ಮುಂಬಯಿ: 90ರ ದಶಕದ ಮೆಚ್ಚಿನ ಧಾರಾವಾಹಿ, ಭಾರತದ ಸೂಪರ್ ಹೀರೋವೆಂದೇ ಕರೆಯಲ್ಪಡುತ್ತಿದ್ದ ʼಶಕ್ತಿಮಾನ್ʼ (Shaktimaan) ಮತ್ತೆ ಬರಲಿದೆ.
ಭಾರತದ ಮೊದಲ ಸೂಪರ್ ಹೀರೋ ʼಶಕ್ತಿಮಾನ್ʼ ಕಿರುತೆರೆ ಲೋಕದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿತ್ತು. ಹಲವು ವರ್ಷಗಳ ಕಾಲ ದೂರದರ್ಶನದಲ್ಲಿ ಪ್ರಸಾರ ಕಂಡ ʼಶಕ್ತಿಮಾನ್ʼ ಇಂದಿಗೂ ಅನೇಕರ ಬಾಲ್ಯ ಕಂಡ ಅದ್ಬುತವೆಂದರೆ ತಪ್ಪಾಗದು.
ಮುಕೇಶ್ ಖನ್ನಾ (Mukesh Khanna) ಸಮಾಜದಲ್ಲಿನ ಅನ್ಯಾಯವನ್ನು ಬಗೆಹರಿಸಲು ʼಶಕ್ತಿಮಾನ್ʼ ಅವತಾರದಲ್ಲಿ ಮಿಂಚಿದ್ದರು. ಈ ಧಾರಾವಾಹಿ ಅಂದಿನ ದಿನಗಳಲ್ಲಿ ಬಹಳ ಖ್ಯಾತಿಯನ್ನು ಗಳಿಸಿತ್ತು.
ಇದೀಗ ʼಶಕ್ತಿಮಾನ್ʼ ಮತ್ತೆ ಸ್ಕ್ರೀನ್ ಮೇಲೆ ಬರಲಿದೆ. ಅವನು ಹಿಂತಿರುಗುವ ಸಮಯ ಬಂದಿದೆ. ನಮ್ಮ ಮೊದಲ ಭಾರತೀಯ ಸೂಪರ್ ಟೀಚರ್- ಸೂಪರ್ ಹೀರೋ. ಇಂದಿನ ಮಕ್ಕಳ ಮೇಲೆ ಕತ್ತಲೆ ಮತ್ತು ದುಷ್ಟತನ ಮೇಲುಗೈ ಸಾಧಿಸಿದೆ. ಇಂದಿನ ಪೀಳಿಗೆಗೆ ಅವನು ಸಂದೇಶದೊಂದಿಗೆ ಹಿಂತಿರುಗುತ್ತಿದ್ದಾನೆ. ಅವನು ಬೋಧನೆಯೊಂದಿಗೆ ಹಿಂತಿರುಗುತ್ತಿದ್ದಾನೆ ಎಂದು ಮುಕೇಶ್ ಖನ್ನಾ ಅವರು ಟೀಸರ್ ಹಂಚಿಕೊಂಡಿದ್ದಾರೆ.
ʼಶಕ್ತಿಮಾನ್ʼ ನಲ್ಲಿನ ಹಳೆಯ ದೃಶ್ಯಗಳನ್ನು ತೋರಿಸಲಾಗಿದ್ದು, ಆ ಬಳಿಕ ಕೊನೆಯಲ್ಲಿ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಭಾಷ್ ಚಂದ್ರ ಬೋಸ್ ಮುಂತಾದ ಸ್ವಾತಂತ್ರ್ಯ ಹೋರಾಟಗಾರರನ್ನು ʼಶಕ್ತಿಮಾನ್ʼ ನೋಡುವುದನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
ಈ ಬಾರಿ ʼಶಕ್ತಿಮಾನ್ʼ ಮುಕೇಶ್ ಖನ್ನಾ ಅವರ ಭೀಷ್ಮ್ ಇಂಟರ್ನ್ಯಾಷನಲ್ ಯೂಟ್ಯೂಬ್ ಚಾನೆಲ್ ಪ್ರಸಾರವಾಗಲಿದೆ. ವೆಬ್ ಸರಣಿ ರೂಪದಲ್ಲಿ ಬರಲಿದೆಯೋ ಅಥವಾ ಧಾರಾವಾಹಿ ರೂಪದಲ್ಲಿ ಬರಲಿದೆಯೋ ಎನ್ನುವುದನ್ನು ಸಸ್ಪೆನ್ಸ್ ಆಗಿ ಇಡಲಾಗಿದೆ.
ʼಶಕ್ತಿಮಾನ್ʼ ಕಾರ್ಯಕ್ರಮವು ಮೂಲತಃ ದೂರದರ್ಶನದಲ್ಲಿ 1997 ರಲ್ಲಿ ಪ್ರಸಾರವಾಯಿತು ಮತ್ತು 450 ಕ್ಕೂ ಹೆಚ್ಚು ಸಂಚಿಕೆಗಳು ಪ್ರಸಾರ ಕಂಡಿತು. ʼಶಕ್ತಿಮಾನ್ʼಗೆ ದಿನಕರ್ ಜಾನಿ ನಿರ್ದೇಶನವಿತ್ತು.
ಅಂದಹಾಗೆ ʼಶಕ್ತಿಮಾನ್ʼ ಸಿನಿಮಾವಾಗಿ ಬರಲಿದೆ ಎನ್ನಲಾಗಿತ್ತು. ರಣ್ವೀರ್ ಸಿಂಗ್ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಆದಾದ ಬಳಿಕ ಸಿನಿಮಾದ ಬಗ್ಗೆ ಯಾವ ಅಪ್ಡೇಟ್ ಹೂರ ಬಿದ್ದಿರಲಿಲ್ಲ.