Advertisement

“ಶಕ್ತಿಮಾನ್‌’ಭಾರತ

11:16 PM Mar 27, 2019 | mahesh |

ವಿಜ್ಞಾನ, ತಂತ್ರಜ್ಞಾನ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಒಂದೊಂದೇ ಸಾಧನೆಗಳನ್ನು ಮಾಡುತ್ತ ಜಾಗತಿಕ ಭೂಪಟದಲ್ಲಿ ತನ್ನದೇ ಛಾಪನ್ನು ಒತ್ತಿರುವ ಭಾರತ ಬುಧವಾರ ಅಂತರಿಕ್ಷ ವಲಯದಲ್ಲಿ ಮಹತ್ತರ ಮೈಲು ಗಲ್ಲನ್ನು ಸ್ಥಾಪಿಸಿದೆ. ಉಪಗ್ರಹ ನಾಶಕ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಇಂಥ ಮಹಾನ್‌ ಸಾಧನೆಗೈದ ವಿಶ್ವದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕ, ರಷ್ಯ ಮತ್ತು ಚೀನ ದೇಶಗಳು ಈ ಸಾಧನೆಯನ್ನು ಮಾಡಿದ್ದವು. ಇದೀಗ ಸ್ವಸಾಮರ್ಥಯದ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿನ ಸೂಪರ್‌ ಪವರ್‌ ರಾಷ್ಟ್ರಗಳ ಸಾಲಿಗೆ ಸೇರಿದೆ.

Advertisement

ಬುಧವಾರ ಬೆಳಗ್ಗೆ ಪ್ರಧಾನಿ ಕಾರ್ಯಾಲಯ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೂರ್ವಾಹ್ನ ಗಂಟೆ 11.45-12ರ ಅವಧಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದು ದೇಶದ ಜನತೆಗೆ ಮಹತ್ವದ ಸಂದೇಶವೊಂದನ್ನು ನೀಡಲಿರುವರು ಎಂದು ತಿಳಿಸಿ ಜನತೆಯಲ್ಲಿ ಕುತೂಹಲ ಮೂಡಿಸಿತು. ಸಾಮಾಜಿಕ ಜಾಲತಾಣಗಳು ಮತ್ತು ಟಿ.ವಿ. ವಾಹಿನಿಗಳಲ್ಲಿ ಈ ಸುದ್ದಿ ಬಿತ್ತರಗೊಳ್ಳುತ್ತಿದ್ದಂತೆಯೇ ದೇಶಾದ್ಯಂತ ಜನರು ಬಹಳ ನಿರೀಕ್ಷೆಯಲ್ಲಿ ಟಿ.ವಿ.ವಾಹಿನಿಗಳ ಮುಂದೆ ಕಾದು ಕುಳಿತರೆ ಯುವಜನರಂತೂ ಸಾಮಾಜಿಕ ಜಾಲ ತಾಣಗಳನ್ನು ಜಾಲಾಡತೊಡಗಿದರು. ಆದರೆ ಪ್ರಧಾನಿ ಕಾರ್ಯಾಲಯ ನೀಡಿದ್ದ ಸಮಯದ ಗಡುವು ದಾಟಿದರೂ ಪ್ರಧಾನಿಯವರ ಭಾಷಣ ಆರಂಭವಾಗದಿದ್ದಾಗ ಜನತೆಯ ಕಾತರ, ಕುತೂಹಲ ಇನ್ನಷ್ಟು ಹೆಚ್ಚಾಗತೊಡಗಿತು. ಮಧ್ಯಾಹ್ನ ಗಂಟೆ 12. 20ರ ಸುಮಾರಿಗೆ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿ ಬಾಹ್ಯಾಕಾಶ ಕ್ಷೇತ್ರದಲ್ಲಿ ದೇಶಗೈದಿರುವ ಸಾಧನೆಯನ್ನು ತೆರೆದಿಟ್ಟರು. ಬುಧವಾರ ಬೆಳಗ್ಗೆ ಎ-ಸ್ಯಾಟ್‌ ಕ್ಷಿಪಣಿಯನ್ನು ಬಳಸಿ ಬಾಹ್ಯಾಕಾಶದಲ್ಲಿ ಸಕ್ರಿಯವಾಗಿದ್ದ ಉಪ್ರಗಹವೊಂದನ್ನು ಹೊಡೆದುರುಳಿಸಲಾಗಿದೆ ಎಂದು ಘೋಷಿಸಿದರು. ಒಡಿಶಾದ ಬಾಲಸೋರ್‌ನಲ್ಲಿರುವ ಡಿಆರ್‌ಡಿಒ ಪರೀಕ್ಷಾ ಕೇಂದ್ರದಿಂದ ಈ ಕ್ಷಿಪಣಿಯನ್ನು ಹಾರಿಬಿಡಲಾಗಿತ್ತು. ಪರೀಕ್ಷೆ ಯಶಸ್ವಿಯಾದ ಕುರಿತು ದೃಢೀಕರಣ ಲಭಿಸುವುದು ತಡವಾಗಿದ್ದರಿಂದ ಮೋದಿ ಅವರ ಭಾಷಣವೂ ವಿಳಂಬವಾಯಿತು. ಈ ಮೂಲಕ ದೇಶದ ಭದ್ರತೆಗೆ ಅಪಾಯಕಾರಿಯಾದ ಶತ್ರು ರಾಷ್ಟ್ರದ ಬೇಹುಗಾರಿಕೆ ಅಥವಾ ಕಣ್ಗಾವಲು ಉಪಗ್ರಹವನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಭಾರತ ಹೊಂದಿದಂತಾಗಿದೆ. ಭಾರತೀಯ ರಕ್ಷಣಾ ಮತ್ತು ಸಂಶೋಧನ ಸಂಸ್ಥೆಯು “ಮಿಷನ್‌ ಶಕ್ತಿ’ ಹೆಸರಿನಲ್ಲಿ ಈ ಉಪಗ್ರಹ ನಾಶಕ ಕ್ಷಿಪಣಿಯ ಪರೀಕ್ಷೆಯನ್ನು ನಡೆಸಿದೆ. ಲೋ ಅರ್ಥ್ ಆರ್ಬಿಟ್‌ ಅಂದರೆ ಬಾಹ್ಯಾಕಾಶದಲ್ಲಿ ಸುಮಾರು 300 ಕಿ.ಮೀ. ಗಳಷ್ಟು ದೂರದಲ್ಲಿ ಕೆಳಸ್ತರದ ಕಕ್ಷೆಯಲ್ಲಿ ಸುತ್ತುವ ಉಪಗ್ರಹವನ್ನು ಹೊಡೆದುರುಳಿಸುವಲ್ಲಿ ಕ್ಷಿಪಣಿ ಯಶಸ್ವಿಯಾಗಿದೆ. ಇದರೊಂದಿಗೆ ಯಾವುದೇ ತೆರನಾಗಿಯೂ ನಮ್ನನ್ನು ಕೀಳಂದಾಜಿಸದಂತೆ ಮತ್ತು ಎಲ್ಲ ಬಗೆಯ ಸವಾಲುಗಳನ್ನು ಎದುರಿಸಲು ಸಿದ್ಧ ಎಂದು ಶತ್ರುರಾಷ್ಟ್ರಗಳಿಗೆ ಸ್ಪಷ್ಟ ಸಂದೇಶವನ್ನು ಭಾರತ ರವಾನಿಸಿದಂತಾಗಿದೆ.

ಡಿಆರ್‌ಡಿಒ ಈ ಪರೀಕ್ಷೆಯನ್ನು ಕೇವಲ 3 ನಿಮಿಷಗಳಲ್ಲಿ ಮುಗಿಸಿದ್ದೂ ಒಂದು ಸಾಧನೆಯೇ. ಅಷ್ಟು ಮಾತ್ರವಲ್ಲದೆ ಇಂಥ ಸಂಶೋಧನೆ, ಪರೀಕ್ಷೆಗೆ ಇತರ ರಾಷ್ಟ್ರಗಳು ಭಾರೀ ವೆಚ್ಚವನ್ನು ಮಾಡಿದ್ದರೆ ಡಿಆರ್‌ಡಿಒ ಅತೀ ಕಡಿಮೆ ವೆಚ್ಚದಲ್ಲಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿ ಯಶಸ್ವಿಯಾಗಿ ಪ್ರಯೋಗಿಸಿದೆ. ಅಂತರಿಕ್ಷ ಕ್ಷೇತ್ರದ ಇತರ ಮೂರು ಸೂಪರ್‌ ಪವರ್‌ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಈ ಸಾಧನೆ ಒಂದು ದಾಖಲೆಯೇ ಸರಿ. ಈ ಪರೀಕ್ಷೆಗೆ ಭಾರತ ಗುರಿಯಾಗಿಸಿಕೊಂಡ ಉಪಗ್ರಹ ಕೂಡಾ ಯಾವುದೇ ಶತ್ರು ರಾಷ್ಟ್ರಕ್ಕೆ ಸೇರಿದ್ದಾಗಿರದೇ ಸೇವೆಯನ್ನು ಸ್ಥಗಿತಗೊಳಿಸಿದ್ದ ಭಾರತದ್ದೇ ಹಳೆಯದಾದ ಸಕ್ರಿಯ ಉಪಗ್ರಹವಾಗಿತ್ತು ಎಂಬುದಂತೂ ಗಮನಾರ್ಹ.

ದೇಶದ ಈ ಅಮೋಘ ಸಾಧನೆಯನ್ನು ಘೋಷಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಈ ಸಾಧನೆ ನಮ್ಮ ರಕ್ಷಣೆ ಮತ್ತು ಸುರಕ್ಷತೆಯ ದೃಷ್ಟಿಯಿಂದಲೇ ಹೊರತು ಇತರ ಯಾವುದೇ ದೇಶದ ವಿರುದ್ಧವಲ್ಲ ಎಂದು ಸ್ಪಷ್ಟಪಡಿಸುವ ಮೂಲಕ ವಿಶ್ವ ಸಮುದಾಯಕ್ಕೆ ತನ್ನ ಉದ್ದೇಶವನ್ನು ಸ್ಪಷ್ಟಪಡಿಸಿದೆ. ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆಯಿಂದ ಯಾವುದೇ ಅಂತಾರಾಷ್ಟ್ರೀಯ ಕಾನೂನು ಅಥವಾ ಒಪ್ಪಂದವನ್ನಾಗಲೀ ಭಾರತ ಉಲ್ಲಂ ಸಿಲ್ಲ. ಭಾರತ ಎಂದೂ ಯುದ್ಧದ ವಾತಾವರಣವನ್ನು ಸೃಷ್ಟಿಸದು. ದೇಶದ ಅಭಿವೃದ್ಧಿ ಮತ್ತು ಭದ್ರತೆಯನ್ನು ಗಮನದಲ್ಲಿರಿಸಿ ಈ ಪರೀಕ್ಷೆಯನ್ನು ನಡೆಸಲಾಗಿದ್ದು ಈ ಬಗ್ಗೆ ವಿಶ್ವ ಸಮುದಾಯ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ಹೇಳಿದಂತೆ ಬಲಿಷ್ಠ ಮತ್ತು ಸಮೃದ್ಧ ಭಾರತದ ನಿರ್ಮಾಣದ ದಿಶೆಯಲ್ಲಿ ಉಪಗ್ರಹ ನಾಶಕ ಕ್ಷಿಪಣಿಯ ಪರೀಕ್ಷೆ ಅಭಿನಂದನಾರ್ಹ ಉಪಕ್ರಮವೇ ಸರಿ. ದೇಶ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವಾಗ ಇಂಥ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅನಿವಾರ್ಯತೆ ಪ್ರತಿ ರಾಷ್ಟ್ರದ್ದಾಗಿರುತ್ತದೆ. ಶಾಂತಿ, ಸುರಕ್ಷತೆ ವಿಷಯದಲ್ಲಿ ದೇಶ ಮಾತ್ರವಲ್ಲದೇ ವಿಶ್ವ ಸಮುದಾಯದ ಹಿತದೃಷ್ಟಿಯಿಂದಲೂ ಮಹತ್ವದ ನಡೆ ಎನ್ನಬಹುದು.

Advertisement

Udayavani is now on Telegram. Click here to join our channel and stay updated with the latest news.

Next