ಹೊಸದೆಹಲಿ: ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ನಲ್ಲಿ ಈಗ ಕೇವಲ ಮಳೆಯದ್ದೇ ಕಾರುಬಾರು. ಈಗಾಗಲೇ ನಾಲ್ಕು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದೆ. ಗುರುವಾರ ಭಾರತ ಮತ್ತು ನ್ಯೂಜಿಲ್ಯಾಂಡ್ ಪಂದ್ಯ ಮಳೆಯಿಂದಾಗಿ ರದ್ದಾದ ನಂತರ ಅಭಿಮಾನಿಗಳು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ನಾಟಿಂಗ್ ಹ್ಯಾಮ್ ನಲ್ಲಿ ಆಯೋಜನೆಗೊಂಡಿದ್ದ ಪಂದ್ಯ ಮಳೆಯಿಂದಾಗಿ ಒಂದೂ ಎಸೆತವನ್ನು ಕಾಣಲಿಲ್ಲ. ಸಂಪೂರ್ಣ ಮೈದಾನವನ್ನು ಟಾರ್ಪಾಲಿನಿಂದ ಹೊದಿಸದೆ ಕೇವಲ ಪಿಚ್ ಅನ್ನು ಮಾತ್ರ ನೀರು ಬೀಳದಂತೆ ಹೊದಿಕೆ ಹಾಕಲಾಗಿತ್ತು. ಇಷ್ಟು ದೊಡ್ಡ ಕೂಟವನ್ನು ಆಯೋಜನೆ ಮಾಡುವಾಗ ಮಳೆ ಬರುವ ಮುನ್ಸೂಚನೆ ಇದ್ದೂ ಸಂಪೂರ್ಣ ಮೈದಾನವನ್ನು ಟಾರ್ಪಾಲು ಹಾಸುವ ವ್ಯವಸ್ಥೆ ಮಾಡದ ಐಸಿಸಿಗೆ ಅಭಿಮಾನಿಗಳು ಹಿಡಿಶಾಪ ಹಾಕುತ್ತಿದ್ದಾರೆ.
ಟ್ವಿಟ್ಟರ್ ನಲ್ಲಿ #ShameOnICC ಎಂದು ಐಸಿಸಿಗೆ ಛೀಮಾರಿ ಹಾಕುತ್ತಿರುವ ಅಭಿಮಾನಿಗಳು ಕೊಲ್ಕತ್ತಾದ ಈಡನ್ ಗಾರ್ಡನ್ ನ ಚಿತ್ರ ಹಾಕಿ ಭಾರತದಲ್ಲಿ ಕ್ರೀಡಾಂಗಣ ಪೂರ್ತಿ ಕವರ್ ಮಾಡಲಾಗುತ್ತದೆ. ನಿಮಗಿಂತ ಬಿಸಿಸಿಐ ಉತ್ತಮವಾಗಿಕ್ರೀಡಾಕೂಟ ಆಯೋಜನೆ ಮಾಡುತ್ತದೆ ಎಂದು ಐಸಿಸಿಯನ್ನು ಜರೆಯುತ್ತಿದ್ದಾರೆ.
ಮತ್ತೊಬ್ಬರು ಟ್ವೀಟ್ ಮಾಡಿ ಐಸಿಸಿಗೆ ಧೋನಿಯ ಗ್ಲೌಸ್ ಕಾಣುತ್ತದೆ ಆದರೆ ಮೈದಾನದ ಅವಸ್ಥೆ ಕಾಣಿಸುವುದಿಲ್ಲ ಎಂದು ತಮ್ಮ ಸಿಟ್ಟು ಹೊರಹಾಕಿದ್ದಾರೆ. ಐಸಿಸಿ ಅಧಿಕಾರಿಗಳು ಅಮಲು ಪದಾರ್ಥ ಸೇವಿಸಿ ಇಂಗ್ಲೆಂಡ್ ನಲ್ಲಿ ಮಳೆಗಾಲದಲ್ಲಿ ಕೂಟ ವಿಶ್ವಕಪ್ ಕೂಟವನ್ನು ಆಯೊಜಿಸಿದ್ದಾರೆ ಎಂದಿದ್ದಾರೆ.
ಒಟ್ಟಾರೆ ಬಹುನಿರೀಕ್ಷಿತ ವಿಶ್ವಕಪ್ ಕೂಟದಲ್ಲಿ ಐಸಿಸಿಗೆ ಮಳೆಯೇ ದೊಡ್ಡ ತಲೆನೋವಾಗಿ ಕಾಡಿದೆ.