ಬೆಂಗಳೂರು: ಸಭಿಕರಿಂದ ತೂರಿಬಂದ ಪ್ರಶ್ನೆ ಪ್ರಶ್ನೆಗೆ ಥಟ್ಟನೆ ಉತ್ತರ. ಜೈನ ಧರ್ಮದ ಶ್ಲೋಕ, ಭಗವದ್ಗೀತೆ, ಕುರಾನ್, ಬೈಬಲ್, ಗುರುಗ್ರಂಥ ಸಾಹೀಬ್ ಧರ್ಮ ಗ್ರಂಥಗಳಲ್ಲಿನ ಯಾವುದೇ ಸಾಲು, ಸಂದೇಶ, ಶ್ಲೋಕದ ಬಗ್ಗೆ ಕೇಳಿದರೂ ಕ್ಷಣಾರ್ಧದಲ್ಲಿ ಉಲ್ಲೇಖ. ಯಾವುದೇ ವಿಚಾರವನ್ನು ಯಾವುದೇ ಭಾಷೆಯಲ್ಲಿ ಕೇಳಿದರೂ ನಿರರ್ಗಳವಾಗಿ ಹೊಮ್ಮಿದ ಉಪನ್ಯಾಸ…
– ಇದು ಬೆಂಗಳೂರಿನ ಅರಮನೆ ಮೈದಾನಲ್ಲಿ ಭಾನುವಾರ ನಡೆದ “ಬೃಹತ್ ಬಾಲಶತಾವಧ’ ಕಾರ್ಯಕ್ರಮದಲ್ಲಿ ಬಾಲ ಜೈನಿ ಮುನಿಗಳಾದ ನಮಿಚಂದ್ರ ಸಾಗರ್ ಹಾಗೂ ನೇಮಿಚಂದ್ರಸಾಗರ್ ಅವರ ಪಾಂಡಿತ್ಯದ ಇಣುಕು ನೋಟ. ರಾಜಾಜಿನಗರದ ನಾಕೋಡಾ ಪಾರ್ಶ್ವನಾಥ ಜೈನ್ ಶ್ವೇತಾಂಬರ್ ಮಂದಿರ ಟ್ರಸ್ಟ್ ವತಿಯಿಂದ ಅರಮನೆ ಮೈದಾನದಲ್ಲಿ ಭಾನುವಾರ ಬಾಲ ಜೈನ ಮುನಿಗಳಾದ ನಮಿಚಂದ್ರಸಾಗರ್ ಮತ್ತು ನೇಮಿಚಂದ್ರಸಾಗರ್ ಬಾಲ ಮುನಿಗಳ “ಬೃಹತ್ ಬಾಲಶತಾವಧ’ ಕಾರ್ಯಕ್ರಮ ನಡೆಯಿತು. ಇಬ್ಬರು ಬಾಲ ಮುನಿಗಳು ಗಣಿತಶಾಸ್ತ್ರ ಸೇರಿದಂತೆ ಸಂಕೀರ್ಣ ಸವಾಲುಗಳನ್ನು ಭೇದಿಸುವ ಮೂಲಕ ತಮ್ಮ ಜ್ಞಾನ, ಭಾಷಾ, ಸ್ಮರಣ ಶಕ್ತಿಯ ಪಾಂಡಿತ್ಯವನ್ನು ಪ್ರದರ್ಶಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಪಾಲ ವಜುಭಾಯಿ ವಾಲಾ ಅವರು ಇಬ್ಬರು ಬಾಲ ಮುನಿಗಳನ್ನು ಸನ್ಮಾನಿಸಿ ಶತಾವಧ ಸ್ಮರಣಿಗೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಪುಸ್ತಕವನ್ನು ಓದಿ ಜ್ಞಾನಾರ್ಜನೆ ಹೊಂದುವುದು ಮುಖ್ಯವಲ್ಲ. ಆ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾರ್ಥಕತೆ ಸಾಧಿಸಬೇಕು. ಸತ್ಯ, ಅಹಿಂಸೆ, ನಿಗ್ರಹ, ಬ್ರಹ್ಮಚರ್ಯಾ ಜೈನ ಧರ್ಮದ ತತ್ವಸಿದ್ದಾಂತಗಳಾಗಿದ್ದು, ಸಾಧನೆಗೆ ಅವು ದಾರಿದೀಪಗಳು. ಶತಮಾನಗಳ ಹಿಂದೆ ಜೈನ ಧರ್ಮದ ಭಗವಾನ್ ಮಹಾವೀರ ನೀಡಿದ ಸಂದೇಶಗಳು ಇಂದಿಗೂ ಪ್ರಸ್ತುತವಾಗಿದ್ದು, ಅವರ ಧರ್ಮದ ಸಂದೇಶಗಳನ್ನು ವಿಶ್ವಕ್ಕೆ ತಿಳಿಸುವ ಕಾರ್ಯ ನಡೆಯಬೇಕಾಗಿದೆ ಎಂದರು.
ಅಖೀಲ ಭಾರತ ಭಯೋತ್ಪಾದನಾ ವಿರೋಧಿ ಮಂಚ್‌ನ ಮನೀಂದರ್‌ಜಿತ್ ಸಿಂಗ್ ಬಿಟ್ಟಾ ಮಾತನಾಡಿ, ಜೈನ ಮುನಿಗಳು ನಡೆಸುವ ತ್ಯಾಗದಿಂದ ದೇಶಕ್ಕೆ ರಕ್ಷಣೆ ಸಿಗುತ್ತಿದೆ. ಅವರ ತ್ಯಾಗ ನಮಗೆ ಪ್ರೇರಣೆಯಾಗಲಿದ್ದು, ಆತ್ಮಬಲ ಹೆಚ್ಚಿಸುತ್ತದೆ ಎಂದು ತಿಳಿಸಿದರು.
ಗುಜರಾತ್‌ನ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಮಾತನಾಡಿ, ವಿದ್ಯಾದೇವತೆ ಸರಸ್ವತಿಯ ಆಶೀರ್ವಾದದಿಂದ ಈ ಅವಿಸ್ಮರಣೀಯ ಕಾರ್ಯವಾಗಿದೆ. ಈ ಇಬ್ಬರು ಬಾಲಮುನಿಗಳು ನೂರಾರು ಜನರ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಜ್ಞಾನ, ಪಾಂಡಿತ್ಯವನ್ನು ಹತ್ತನೇ ವಯಸ್ಸಿನಲ್ಲಿಯೇ ಸಂಪಾದಿಸಿರುವುದು ಅದ್ಭುತ ಸಾಧನೆ ಎಂದರು.
ಬಾಲ ಶತಾವಧಾನಿಗಳ ಗುರುಗಳಾದ ಅಭಿನಂದನ ಚಂದ್ರಸಾಗರ ಗುರುಗಳು ಉಪಸ್ಥಿತರಿದ್ದರು.
ಯಾರು ಬಾಲ ಮುನಿಗಳು:
ಗುಜರಾತಿನ ಸೂರತ್ ನಗರದ ನಿವಾಸಿಗಳಾದ ಪಿಯೂಷ್ ಭಾಯ್ ಮತ್ತು ಸೋನಲ್‌ಬೆನ್ ಎಂಬುವರ ಅವಳಿ ಮಕ್ಕಳಾಗಿರುವ ನಮಿಚಂದ್ರಸಾಗರ್ ಮತ್ತು ನೇಮಿಚಂದ್ರಸಾಗರ್ ಎರಡು ವರ್ಷ ಗುರುಕುಲದಲ್ಲಿ ಅಭ್ಯಾಸ ನಡೆಸಿ ತಮ್ಮ ಒಂಭತ್ತನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದಾರೆ. 2017ರ ಮೇ ತಿಂಗಳಿಂದ ಈ ಬಾಲ ಮುನಿಗಳು ಮೊಬೈಲ್ ಬಳಕೆ ಹಾಗೂ ಕೃತಕ ಬೆಳಕಿನಿಂದ ದೂರವಿದ್ದು, ಸೂರ್ಯಾಸ್ತದ ಬಳಿಕ ಯಾವುದೇ ಆಹಾರ ಸ್ವೀಕರಿಸುವುದಿಲ್ಲ. ಈ ಜೈನ ಮುನಿಗಳು ಗುಜರಾತ್‌ನ ಸೂರತ್‌ನಿಂದ ಬೆಂಗಳೂರಿಗೆ ಕಾಲ್ನಡಿಗೆಯಲ್ಲೇ ಬಂದಿದ್ದಾರೆ. ಶತಾವಧಾನ ಅಂದರೆ ಒಂದೇ ಸಮಯದಲ್ಲಿ ನೂರು ವಸ್ತುಗಳ ಬಗ್ಗೆ ಗಮನ ಕೊಡುವುದು ಎಂದರ್ಥ.