಡಿದ ವೇಳೆ ಅತೀ ಕಡಿಮೆ ರನ್‌ ಗಳಿಸಿತು (8ಕ್ಕೆ 224). ಪಾಕಿಸ್ಥಾನ ವಿರುದ್ಧದ 1999ರ ಮ್ಯಾಂಚೆಸ್ಟರ್‌ ಪಂದ್ಯದಲ್ಲಿ 6ಕ್ಕೆ 227 ರನ್‌ ಗಳಿಸಿದ್ದು ಹಿಂದಿನ ದಾಖಲೆ.
-2013ರ ಬಳಿಕ ಏಶ್ಯದ ಆಚೆ ಭಾರತದ 5 ವಿಕೆಟ್‌ಗಳು ಸ್ಪಿನ್ನಿಗೆ ಉರುಳಿದವು. ಅಂದು ಕಿಂಗ್‌ಸ್ಟನ್‌ ಏಕದಿನ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ ಭಾರತದ 5 ವಿಕೆಟ್‌ ಹಾರಿಸಿದ್ದರು.
-ಧೋನಿ “ಲಿಸ್ಟ್‌ ಎ’ ಕ್ರಿಕೆಟ್‌ನಲ್ಲಿ ಅತ್ಯಧಿಕ 140 ಸ್ಟಂಪಿಂಗ್‌ ನಡೆಸಿ ಮೊಯಿನ್‌ ಖಾನ್‌ ದಾಖಲೆಯನ್ನು ಅಳಿಸಿ ಹಾಕಿದರು (139).
-ಧೋನಿ ಕೇವಲ 2ನೇ ಸಲ ಸ್ಟಂಪ್ಡ್ ಆದರು. ಎರಡೂ ವಿಶ್ವಕಪ್‌ನಲ್ಲೇ ಎಂಬುದು ಕಾಕತಾಳೀಯ. ಇದಕ್ಕೂ ಮುನ್ನ 2011ರ ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯದಲ್ಲಿ ದೇವೇಂದ್ರ ಬಿಶೂ ಭಾರತೀಯ ಸ್ಟಂಪರ್‌ನನ್ನು ಸ್ಟಂಪ್ಡ್ ಮಾಡಿದ್ದರು.

“ಅಂತಿಮ ಓವರ್‌ನಲ್ಲಿ ಯೋಚನೆಗೆ ಅವಕಾಶವೇ ಇರುವುದಿಲ್ಲ. ಇಲ್ಲಿ ನಮ್ಮ ಕೌಶಲವನ್ನು ಕಾರ್ಯರೂಪಕ್ಕೆ ಇಳಿಸುವುದೊಂದೇ ದಾರಿ. ವಿಶೇಷ ಪ್ರಯೋಗಕ್ಕಿಳಿದರೆ ರನ್‌ ಸೋರಿಹೋಗುವ ಸಾಧ್ಯತೆ ಇರುತ್ತದೆ. ಬ್ಯಾಟ್ಸ್‌ಮನ್‌ ಯೋಜನೆ ಏನಿರಬಹುದು ಎಂಬುದನ್ನು ತಿಳಿದುಕೊಳ್ಳುವ ಬದಲು ನನ್ನ ಯೋಜನೆಯನ್ನು ಕಾರ್ಯರೂಪಕ್ಕಿಳಿಸುವುದು ಮುಖ್ಯವಾಗಿತ್ತು…

Advertisement

Udayavani is now on Telegram. Click here to join our channel and stay updated with the latest news.

Next