“ಶಂಭೋ ಶಿವ ಶಂಕರ’- ಹೀಗೊಂದು ಸಿನಿಮಾ ಆರಂಭವಾಗಿರೋದು ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಮೊದಲ ಹಂತವಾಗಿ ಚಿತ್ರದ ಆಡಿಯೋ ಬಿಡುಗಡೆ ಇತ್ತೀಚೆಗೆ ನಡೆದಿದೆ. ಈ ಚಿತ್ರವನ್ನು ವರ್ತೂರು ಮಂಜು ನಿರ್ಮಿಸಿದ್ದು, ಶಂಕರ್ ಕೋನಮಾನಹಳ್ಳಿ ನಿರ್ದೇಶನವಿದೆ. ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಹಾಗೂ ನಟ ವಸಿಷ್ಠ ಸಿಂಹ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭಕೋರಿದರು.
ಚಿತ್ರದ “ನಾಟಿಕೋಳಿ’ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶಂಕರ್, “ನಾನು ಕಿರುತೆರೆಯಲ್ಲಿ ಧಾರಾವಾಹಿಗಳನ್ನು ನಿರ್ದೇಶಿಸಿ ಅನುಭವವಿದ್ದವನು. ಹಿರಿತೆರೆಯಲ್ಲಿ ಇದು ಚೊಚ್ಚಲ ಚಿತ್ರ. ನನ್ನ ಕನಸಿಗೆ ಜೀವ ತುಂಬಿದ ನಿರ್ಮಾಪಕ, ತಂತ್ರಜ್ಞರಿಗೆ ಹಾಗೂ ಕಲಾವಿದರಿಗೆ ಧನ್ಯವಾದ’ ಎಂದರು.
“ಇದು ಮೂವರು ಹುಡುಗರ ಸುತ್ತ ನಡೆಯುವ ಕಥೆ. ನಾಯಕ ಹಾಗೂ ಆತನ ಇಬ್ಬರು ಸ್ನೇಹಿತರ ಸುತ್ತ ನಡೆಯುವ ಕಥೆಯಾಗಿದ್ದು, ಆ ಮೂವರು ಹುಡುಗರ ಹೆಸರನ್ನೇ ಚಿತ್ರದ ಟೈಟಲ್ ಆಗಿ ಇಡಲಾಗಿದೆ. ನಾಯಕ ಅಭಯ್ ಜೊತೆ ರೋಹಿತ್ ಹಾಗೂ ರಕ್ಷಕ್ ಕಾಣಿಸಿಕೊಳ್ಳುತ್ತಿದ್ದಾರೆ. “ಇದೊಂದು ಔಟ್ ಅಂಡ್ ಔಟ್ ಸಿನಿಮಾ. ಇಂದಿನ ಟ್ರೆಂಡ್ ಅನ್ನು ಗಮನದಲ್ಲಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಸಿನಿಮಾ ಮೂಡಿಬಂದಿರುವ ರೀತಿ ಇಡೀ ನಮ್ಮ ತಂಡಕ್ಕೆ ಖುಷಿಕೊಟ್ಟಿದೆ’ ಎನ್ನುವುದು ನಿರ್ದೇಶಕರ ಮಾತು.
ಇದನ್ನೂ ಓದಿ:ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆಗೆ ಡೇಟ್ ಫಿಕ್ಸ್?
ನನಗೆ ಅಭಿನಯ ಅಂದರೆ ಏನೆಂದು ಗೊತ್ತಿರಲಿಲ್ಲ. ನನಗೆ ಅಭಿನಯ ಕಲಿಸಿದ ನಿರ್ದೇಶಕರಿಗೆ ನಾನು ಆಭಾರಿ ಎನ್ನುವುದು ನಾಯಕ ಅಭಯ್ ಪುನೀತ್ ಮಾತು.
ನಾಯಕಿ ಸೋನಾಲ್ ಮಾಂಟೆರೊ, ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ರೋಹಿತ್ ಹಾಗೂ ರಕ್ಷಕ್ ತಮ್ಮ ಪಾತ್ರ ಪರಿಚಯ ಮಾಡಿಕೊಂಡರು. ಸಿನಿಮಾ ನಿರ್ಮಾಣದ ಬಗ್ಗೆ ವರ್ತೂರು ಮಂಜು, ಗೀತರಚನೆ ಕುರಿತು ಗೌಸ್ ಫೀರ್ ಹಾಗೂ ಸಂಗೀತದ ಬಗ್ಗೆ ಹಿತನ್ ಹಾಸನ್ ಮಾಹಿತಿ ನೀಡಿದರು