ಹಾಸನ: ಶಕ್ತಿದೇವತೆ ಹಾಸನಾಂಬ ದೇವಾಲಯದ ಬಾಗಿಲನ್ನು ಗುರುವಾರ ಮಧ್ಯಾಹ್ನ ತೆರೆಯಲಾಯಿತು. ಮೊದಲ ದಿನ ಸಾರ್ವಜನಿಕರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಿಲ್ಲ. ಆದರೆ, ಶುಕ್ರವಾರ ಮುಂಜಾನೆಯಿಂದಲೇ ಭಕ್ತರಿಗೆ ದೇವಿಯ ದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡಲಾಗುವುದು.
ದೇವಾಲಯದ ಬಾಗಿಲು ತೆರೆಯುವ ವೇಳೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಉಪಸ್ಥಿತರಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಡಿ.ರೇವಣ್ಣ ಗೈರು ಹಾಜರಾಗಿದ್ದರು. ಮಧ್ಯಾಹ್ನ 12.40ಕ್ಕೆ ದೇವಾಲಯದ ಆವರಣದಲ್ಲಿ ತಳವಾರ ಸಮುದಾಯದ ನಂಜರಾಜೇ ಅರಸ್ ಅವರು ಬನ್ನಿ ಪತ್ರೆ ಮುಡಿದ ಬಾಳೆಕಂದನ್ನು ಕಡಿದುರುಳಿಸಿದರು.
ಬಳಿಕ, ಮಂಗಳವಾದ್ಯಗಳ ಘೋಷದೊಂದಿಗೆ ದೇವಿಯ ಗರ್ಭಗುಡಿಯ ಬಾಗಿಲು ತೆರೆಯಿತು. ಆ ವೇಳೆಗಾಗಲೇ ಅರ್ಚಕರು ದೇವರ ಪೂಜೆಗೆ ಅಣಿ ಮಾಡಿಕೊಂಡಿದ್ದು, ಬಾಗಿಲು ತೆರೆದ ನಂತರ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಚನ್ನಮ್ಮ ದಂಪತಿ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಅನಿತಾ ದಂಪತಿ
ಶುಕ್ರವಾರ ಹಾಸನಾಂಬೆಯ ದರ್ಶನ ಪಡೆಯಲಿದ್ದಾರೆ. ನ.9ರ ಮಧ್ಯಾಹ್ನ ದೇವಾಲಯದ ಬಾಗಿಲು ಮುಚ್ಚಲಾಗುವುದು. ಭಕ್ತರಿಗೆ ನ.9ರ ಮುಂಜಾನೆವರೆಗೆ ದೇವಿಯ ದರ್ಶನಕ್ಕೆ ಅವಕಾಶವಿರುತ್ತದೆ.