ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್ ಮಂಜು ಈಗ ಮತ್ತೂಂದು ಸಿನಿಮಾಗೆ ಕೈ ಹಾಕಿದ್ದಾರೆ. ಇತ್ತೀಚೆಗಷ್ಟೇ “ರಿಸರ್ವೇಷನ್’ ಎಂಬ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ ಬೆನ್ನಲ್ಲೇ ಅವರು ಹೊಸದೊಂದು ಕಥೆ ಹಿಡಿದು ಸಿನಿಮಾಗೆ ಅಣಿಯಾಗಿದ್ದಾರೆ. ಆ ಚಿತ್ರಕ್ಕೆ “ಶಾಲಿನಿ ಐಎಎಸ್’ ಎಂದು ಹೆಸರಿಟ್ಟಿದ್ದಾರೆ. ಇದು ಐಎಎಸ್ ಅಧಿಕಾರಿ ಶಾಲಿನಿ ರಜನೀಶ್ ದಂಪತಿ ಕುರಿತ ಕಥೆ. ಅಂದಹಾಗೆ, ಶಾಲಿನಿ ರಜನೀಶ್ ದಂಪತಿ ಬರೆದ “ಐಎಎಸ್ ದಂಪತಿ ಕನಸುಗಳು’ ಪುಸ್ತಕವನ್ನು ಆಧರಿಸಿ ಈ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ ನಿಖಿಲ್ ಮಂಜು.
“ಹಳ್ಳಿಯಿಂದ ಬಂದವರು, ತಮ್ಮ ಮಾತೃಭಾಷೆಯಲ್ಲೇ ಐಎಎಸ್ ಮಾಡಿ ಹೇಗೆ ಸಾಧನೆ ಮಾಡಿದ್ದಾರೆ ಮತ್ತು ಆ ಕುರಿತ ಪರಿಸರವನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗುತ್ತದೆ. ಇದರೊಂದಿಗೆ ಅಂಗಾಂಗ ದಾನ ವಿಷಯವೂ ಇಲ್ಲಿ ಹೇಳಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಅಂಗಾಂಗ ದಾನ ಯಾವುದೇ ಪ್ರಯೋಜಕ್ಕೆ ಬರುತ್ತಿಲ್ಲ. ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದ್ದರೂ ಸಹ, ಆ ಯೋಜನೆ ಯಶಸ್ಸು ಆಗದೇ ಇರುವುದಕ್ಕೆ ಕಾರಣ ಏನೆಂಬ ವಿಷಯಗಳೂ ಇಲ್ಲಿವೆ.
ಒಂದು ಸಂದೇಶದೊಂದಿಗೆ ಒಂದಷ್ಟು ಮನಕಲಕುವ ಅಂಶಗಳು ಇಲ್ಲಿರಲಿವೆ. ಸಾಮಾಜಿಕ ಕಳಕಳಿಯೂ ಇಲ್ಲಿರಲಿದೆ’ ಎಂದು ವಿವರ ಕೊಡುತ್ತಾರೆ ನಿಖಿಲ್ ಮಂಜು. ಚಿತ್ರಕ್ಕೆ ಸಮೀರ್ ಕುಲಕರ್ಣಿ ಸಂಗೀತವಿದೆ. ವಿ. ಮನೋಹರ್ ಸಾಹಿತ್ಯವಿದೆ. 1+1+=11 ಎಂಬ ಬ್ಯಾನರ್‌ನಡಿ ನಾಲ್ವರು ಗೆಳೆಯರ ಜತೆಗೂಡಿ ನಿಖಿಲ್ ಮಂಜು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಯಮುನಾ (ಯಾನರಾಜ್) ಎಂಬುವವರು ಶಾಲಿನಿ ಪಾತ್ರ ನಿರ್ವಹಿಸುತ್ತಿದ್ದಾರೆ.
ಸದ್ಯಕ್ಕೆ ಯಾನರಾಜ್ ಅವರು ಯುಎಸ್‌ನಲ್ಲಿದ್ದಾರೆ. ಅವರ ಸುತ್ತವೇ ಸಿನಿಮಾ ಕಥೆ ಸಾಗಲಿದೆ. ಜೂನ್ 18 ರಂದು 10 ಗಂಟೆಗೆ ಗಾಂಧಿಭವನದಲ್ಲಿ “ಶಾಲಿನಿ ಐಎಎಸ್’ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಅಂಗಾಂಗ ದಾನ ಕುರಿತ ಸಣ್ಣ ಟ್ರೇಲರ್ ಕೂಡ ಅಂದು ರಿಲೀಸ್ ಮಾಡಲಾಗುತ್ತಿದೆ. ಚಿತ್ರಕ್ಕೆ ಸ್ವಾಮಿ ಕ್ಯಾಮೆರಾ ಹಿಡಿದರೆ, ಆದಿತ್ಯ ಸಂಕಲನ ಮಾಡುತ್ತಿದ್ದಾರೆ. ಈ ಹಿಂದೆ ನಿಖಿಲ್ ಮಂಜು ಅವರ ಜತೆ ಕೆಲಸ ಮಾಡಿದ ಬಹುತೇಕ ತಂತ್ರಜ್ಞರೇ ಇಲ್ಲೂ ಕೆಲಸ ಮಾಡಲಿದ್ದಾರೆ. ಜುಲೈ ಮೊದಲ ವಾರದಿಂದ ಚಿತ್ರೀಕರಣ ಶುರುವಾಗಲಿದೆ.