Advertisement

ಖಾಸಗಿ ಬಸ್‌ಗಳಿಗೆ ಸಂಕಷ್ಟ ತಂದ ಶಕ್ತಿಯೋಜನೆ!

03:45 PM Jun 14, 2023 | Team Udayavani |

ಕುದೂರು: ಶಕ್ತಿಯೋಜನೆ ಒಂದೆಡೆ ಜನರಿಗೆ ಸಂತಸ ಮೂಡಿಸಿದರೆ, ಖಾಸಗಿ ಬಸ್‌ಗಳಿಗೆ ಸಂಕಷ್ಟ ತಂದೊಡ್ಡಿದೆ. ನಿತ್ಯ ಬಸ್‌ ತುಂಬಾ ಪ್ರಯಾಣಿಕರನ್ನು ನೋಡುತ್ತಿದ್ದ ಖಾಸಗಿ ಬಸ್‌ ಚಾಲಕ, ನಿರ್ವಾಹಕರ ಆದಾಯಕ್ಕೆ ಶಕ್ತಿ ಯೋಜನೆಯಿಂದ ಕತ್ತರಿ ಬೀಳುವ ಆಂತಕದಲ್ಲಿದ್ದಾರೆ.

Advertisement

ಕುದೂರಿನಿಂದ, ತುಮಕೂರು, ಬೆಂಗಳೂರಿಗೆ ಖಾಸಗಿ ಬಸ್‌ಗಳು ಪ್ರತಿನಿತ್ಯ ಸಂಚರಿಸುತ್ತಿದ್ದು, ಕಳೆದ ಮೂರು ದಿನಗಳಿಂದ ಪ್ರಯಾಣಿಕರಿಲ್ಲದೆ ಬಸ್‌ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಜನರು ಖಾಸಗಿ ಬಸ್‌ ಬಿಟ್ಟು ಸರ್ಕಾರಿ ಬಸ್‌ಗಳಲ್ಲಿ ಉಚಿತವೆಂದು ಅದರಲ್ಲಿಯೇ ಓಡಾಡುತ್ತಿರುವುದರಿಂದ ಖಾಸಗಿ ಬಸ್‌ ಗೆ ಆರ್ಥಿಕವಾಗಿ ಹೊಡೆತ ಬಿದ್ದಿದೆ. ಖಾಸಗಿ ಬಸ್‌ ಅವಲಂಬಿಸಿದ ಜನರು ಕೆಎಸ್‌ಆರ್‌ ಟಿಸಿ ಬಸ್‌ಗಳತ್ತ ಮುಖ ಮಾಡಿದ್ದು, ಖಾಸಗಿ ಬಸ್‌ ಮಾಲೀಕರು, ಏಜೆಂಟರ್‌ಗಳಿಗೆ ಸಂಕಷ್ಟ ಎದುರಾಗಿದೆ. ಒಂದು ಟ್ರಿಪ್ಪಿಗೆ 1500ದಿಂದ 2000 ರೂ. ಸಂಪಾದಿಸುತ್ತಿದ್ದ ಗ್ರಾಮಾಂತರ ಖಾಸಗಿ ಬಸ್‌, ದಿಢೀರನೇ 500ರಿಂದ 600 ರೂ.ಆದಾಯ ಇಳಿದಿದೆ. ಸರ್ಕಾರಿ ಬಸ್‌ ಸೌಲಭ್ಯ ಇಲ್ಲದ ಕಡೆಗೆ ಮಾತ್ರ ಜನರು ಖಾಸಗಿ ಬಸ್‌ಗಳನ್ನು ಆಶ್ರಯಿಸಿದ್ದಾರೆ.

ಪ್ರಯಾಣಿಕರು ತುಂಬಾ ಕಡಿಮೆ: ಖಾಸಗಿ ಬಸ್‌ ಏಜೆಂ ಟ್‌ ಶಿವಶಂಕರ್‌ ಮಾತನಾಡಿ, ಶಕ್ತಿಯೋಜನೆಯಿಂದ ಖಾಸಗಿ ಬಸ್‌ ಪೂರ್ತಿ ಖಾಲಿಯಾಗಿ ಓಡಾಡುತ್ತಿದೆ. ಮಹಿಳಾ ಪ್ರಯಾಣಿಕರು ತುಂಬಾ ಕಡಿಮೆ ಯಾಗಿದ್ದಾರೆ. ಮಹಿಳೆಯರಿಂದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುವ ಪುರುಷರ ಸಂಖ್ಯೆಯೂ ಕಡಿಮೆಯಾಗಿದೆ. ಬಸ್‌ ಖಾಲಿಯಾಗಿ ಓಡಾಡುತ್ತಿರುವುದರಿಂದ ನಮ್ಮ ಜೀವನಕ್ಕೆ ಕಷ್ಟ ಆಗುತ್ತದೆ ಎಂದು ಅಳಲನ್ನು ತೋಡಿಕೊಂಡರು.

ಖಾಸಗಿ ಬಸ್‌ ಹತ್ತುತ್ತಿಲ್ಲ: ಖಾಸಗಿ ಬಸ್‌ ಚಾಲಕ ದಯಾನಂದ್‌ ಮಾತನಾಡಿ, ಶಕ್ತಿಯೋಜನೆಯಿಂದ ನಮ್ಮ ಕುಟುಂಬ ಬೀದಿಗೆ ಬರುವಷ್ಟು ತೊಂದರೆ ಯಾಗಿದೆ. ಸಿದ್ದರಾಮಯ್ಯ ನಮ್ಮ ಮೇಲೆ ಭಾರ ಹಾಕಿದ್ದಾರೆ. ಖಾಸಗಿ ಬಸ್‌ನವರು ನೇಣು ಹಾಕಿಕೊಳ್ಳುವ ಪರಿಸ್ಥಿತಿ ಬಂದಿದೆ. ಮಹಿಳೆಯರು ಯಾರೂ ಖಾಸಗಿ ಬಸ್‌ ಹತ್ತುತ್ತಿಲ್ಲ ಎಂದರು.

ಸಾರಿಗೆ ನಿರ್ವಹಣೆ ಖಾಸಗಿಯವರಿಗೆ ಹೊರೆ: ಖಾಸಗಿ ಬಸ್‌ ಕಂಡಕ್ಟರ್‌ ರಾಜಣ್ಣ ಮಾತನಾಡಿ, ಖಾಸಗಿಯವರಿಗೆ ಸರ್ಕಾರದ ಈ ಯೋಜನೆಯಿಂದ ಆರ್ಥಿಕ ನಷ್ಟವಾಗುತ್ತಿದೆ. ಹೆಣ್ಣುಮಕ್ಕಳೊಂದಿಗೆ ಪ್ರಯಾಣಿಸುವ ಕುಟುಂಬ ಗಳು ಪ್ರಯಾಣ ದರ ಉಳಿಸಲು ಸರ್ಕಾರಿ ಸಾರಿಗೆ ಯನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.ಡೀಸೆಲ್‌ ಬೆಲೆ ಹೆಚ್ಚಾಗುತ್ತಿದೆ. ಸಾರಿಗೆ ನಿರ್ವಹಣೆ ಖಾಸಗಿ ಯವರಿಗೆ ಹೊರೆಯಾದ ಇಂತಹ ಸಂದರ್ಭದಲ್ಲಿ ಪ್ರಯಾಣಿಕರ ಓಲೈಕೆಗಾಗಿ ಪ್ರಯಾಣ ಬೆಲೆ ಇಳಿಕೆ ಮಾಡಲು ಸಾಧ್ಯವಿಲ್ಲ ಎಂದರು.

Advertisement

ಖಾಸಗಿ ಬಸ್‌ ಮಾಲೀಕರು ಜೀವನ ನಿರ್ವಹಣೆಗೆ ದುಸ್ತರವಾಗಲಿದೆ. ನಮ್ಮತ್ತ ವಿಶೇಷ ಗಮನ ಹರಿಸಬೇಕು. ನಮ್ಮ ಅಳಲನ್ನು ಕೇಳಬೇಕೆಂಬ ಆಗ್ರಹ ಖಾಸಗಿ ಬಸ್‌ ಚಾಲಕ, ನಿರ್ವಾಹಕರಿಂದ ಕೇಳಿ ಬರುತ್ತಿದೆ.

ಸರ್ಕಾರಿ ಬಸ್‌ಗಳತ್ತ ವಾಲಿದ ಪ್ರಯಾಣಿಕರು : ನಿತ್ಯವು ಖಾಸಗಿ ಬಸ್‌ಗಳಲ್ಲಿ ಓಡಾಡುತ್ತಿದ್ದ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗುತ್ತಿದ್ದಂತೆ, ಭಾನುವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಬಸ್‌ಗಳನ್ನು ಹತ್ತಲು ದೌಡಾಯಿಸಿರುವುದು ಕಂಡು ಬಂತು. ನಿತ್ಯ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್‌ ಗಳಲ್ಲಿ ಅಷ್ಟಾಗಿ ಪ್ರಯಾಣಿಕರು ಕಂಡು ಬರಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next