ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿಯಾದ ಬಳಿಕ ಪ್ರಯಾಣಿಕರ ದಟ್ಟಣೆ ವಿಪರೀತವಾಗಿ ಏರಿಕೆಗೊಂಡಿರುವ ಪರಿಣಾಮ ಜಿಲ್ಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲಾದ್ಯಂತ ವಿವಿಧ ಮಾರ್ಗಗಳಲ್ಲಿ ಹೊಸ ಬಸ್ ಸಂಚಾರ ಆರಂಭಿಸಲು ಕೆಎಸ್‌ಆರ್‌ಟಿಸಿಗೆ ಬರೋಬ್ಬರಿ 140 ಹೆಚ್ಚುವರಿ ಬಸ್‌ಗಳಿಗೆ ಬೇಡಿಕೆ ಬಂದಿದೆಯಂತೆ.
ಹೌದು, ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವ ಅದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಇದರ ಪರಿಣಾಮ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದ್ದು, ದಿನದಿಂದ ದಿನಕ್ಕೆ ಹೊಸ ಮಾರ್ಗಗಳಲ್ಲಿ ಬಸ್ ಸಂಚರಿಸುವಂತೆ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ಅಧಿಕಾರಿಗಳಿಗೆ ಒತ್ತಡ ಬರುತ್ತಲೇ ಇದೆ.
ಸದ್ಯ 566 ಬಸ್, 89 ಲಕ್ಷ ದಿನ ಗಳಿಕೆ: ಜಿಲ್ಲೆಯಲ್ಲಿ ಸದ್ಯ ಕೆಎಸ್‌ಆರ್‌ಟಿಸಿ ವಿಭಾಗದಲ್ಲಿ ಪ್ರಸ್ತುತ 523 ಮಾರ್ಗಗಳಲ್ಲಿ 566 ಬಸ್‌ಗಳು ಪ್ರತಿನಿತ್ಯ ಒಟ್ಟು 1.96 ಲಕ್ಷ ಕಿ.ಮೀ ಕ್ರಮಿಸುತ್ತಿವೆ. ನಿತ್ಯ ಸರಾಸರಿ 89.70 ಲಕ್ಷ ರೂ. ಆದಾಯವನ್ನು ಗಳಿಸುತ್ತಿವೆ. ನಿತ್ಯ ಸರಾಸರಿ 2.03 ಲಕ್ಷ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದೆ. ಅದರಲ್ಲೂ 20 ಸಾವಿರಕ್ಕೂ ಅಧಿಕ ಶಾಲಾ, ಕಾಲೇಜು ವಿದ್ಯಾರ್ಥಿಗಳಿದ್ದಾರೆ. ಆದರೆ ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿದೆ. ಹಾಲಿ ಕಾರ್ಯಾಚರಣೆಯಲ್ಲಿರುವ ಬಸ್ ಗಳ ಓಡಾಟ ಪ್ರಯಾಣಿಕರಿಗೆ ಸಾಲುತ್ತಿಲ್ಲ. ಹೀಗಾಗಿ ಹೆಚ್ಚುವರಿಯಾಗಿ ಕೆಎಸ್‌ಆರ್‌ಟಿಸಿ ಘಟಕಕ್ಕೆ 140 ಬಸ್ ಗಳಿಗೆ ಬೇಡಿಕೆ ಇದೆ. ಸದ್ಯಕ್ಕೆ ಕೆಎಸ್‌ಆರ್‌ಟಿಸಿ ವಿಭಾಗೀಯ ಘಟಕ ಹಳೆಯ ಬಸ್‌ಗಳನ್ನು ಪುನಃ ದುರಸ್ತಿಗೊಳಿಸಿ ಬಳಸುತ್ತಿವೆ. ಆದರೆ ಅವು ಪ್ರಯಾಣಿಕರ ಸುರಕ್ಷತೆಗೆ ಯೋಗ್ಯವಲ್ಲ ಎಂಬ ಕಾರಣಕ್ಕೆ ಜಿಲ್ಲೆಗೆ ಒಟ್ಟು 140 ಕ್ಕೂ ಹೆಚ್ಚು ಬಸ್‌ಗಳಿಗೆ ಬೇಡಿಕೆ ಇದ್ದು, ರಾಜ್ಯದ ಕೆಎಸ್‌ಆರ್‌ಟಿಸಿ ನಿಗಮ ಜಿಲ್ಲೆಗೆ ಹಂತ ಹಂತವಾಗಿ ಹೊಸ ಬಸ್‌ಗಳನ್ನು ಕೊಡುವ ನಿರೀಕ್ಷೆಯನ್ನು ಸ್ಥಳೀಯ ನಿಗಮದ ಅಧಿಕಾರಿಗಳು ಹೊಂದಿದ್ದಾರೆ.
ವರ್ಷಾಂತ್ಯಕ್ಕೆ 20.01 ಲಕ್ಷ ಪ್ರಯಾಣಿಕರು ಪ್ರಯಾಣ: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ಮಹಿಳೆಯರಿಗೆ ಕರ್ನಾಟಕದ ಸಾರಿಗೆ ಸಂಸ್ಥೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ಶಕ್ತಿ ಯೋಜನೆಯಡಿ ಕಳೆದ 2023 ಡಿಸೆಂಬರ್ 31 ರವರೆಗೆ ಜಿಲ್ಲಾದ್ಯಂತ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಬರೋಬ್ಬರಿ 20.01 ಲಕ್ಷ ಮಹಿಳೆಯರು ವಿವಿಧ ಕಡೆಗಳಲ್ಲಿ ಟಿಕೆಟ್ ರಹಿತವಾಗಿ ಉಚಿತ ಪ್ರಯಾಣ ಮಾಡಿದ್ದಾರೆ. ಅಂದಾಜು ಒಟ್ಟು 70.84 ಕೋಟಿ ಹಣ ಸಾರಿಗೆ ಸಂಸ್ಥೆಗೆ ಸರ್ಕಾರ ಇಲ್ಲಿವರೆಗೂ ಜಮೆ ಮಾಡಿದೆ ಎಂದು ತಿಳಿದು ಬಂದಿದೆ.
ಜಿಲ್ಲೆಯಲ್ಲಿ ಶಕ್ತಿ ಯೋಜನೆ ಜಾರಿ ಬಳಿಕ ಪ್ರಯಾಣಿಕರ ದಟ್ಟಣೆ ಕೆಎಸ್‌ಆರ್‌ಟಿಸಿ ಬಸ್ ಗಳಲ್ಲಿ ಹೆಚ್ಚಾಗಿದೆ. ಜಿಲ್ಲೆಗೆ ಹೆಚ್ಚುವರಿ 140ಕ್ಕೂ ಅಧಿಕ ಬಸ್‌ಗಳ ಅಗತ್ಯವಾಗಿವೆ. ಜಿಲ್ಲೆಯಲ್ಲಿ ಪ್ರತಿ ನಿತ್ಯ 2 ಲಕ್ಷಕ್ಕೂ ಅಧಿಕ ಪ್ರಯಾಣಿಕರು ನಿತ್ಯ ಪ್ರಯಾಣಿಸುತ್ತಾರೆ. ಸುಮಾರು 1 ಲಕ್ಷ ಮಹಿಳಾ ಪ್ರಯಾಣಿಕರು ಪ್ರಯಾಣಿಸುತ್ತಾರೆ. ಶಕ್ತಿ ಯೋಜನೆ ಜಾರಿ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುವರ ಸಂಖ್ಯೆ ಹೆಚ್ಚಾಗಿದೆ. ಕೆಲವು ಮಾರ್ಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಒತ್ತಾಯ ಕೇಳಿ ಬರುತ್ತಿದೆ.
-ಹಿಮವರ್ಧನ ನಾಯ್ದು ಅಲ್ಲೂರಿ, ಕೆಎಸ್‌ಆರ್ ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
■ ಕಾಗತಿ ನಾಗರಾಜಪ್ಪ