Advertisement

Shakti Scheme: ಬಸ್‌ಗಳ ರಾಷ್ಟ್ರೀಕರಣ ಕಲ್ಪನೆ ನಿಜ ಮಾಡಿದ ಶಕ್ತಿಯೋಜನೆ!

04:27 PM Nov 27, 2023 | Team Udayavani |

ರಾಮನಗರ: 1969ರಲ್ಲಿ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣ ಮಾಡಿದ್ದ ಅಂದಿನ ಪ್ರಧಾನಿ ಇಂದಿರಾಗಾಂಧಿ ಸಂಚಾರ ಸಾರಿಗೆ ಯನ್ನು ರಾಷ್ಟ್ರೀಕರಣ ಮಾಡಲು ಮುಂದಾಗಿದ್ದರು. ಆದರೆ, ಅದು ಕೈಗೂಡಲಿಲ್ಲ, ಇದೀಗ ರಾಜ್ಯ ಸರ್ಕಾರ ಶಕ್ತಿ ಯೋಜನೆಯನ್ನು ಜಾರಿಗೆ ತರುವ ಮೂಲಕ ಪರೋಕ್ಷವಾಗಿ ಬಸ್‌ಗಳ ರಾಷ್ಟ್ರೀಕರಣ ಮಾಡಿದೆಯಾ..?

Advertisement

ಶಕ್ತಿ ಯೋಜನೆ ಜಾರಿಗೆ ಬಂದ ಬಳಿಕ ಬೆಂಗ ಳೂರು- ಕೊಳ್ಳೆಗಾಲ- ಮಹದೇಶ್ವರ ಬೆಟ್ಟದ ಮಾರ್ಗದಲ್ಲಿ ಸಂಚರಿಸುತ್ತಿದ್ದ ನೂರಾರು ಬಸ್‌ಗಳು ಏಕಾಏಕಿ ಸಂಚಾರ ಸ್ತಬ್ಧಗೊಳಿ ಸಿದ್ದು, ಹಿಂದೆ ಕೇಂದ್ರ ಸರ್ಕಾರ ಸಾಕಷ್ಟು ಕಸರತ್ತು ನಡೆಸಿದ್ದ ಸಂಚಾರ ಸಾರಿಗೆ ರಾಷ್ಟ್ರೀಕರಣ ಇದೀಗ ಶಕ್ತಿಯೋಜನೆಯಿಂದ ಸಾಧ್ಯವಾಗಿದೆಯಾ ಎಂಬ ಪ್ರಶ್ನೆ ಮೂಡಿದೆ.

ಸಂಚಾರ ನಿಲ್ಲಿಸಿದ ಖಾಸಗಿ ಬಸ್‌ಗಳು: ಕೊಳ್ಳೆಗಾಲ ಮತ್ತು ಬೆಂಗಳೂರು ನಡುವೆ ಮಳವಳ್ಳಿ, ಮದ್ದೂರು, ಚನ್ನಪಟ್ಟಪ್ಟಣ, ರಾಮನಗರ ಮಾರ್ಗವಾಗಿ 250ಕ್ಕೂ ಹೆಚ್ಚು ಖಾಸಗಿ ಬಸ್‌ಗಳಿಗೆ ಪರ್ಮೀಟ್‌ ನೀಡಲಾಗಿತ್ತು. ಈ ಮಾರ್ಗ ದಲ್ಲಿ ಶಕ್ತಿ ಯೋಜನೆ ಜಾರಿಗೂ ಮುನ್ನಾ 180ರಿಂದ 200 ಬಸ್‌ ಗಳು ಸಂಚರಿಸುತ್ತಿದ್ದವು. ಇದರಲ್ಲಿ ಉದಯರಂಗ ಸಂಸ್ಥೆಯ ಬಸ್‌ ಸುಮಾರು 100ರಷ್ಟಿತ್ತು. ಉಳಿದಂತೆ ಚನ್ನ ಪಟ್ಟಣದಿಂದ, ರಾಮನಗರದಿಂದ ಬೆಂಗಳೂರಿಗೆ ತೆರಳಲು 50 ಬಸ್‌ಗಳಿಗೆ ಪರ್ಮಿಟ್‌ ಇದ್ದು ಪ್ರತಿದಿನ 40 ಬಸ್‌ಗಳು ಸಂಚರಿ ಸುತ್ತಿದ್ದವು. ಮಾಗಡಿಯಿಂದ ಬೆಂಗಳೂರಿಗೆ 150 ಖಾಸಗಿ ಬಸ್‌ಗಳು ಸಂಚ ರಿಸುತಿತ್ತು. ಶೇ.80ರಷ್ಟು ಬಸ್‌ಗಳು ಸಂಚಾರ ನಿಲ್ಲಿಸಿವೆ.

ತಿರುಗಾಡುತ್ತಿರುವುದು ಬೆರಳೆಣಿಕೆ ಬಸ್‌ಗಳು: ಶಕ್ತಿಯೋಜನೆ ಜಾರಿಯಾದ ಬಳಿಕ ಮಹಿಳಾ ಪ್ರಯಾಣಿಕರು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸಲು ಪ್ರಾರಂಭಿಸಿದ್ದು, ಖಾಸಗಿ ಬಸ್‌ಗಳತ್ತ ಮುಖ ಮಾಡುತ್ತಿಲ್ಲ. ಖಾಸಗಿ ಬಸ್‌ಗೂ ಸಾರಿಗೆ ಸಂಸ್ಥೆ ಬಸ್‌ಗೂ ಪ್ರಯಾಣದರ ಸ್ವಲ್ಪ ಕಡಿಮೆ ಎಂಬ ಕಾರಣಕ್ಕೆ ಬಡ ಮತ್ತು ಮಧ್ಯಮವರ್ಗದ ಮಹಿಳೆಯರು ಖಾಸಗಿ ಬಸ್‌ನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದೀಗ ಕೆಎಸ್‌ಆರ್‌ಟಿಸಿಯಲ್ಲಿ ಪೂರ್ತಿ ಉಚಿತವಾಗಿರುವ ಕಾರಣ ಯಾರೂ ಖಾಸಗಿ ಬಸ್‌ನತ್ತ ಮುಖ ಮಾಡುತ್ತಿಲ್ಲ. ಇದರಿಂದಾಗಿ ಕೊಳ್ಳೆಗಾಲ- ಬೆಂಗಳೂರ ಮಾರ್ಗವಾಗಿ ಸಂಚರಿಸುತ್ತಿದ್ದ 200 ಬಸ್‌ಗಳಲ್ಲಿ ಇದೀಗ ಸಂಚಾರ ಮಾಡುತ್ತಿರುವುದು ಕೇವಲ 18ರಿಂದ 20 ಬಸ್‌ಗಳು. ಚನ್ನಪಟ್ಟಣ, ರಾಮನಗರದಿಂದ ಹೊರಡುತ್ತಿದ್ದ 40ಕ್ಕೂ ಹೆಚ್ಚು ಬಸ್‌ಗಳಲ್ಲಿ ಸಂಚಾರ ಮಾಡುತ್ತಿರುವುದು 5ರಿಂದ 6. ಮಾಗಡಿ-ಬೆಂಗಳೂರು ಮಾರ್ಗ ವಾಗಿ ಸಂಚರಿಸುತ್ತಿದ್ದ ಬಸ್‌ ಗಳಲ್ಲಿ ಪ್ರಸ್ತುತ ಸಂಚಾರ ಮಾಡುತ್ತಿದ್ದ 150 ಬಸ್‌ಗಳ ಪೈಕಿ ಇದೀಗ ಸಂಚಾರ ಮಾಡುತ್ತಿರುವುದು ಕೇವಲ 40 ಬಸ್‌ಗಳು.

ತೆರಿಗೆ ಕಟ್ಟಲು ಹಣವಿಲ್ಲ : ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿಯಾಗಿರುವ ಶಕ್ತಿಯೋಜನೆ ಖಾಸಗಿ ಬಸ್‌ಗಳನ್ನು ನಿಶಕ್ತಿ ಗೊಳಿಸಿದೆ. ಬಸ್‌ಗಳು ಪ್ರಯಾಣಿಕರಿಲ್ಲದೆ ಖಾಲಿ ನಿಂತಿದ್ದು, ಖಾಸಗಿ ಬಸ್‌ಗಳು ಪ್ರತಿ 3 ತಿಂಗಳಿಗೊಮ್ಮೆ ಮಾರ್ಗ ದಲ್ಲಿ ಸಂಚರಿಸಿದರೆ 50 ಸಾವಿರ ರೂ.ಪ್ರವಾಸಿ ಕ್ಷೇತ್ರಗಳಿಗೆ ಸಂಚರಿಸಿದರೆ 70 ಸಾವಿರ ರೂ. ಸಾರಿಗೆ ಇಲಾಖೆಗೆ ತೆರಿಗೆಯಾಗಿ ಪಾವತಿಸಬೇಕಿದೆ. ಇದರೊಂದಿಗೆ ಪ್ರತಿ ವರ್ಷ 70 ಸಾವಿರ ರೂ. ನಿಂದ 1 ಲಕ್ಷ ರೂ. ವರೆಗೆ ವಿಮಾಕಂತು ಕಟ್ಟಬೇಕಿದ್ದು, ಈ ಹಣವನ್ನು ಭರಿಸಲು ಪರದಾಟುತ್ತಿವೆ. ಕೆಲ ಬಸ್‌ಗಳು ಖಾಸಗಿ ಸಮಾರಂಭಗಳಿಗೆ ಬಾಡಿಗೆಗೆ ತೆರಳುವುದಕ್ಕೆ ಸೀಮಿತವಾಗಿರುವ ಉದಾಹರಣೆಯೂ ಸಾಕಷ್ಟಿದೆ.

Advertisement

ಹಲವು ಮಂದಿಗೆ ಉದ್ಯೋಗ ನಷ್ಟ : ಪ್ರಯಾಣಿಕರು ಇಲ್ಲದೆ ಖಾಸಗಿ ಬಸ್‌ಗಳು ಸಂಕಷ್ಟಕ್ಕೆ ಸಿಲುಕಿದ್ದು, ನಿಂತಲ್ಲೇ ನಿಲ್ಲುವಂತಾಗಿದೆ. ಗ್ರಾಮೀಣ ಭಾಗಕ್ಕೂ ಖಾಸಗಿ ಬಸ್‌ ಗಳು ಸಂಚರಿಸಲಾಗುತ್ತಿಲ್ಲ. ಇನ್ನು ಚಾಲಕರು, ನಿರ್ವಾಹಕರು, ಕ್ಲೀನರ್‌ಗಳು, ಏಜೆಂಟ್‌ಗಳು ಹೀಗೆ ಒಂದು ಬಸ್‌ನಿಂದ 15ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ದೊರಕುತಿತ್ತು. ಖಾಸಗಿ ಬಸ್‌ಗಳನ್ನು ನಂಬಿ ಜೀವನ ನಡೆಸುತ್ತಿದ್ದ ಸಾವಿರಾರು ಮಂದಿ ಇದೀಗ ಉದ್ಯೋಗ ಕಳೆದುಕೊಂಡಿದ್ದಾರೆ. ಬಸ್‌ ಚಾಲಕರಾಗಿದ್ದವರು ಪೈಂಟಿಂಗ್‌ ಕೆಲಸಕ್ಕೆ ಹೋಗುತ್ತಿರುವ ಉದಾಹರಣೆಯೂ ಸಾಕಷ್ಟಿದೆ.

ಖಾಸಗಿ ಬಸ್‌ ಮಾಲಿಕರ ಬದುಕು ಸಂಕಷ್ಟದಲ್ಲಿದೆ. ಈಗಾಗಲೇ ರಾಜ್ಯದಲ್ಲಿ ಇಬ್ಬರು ಖಾಸಗಿ ಬಸ್‌ ಮಾಲಿಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಒಂದು ಕಾಲದಲ್ಲಿ ಹತ್ತಾರು ಕುಟುಂಬಗಳನ್ನು ಸಲಹುತ್ತಿದ್ದ ನಾವು, ಇಂದು ಬಸ್‌ಗೆ ತೆರಿಗೆ ಇನ್ಸೂರೆನ್ಸ್‌ ಕಟ್ಟಲು ಸಾಲ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಸಾಕಷ್ಟು ಬಸ್‌ಗಳು ನಿಂತಲ್ಲೇ ನಿಂತಿವೆ. ಶಕ್ತಿ ಯೋಜನೆ ಜಾರಿಯಾದ ಬಳಿಕ ಖಾಸಗಿ ಬಸ್‌ಗಳ ಮಾಲಿಕರು ಮತ್ತು ಕಾರ್ಮಿಕರ ಬದುಕು ಬೀದಿಗೆ ಬಂದಿದೆ. – ಗೋಪಾಲ್‌, ಖಾಸಗಿ ಬಸ್‌ ಮಾಲೀಕ

– ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next