ದಾವಣಗೆರೆ: ‘ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ ಸಂಬಂಧ ರಾಜ್ಯ ಸರಕಾರ ಸೋಮವಾರ ಕೈಗೊಂಡ ತೀರ್ಮಾನ ಅನ್ಯಾಯದ ಪರಮಾವಧಿ” ಎಂದು ಅಖೀಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. “ಲಿಂಗಾಯತ ಮತ್ತು ವೀರ ಶೈವ ಲಿಂಗಾಯತರನ್ನು (ಬಸವಧರ್ಮ- ತಣ್ತೀಪಾಲಿಸುವ) ಧಾರ್ಮಿಕ ಅಲ್ಪಸಂಖ್ಯಾಕರೆಂದು ಮಾನ್ಯತೆ ನೀಡಬಹುದು ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಅನ್ಯಾಯ” ಎಂದು ವ್ಯಾಖ್ಯಾನಿಸಿದ್ದಾರೆ.
ಮಂಗಳವಾರ ತಮ್ಮ ನಿವಾಸದಲ್ಲಿ ರಂಭಾಪುರಿ, ಉಜ್ಜಯನಿ ಶ್ರೀಗಳು ಒಳಗೊಂಡಂತೆ ಇತರ ಮಠಾಧೀಶರು, ಮಹಾಸಭಾದ ಕೆಲವು ಪದಾಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದ ಅನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ವೀರಶೈವ ಮಹಾಸಭಾ ಹಿಂದಿನಿಂದಲೂ ವೀರಶೈವ- ಲಿಂಗಾಯತ ಒಂದೇ ಎಂಬ ಧೋರಣೆ ಹೊಂದಿದೆ. ಈ ಕ್ಷಣಕ್ಕೂ ವೀರಶೈವ-ಲಿಂಗಾಯತ ಒಂದೇ ಎಂಬುದಕ್ಕೆ ಮಹಾಸಭಾ ಬದ್ಧವಾಗಿದೆ. ಹಾಗಾಗಿ ಸರಕಾರದ ತೀರ್ಮಾನ ಒಪ್ಪಲಾಗದು” ಎಂದರು.
ರಾಜ್ಯ ಸರಕಾರದ ಶಿಫಾರಸಿನ ಬಗ್ಗೆ ಸಮಾಲೋಚಿಸಲು ಮಾ.23ರಂದು ಮಧ್ಯಾಹ್ನ 2ರಂದು ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಅಂದಿನ ಸಭೆಯಲ್ಲಿ ಶಿಫಾರಸಿನ ಬಗ್ಗೆ ಚರ್ಚಿಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು. ರಾಜ್ಯ ಸರಕಾರ ಮಹಾಸಭಾಕ್ಕೇನೂ ಕೇಳಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿ ನಾಯಕರಿಗೆ ವರಿಷ್ಠರ ಸೂಚನೆ: ರಾಜ್ಯ ಸರ್ಕಾರದ ಕ್ರಮದ ಬಗ್ಗೆ ತಕ್ಷಣಕ್ಕೆ ಹೆಚ್ಚು ಮಾತನಾಡದಂತೆ ಬಿಜೆಪಿ ವರಿಷ್ಠರು ಸೂಚಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ತೀರಾ ಜಾಣ್ಮೆಯಿಂದ ಈ ಕ್ರಮ ಕೈಗೊಂಡಿದ್ದು, ಇದೊಂದು ಸೂಕ್ಷ್ಮ ವಿಚಾರವಾದ್ದರಿಂದ ರಾಜಕೀಯವಾಗಿಯೇ ತಿರುಗೇಟು ನೀಡಬೇಕಾಗುತ್ತದೆ. ಹೀಗಾಗಿ ಸದ್ಯಕ್ಕೆ ಸುಮ್ಮನಿರಿ ಎಂದು ಸಂದೇಶ ರವಾನಿಸಿದ್ದಾರೆ.
ಅಂತರ ಕಾಯ್ದುಕೊಳ್ಳಲು ನಿರ್ಧಾರ
ವೀರಶೈವ ಲಿಂಗಾಯತ ಧರ್ಮದ ಕುರಿತು ಅಂತರ ಕಾಯ್ದುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಲಿಂಗಾಯತ-ವೀರಶೈವ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿರುವುದು ರಾಜ್ಯ ಸರಕಾರ ತೆಗೆದುಕೊಂಡಿರುವ ತೀರ್ಮಾನ. ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಎಂದು ಬೇರ್ಪಡಿಸಿ ಸಮಾಜ ಒಡೆಯಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವುದರಿಂದ ವಿವಾದದಿಂದ ದೂರ ಇರುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಪಕ್ಷ ಬಂದಿದೆ ಎಂದು ಹೇಳಲಾಗಿದೆ.