Advertisement

ಯುಪಿಎಸ್‌ಸಿ ಫಲಿತಾಂಶ : ಬೆಳಗಾವಿಯ ಶಕೀರ ತೊಂಡಿಖಾನ್‌ಗೆ  583ನೇ ರ್‍ಯಾಂಕ್‌

01:41 PM Sep 25, 2021 | Team Udayavani |

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲೂಕಿನ ರಾಮಾಪುರ ಸೈಟ್‌ನ ಶಕೀರ ತೊಂಡಿಖಾನ್‌ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 583 ನೇ ರ್‍ಯಾಂಕ್‌ ಪಡೆಯುವ ಮೂಲಕ ತಮ್ಮ ಬಹು ದಿನಗಳ ಕನಸನ್ನು ನನಸು ಮಾಡಿಕೊಂಡಿದ್ದಾರೆ.

Advertisement

ಹುಕ್ಕೇರಿಯಲ್ಲಿ ಎಸ್‌ಎಸ್‌ಎಲ್‌ಸಿ ಓದಿದ್ದ 31 ವರ್ಷದ ಶಕೀರ ಅವರು ಆಗ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದರು. ನಂತರ ಬೆಳಗಾವಿಯ ಆರ್‌ಎಲ್‌ಎಸ್‌ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ಬೆಂಗಳೂರಿನ ಬಿಎಂಎಸ್‌ ಕಾಲೇಜಿನಲ್ಲಿ ಬಿಇ ಇಂಜನಿಯರಿಂಗ್‌ ಪದವಿಯನ್ನು ರ್‍ಯಾಂಕ್‌ ಗಳಿಸಿ ಮುಗಿಸಿದ್ದರು. ಕ್ಯಾಂಪಸ್‌ ಸಂದರ್ಶನದಲ್ಲಿ ಸ್ಯಾಮಸಂಗ್‌ ಕಂಪನಿಗೆ ಆಯ್ಕೆಯಾದ ಶಕೀರ ಈ ಕೆಲಸ ಬಿಟ್ಟು ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿದ್ದರು. ಸತತ ಅಧ್ಯಯನ ಹಾಗೂ ಗುರುಗಳ ಮಾರ್ಗದರ್ಶನದಿಂದ ಯುಪಿಎಸ್‌ಸಿ ಪಾಸ್‌ ಮಾಡಬೇಕು ಎಂಬ ಕನಸು ನನಸಾಯಿತು.

ಕೆಪಿಎಸ್‌ಸಿ ಯಲ್ಲಿ ಉತ್ತಮ ಅಂಕ ಗಳಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿದ್ದು ಶಕೀರ ಅವರು ನಂತರ ಮತ್ತೆ ಕೆಪಿಎಸ್‌ಸಿ ಪರೀಕ್ಷೆ ಬರೆದರು. ಪ್ರಸ್ತುತ ಹುಬ್ಬಳ್ಳಿಯ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆರಂಭದಲ್ಲಿ ದೆಹಲಿಯಲ್ಲಿ ತರಬೇತಿ ಪಡೆದುಕೊಂಡಿದ್ದೆ. ಆದರೆ ಹಿಂದಿನ ಅನುಭವಗಳು ನನಗೆ ಎಲ್ಲವನ್ನೂ ಕಲಿಸಿದವು. ಇದೇ ಕಾರಣದಿಂದ ನಾನು ಸ್ವತಃ ಸಿದ್ಧತೆ ಮಾಡಿಕೊಂಡಿದ್ದೆ. ಈ ಬಾರಿ ಒಳ್ಳೆಯ ಸಾಧನೆ ಮಾಡುವ ವಿಶ್ವಾಸ ಇತ್ತು. ನಮ್ಮ ಮೇಲೆ ನಮಗೆ ನಂಬಿಕೆ ಇರಬೇಕು. ಜೊತೆಗೆ ಪ್ರಯತ್ನವೂ ಇರಬೇಕು. ಇದರಿಂದ ಯಶಸ್ಸು ಸಿಗುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ ಎಂದು ಶಕೀರ ಹೇಳಿದರು. ಶಕೀರ ಅವರ ತಂದೆ ಅಕಬರಸಾಬ ತೊಂಡಿಖಾನ್‌ ಅವರು ಕೃಷಿ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next