Advertisement

ಶಕಿಬ್‌, ಬಾಂಗ್ಲಾ ಸರ್ವಾಧಿಕ ಮೊತ್ತ

03:45 AM Jan 14, 2017 | |

ವೆಲ್ಲಿಂಗ್ಟನ್‌: ನ್ಯೂಜಿಲ್ಯಾಂಡ್‌ ಎದುರಿನ ವೆಲ್ಲಿಂಗ್ಟನ್‌ ಟೆಸ್ಟ್‌ ಪಂದ್ಯದ 2ನೇ ದಿನ ಬಾಂಗ್ಲಾದೇಶ ಪ್ರಚಂಡ ಬ್ಯಾಟಿಂಗ್‌ ಪ್ರದರ್ಶನ ನೀಡಿದೆ. ಆಲ್‌ರೌಂಡರ್‌ ಶಕಿಬ್‌ ಅಲ್‌ ಹಸನ್‌ ಅವರ ಅಮೋಘ 217 ರನ್‌ ಹಾಗೂ ಕೀಪರ್‌ ಮುಶ್ಫಿಕರ್‌ ರಹೀಂ ಅವರ 159 ರನ್‌ ಸಾಹಸದಿಂದ 7 ವಿಕೆಟಿಗೆ 542 ರನ್‌ ಪೇರಿಸಿದೆ.

Advertisement

ಕಿವೀಸ್‌ ಎದುರು ಬಾಂಗ್ಲಾ ಐನೂರರ ಗಡಿ ದಾಟಿದ್ದು ಇದೇ ಮೊದಲು. ಸದ್ಯ ಇದು ಬಾಂಗ್ಲಾ ಟೆಸ್ಟ್‌ ಕ್ರಿಕೆಟಿನ 4ನೇ ಅತ್ಯಧಿಕ ಸ್ಕೋರ್‌ ಆಗಿದೆ. ಇನ್ನೂ 3 ವಿಕೆಟ್‌ ಕೈಲಿರುವುದರಿಂದ ಬಾಂಗ್ಲಾಕ್ಕೆ 2ನೇ ಅಥವಾ 3ನೇ ಅತ್ಯಧಿಕ ಮೊತ್ತವನ್ನು ಗಳಿಸುವ ಅವಕಾಶವಿದೆ. ಶ್ರೀಲಂಕಾ ಎದುರಿನ 2013ರ ಗಾಲೆ ಪಂದ್ಯದಲ್ಲಿ 638 ರನ್‌ ಪೇರಿಸಿದ್ದು ಬಾಂಗ್ಲಾದ ದಾಖಲೆ.

ಇದು ಎಡಗೈ ಆಟಗಾರ ಶಕಿಬ್‌ ಬಾರಿಸಿದ 4ನೇ ಶತಕ ಹಾಗೂ ಪ್ರಥಮ ದ್ವಿಶತಕವೆಂಬುದು ವಿಶೇಷ. ಅಷ್ಟೇ ಅಲ್ಲ, ಇದು ಬಾಂಗ್ಲಾದೇಶ ಟೆಸ್ಟ್‌ ಇತಿಹಾಸದಲ್ಲಿ ದಾಖಲಾದ ಸರ್ವಾಧಿಕ ವೈಯಕ್ತಿಕ ಗಳಿಕೆಯೂ ಹೌದು. ಪಾಕಿಸ್ಥಾನ ವಿರುದ್ಧದ 2015ರ ಖುಲಾ ಟೆಸ್ಟ್‌ನಲ್ಲಿ ತಮಿಮ್‌ ಇಕ್ಬಾಲ್‌ 206 ರನ್‌ ಹೊಡೆದದ್ದು ಈವರೆಗಿನ ಬಾಂಗ್ಲಾ ದಾಖಲೆ ಆಗಿತ್ತು. 276 ಎಸೆತ ನಿಭಾಯಿಸಿದ ಶಕಿಬ್‌ 31 ಬೌಂಡರಿ ಬಾರಿಸಿ ಮೆರೆದರು. ಮುಶ್ಫಿಕರ್‌ ರಹೀಂ 159 ರನ್ನಿಗೆ 276 ಎಸೆತ ಎದುರಿಸಿದರು. ಬಾರಿಸಿದ್ದು 23 ಬೌಂಡರಿ ಹಾಗೂ ಒಂದು ಸಿಕ್ಸರ್‌. ಇದು ರಹೀಂ ಅವರ 4ನೇ ಶತಕ.

ಶಕಿಬ್‌-ರಹೀಂ ಸೇರಿಕೊಂಡು 5ನೇ ವಿಕೆಟಿಗೆ 359 ರನ್‌ ಸೂರೆಗೈದರು. ಇದು ಟೆಸ್ಟ್‌ ಇತಿಹಾಸದಲ್ಲಿ 5ನೇ ವಿಕೆಟಿಗೆ ದಾಖಲಾದ 4ನೇ ಅತಿ ದೊಡ್ಡ ಜತೆಯಾಟ. ಹಾಗೆಯೇ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಬಾಂಗ್ಲಾ ಟೆಸ್ಟ್‌ ಚರಿತ್ರೆಯ ಅತಿ ದೊಡ್ಡ ಜತೆಯಾಟವೂ ಹೌದು.

ಬಾಂಗ್ಲಾದೇಶ 3ಕ್ಕೆ 154 ರನ್‌ ಗಳಿಸಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಶುಕ್ರವಾರದ ಆಟಕ್ಕೆ ಮಳೆ ಎದುರಾಗಲಿಲ್ಲ.

Advertisement

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ-7 ವಿಕೆಟಿಗೆ 542 (ಶಕಿಬ್‌ 217, ರಹೀಂ 159, ಮೊಮಿನುಲ್‌ 64, ತಮಿಮ್‌ 56, ವ್ಯಾಗ್ನರ್‌ 124ಕ್ಕೆ 3, ಬೌಲ್ಟ್ 121ಕ್ಕೆ 2, ಸೌಥಿ 144ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next