Advertisement

ಶರಣೆ ಅಕ್ಕಮಹಾದೇವಿ ಮನುಕುಲಕ್ಕೇ ಮಾದರಿ: ಸ್ವಾಮೀಜಿ

04:32 PM Mar 31, 2018 | |

ದಾವಣಗೆರೆ: ವೈರಾಗ್ಯದ ಪ್ರತೀಕವಾಗಿರುವ ಮಹಾನ್‌ ಶರಣೆ ಅಕ್ಕಮಹಾದೇವಿ ಮಹಿಳೆಯರಿಗೆ ಮಾತ್ರವಲ್ಲ, ಇಡೀ ಮನುಕುಲಕ್ಕೆ ಮಾದರಿ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ತಿಳಿಸಿದ್ದಾರೆ.

Advertisement

ಶುಕ್ರವಾರ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಶ್ರೀ ಅಕ್ಕಮಹಾದೇವಿ ಜಯಂತ್ಯುತ್ಸವ ಮತ್ತು ವಚನೋತ್ಸವದ ಮೊದಲ ದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪಾರಮಾರ್ಥಿಕ ಜೀವನವೇ ನಿಜವಾದ ಸುಖ ಎಂದು ಅಕ್ಕಮಹಾದೇವಿ ಅರಸೊತ್ತಿಗೆಯನ್ನೇ ಕಿತ್ತೂಗೆದವರು. ಅವರು ತುಳಿದ ವೈರಾಗ್ಯದ ಹಾದಿ ಸರ್ವರಿಗೆ ಮಾದರಿ ಎಂದರು.

ಇಂದಿಗೂ ಅನೇಕರು ಸುಖ, ಸಂಪತ್ತನ್ನು ಅರಸುತ್ತಾ ಸಾಗುತ್ತಾರೆ. ಆದರೆ, ಅಕ್ಕಮಹಾದೇವಿ ನಿರಾಯಾಸವಾಗಿ ಬಂದೊದಗಿದ ಅರಸೊತ್ತಿಗೆಯನ್ನು ಧಿಕ್ಕರಿಸಿ ಪಾರಮಾರ್ಥಿಕ ಸುಖ ಅರಸುತ್ತಾ ಸಾಗಿದವರು. ಅಂತಹ ಅಕ್ಕನ ಜೀವನ ನಿಜವಾಗಿಯೂ ಪ್ರತಿಯೊಬ್ಬರಿಗೆ ಪ್ರೇರಣಾದಾಯಕ ಎಂದು ತಿಳಿಸಿದರು. 

ಪ್ರತಿಯೊಬ್ಬರ ಜೀವನದಲ್ಲಿ ಸುಖ-ದುಃಖ ಇರುತ್ತವೆ. ದುಃಖವನ್ನು ಸಮರ್ಥವಾಗಿ ಎದುರಿಸುವಂತದ್ದನ್ನು ನಾವೆಲ್ಲರೂ ಅಕ್ಕಮಹಾದೇವಿಯಿಂದ ಕಲಿಯಬೇಕಿದೆ. ಮಹಾನ್‌ ಸಾಧನೆಯ ಮಾಡಿರುವ ಅಕ್ಕಮಹಾದೇವಿ ಜೀವನ ಮಾದರಿ ಎಂದು ಬಣ್ಣಿಸಿದರು.

ಯಾವುದೇ ರೀತಿಯ ಸಂಕಷ್ಟ ಎದುರಾದಾಗ ಗುಡಿ-ಗುಂಡಾಂತರ, ಜ್ಯೋತಿಷಿ, ಭವಿಷ್ಯ ಕೇಳುವುದು ಎಂದು ಸುತ್ತಾಡುವುದ ಬಿಟ್ಟು ಅಕ್ಕಮಹಾದೇವಿ ಜೀವನ ಚರಿತೆ, ವಚನಗಳ ಓದಿದರೆ ಸಾಕು. ಸಂಕಷ್ಟಗಳ ಸಮರ್ಥವಾಗಿ ಎದುರಿಸುವ ಮನೋಬಲ ಸಿಕ್ಕುತ್ತದೆ ಎಂದು ಕಿವಿಮಾತು ಹೇಳಿದರು. 

Advertisement

ಶ್ರೀ ಅಕ್ಕ ಪ್ರಶಸ್ತಿ ಸ್ವೀಕರಿಸಿದ ಅಕ್ಕಮಹಾದೇವಿ ನೇತ್ರದಾನ ಪ್ರೇರಣಾ ಸಮಿತಿ ಉಪಾಧ್ಯಕ್ಷೆ ಸರೋಜ ಮಹಾಲಿಂಗಪ್ಪ ಮುಂಡಾಸ ಮಾತನಾಡಿ, ಪ್ರಕೃತಿಯೇ ಮಹಿಳೆಯರಿಗೆ ನಿಸ್ವಾರ್ಥ ಸೇವೆ ಸಲ್ಲಿಸುವ ಶಕ್ತಿ ನೀಡಿದೆ. ಆ ಮನೋಬಲದಿಂದಲೇ ನೇತ್ರದಾನ ಪ್ರೇರಣಾ ಸಮಿತಿ ಉಪಾಧ್ಯಕ್ಷೆಯಾಗಿ ಕೆಲಸ ಮಾಡಲು ಸಾಧ್ಯವಾಗುತ್ತಿದೆ. ಪ್ರತಿಯೊಬ್ಬರು ನೇತ್ರದಾನದ ಮೂಲಕ ಇತರರ ಬಾಳಲ್ಲಿ ಬೆಳಕಾಗಬೇಕು ಎಂದು ಮನವಿ ಮಾಡಿದರು.

ಶ್ರೀ ಅಕ್ಕಮಹಾದೇವಿ ಸಮಾಜದ ಅಧ್ಯಕ್ಷೆ ಕಂಚಿಕೇರಿ ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಶಿಕ್ಷಕಿ ನೀಲಗುಂದ ಜಯಮ್ಮ, ಉಮಾ ವೀರಭದ್ರಪ್ಪ ಇತರರು ಇದ್ದರು. ದೊಗ್ಗಳ್ಳಿ ಸುವರ್ಣ ಸ್ವಾಗತಿಸಿದರು. ಪುಟ್ಟಮ್ಮ ಮಹಾರುದ್ರಯ್ಯ ನಿರೂಪಿಸಿದರು. ಐನಳ್ಳಿ ಪುಷ್ಪ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next