Advertisement

Shakhahaari Movie Review; ನಿಗೂಢ ಹಾದಿಯಲ್ಲಿ ಆಗಂತುಕ ನಡೆ

08:54 AM Feb 18, 2024 | Team Udayavani |

ಆತ ಮಲೆನಾಡಿನ ಸಣ್ಣ ಊರಿನಲ್ಲಿ ತನ್ನದೇ ಆದ ಖಾನಾವಳಿಯನ್ನು ನಡೆಸಿಕೊಂಡು ಬದುಕು ಕಟ್ಟಿಕೊಂಡಿರುವ ವ್ಯಕ್ತಿ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡು ಆರಾಮಾಗಿದ್ದ ಸುಬ್ಬಣ್ಣನ ಹೋಟೆಲ್‌ಗೆ ಅದೊಂದು ದಿನ ಪೊಲೀಸರಿಂದ ಗುಂಡೇಟಿನಿಂದ ಗಾಯಗೊಂಡು ತಪ್ಪಿಸಿಕೊಂಡಿರುವ ಆಗಂತುಕನೊಬ್ಬನ ಆಗಮನವಾಗುತ್ತದೆ. ಮೇಲ್ನೋಟಕ್ಕೆ ಒಳ್ಳೆಯವನೆಂದು ಅನಿಸುವ ಅಪರಿಚಿತನಿಗೆ ತನ್ನ ಹೋಟೆಲ್‌ ನಲ್ಲಿಯೇ ಪೊಲೀಸರ ಕಣ್ತಪ್ಪಿಸಿ ಆಶ್ರಯ ನೀಡುವ ಸುಬ್ಬಣ್ಣ, ಆತನ ಹಿನ್ನೆಲೆಯನ್ನು ಕೆದಕುತ್ತಾ ಹೋಗುತ್ತಾನೆ. ಅಲ್ಲಿಂದ ಕ್ರೈಂ ಕಥಾನಕವೊಂದು ಬಿಚ್ಚಿಕೊಳ್ಳುತ್ತ ಹೋಗುತ್ತದೆ. ಇದು ಈ ವಾರ ತೆರೆಗೆ ಬಂದಿರುವ “ಶಾಖಾಹಾರಿ’ ಸಿನಿಮಾದ ಆರಂಭದಲ್ಲಿ ಕಾಣುವ ಒಂದಷ್ಟು ದೃಶ್ಯಗಳು.

Advertisement

ಕೆಲ ಆಕಸ್ಮಿಕ ಘಟನೆಗಳು ಹೇಗೆ ಮುಗ್ಧನೊಬ್ಬನನ್ನು ಅಪರಾಧಿಯನ್ನಾಗಿ ಮಾಡುತ್ತದೆ. ತನ್ನ ಅಸ್ತಿತ್ವಕ್ಕಾಗಿ ಆತ ಹೇಗೆ ಹೋರಾಡುತ್ತಾನೆ ಎಂಬ ಎಳೆಯನ್ನು ಇಟ್ಟುಕೊಂಡು ಸಾಗುವ “ಶಾಖಾಹಾರಿ’ ಅಂತಿಮವಾಗಿ ಎಲ್ಲದಕ್ಕೂ ಒಂದು ತಾರ್ಕಿಕ ಅಂತ್ಯ ಕೊಡುತ್ತಾ ಕ್ಲೈಮ್ಯಾಕ್ಸ್‌ ಹಂತಕ್ಕೆ ಬಂದು ನಿಲ್ಲುತ್ತದೆ.

ಇವಿಷ್ಟು ಹೇಳಿದ ಮೇಲೆ ಇದೊಂದು ಸಸ್ಪೆನ್ಸ್‌ ಕಂ ಕ್ರೈಂ-ಥ್ರಿಲ್ಲರ್‌ ಸಿನಿಮಾ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮಲೆನಾಡಿನ ಸುಂದರ ಪರಿಸರದಲ್ಲಿ ತೆರೆದುಕೊಳ್ಳುವ “ಶಾಖಾಹಾರಿ’ ನಿಧಾನವಾಗಿ ನೋಡುಗರನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ. ಅದಕ್ಕೆ ಕಾರಣ ಸಿನಿಮಾದ ಕಥೆಯಲ್ಲಿರುವ ಸತ್ವ. ಅಚಾತುರ್ಯ ಘಟನೆ, ಅದರ ಹಿಂದಿನ ನಿಗೂಢ ಹುಡುಕಾಟದ ಸುತ್ತ ಸಾಗುವ “ಶಾಖಾಹಾರಿ’ ಅಲ್ಲಲ್ಲಿ ಅನಿರೀಕ್ಷಿತ ತಿರುವುಗಳನ್ನು ಪಡೆದುಕೊಂಡು ಕ್ಲೈಮ್ಯಾಕ್ಸ್‌ವರೆಗೂ ಕುತೂಹಲವನ್ನು ಉಳಿಸಿಕೊಳ್ಳುತ್ತದೆ. ಸಿನಿಮಾದ ಕಥೆಗೆ ತಕ್ಕಂತೆ ನಿರೂಪಣೆ, ಚಿತ್ರಕಥೆ ಕೊಂಚ ವೇಗ ಸಿಕ್ಕಿದ್ದರೆ, “ಶಾಖಾಹಾರಿ’ ಇನ್ನಷ್ಟು ಬೇಗ ಮತ್ತು ಪರಿಣಾಮಕಾರಿಯಾಗಿ ನೋಡುಗರ ಮನಮುಟ್ಟುವ ಸಾಧ್ಯತೆಗಳಿದ್ದವು. ಆದರೂ ಹೊಸತನದ ಕಥೆಯನ್ನು ಪ್ರೇಕ್ಷಕರ ಮುಂದಿಡಬೇಕೆಂಬ ಚಿತ್ರತಂಡದ ಪ್ರಯತ್ನ ಇಲ್ಲಿ ಸಫ‌ಲವಾಗಿದೆ ಎನ್ನಬಹುದು.

ಇನ್ನು ಇಡೀ ಸಿನಿಮಾವನ್ನು ತಮ್ಮ ಪಾತ್ರಗಳ ಮೇಲೆ ಕೊನೆವರೆಗೂ ಸಾಗಿಸಿದ ಕೀರ್ತಿ ನಟರಾದ ರಂಗಾಯಣ ರಘು ಮತ್ತು ಗೋಪಾಲಕೃಷ್ಣ ದೇಶಪಾಂಡೆ ಅವರಿಗೆ ಸೇರುತ್ತದೆ. ಅಡುಗೆ ಭಟ್ಟನಾಗಿ ರಂಗಾಯಣ ರಘು, ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿ ಗೋಪಾಲಕೃಷ್ಣ ದೇಶಪಾಂಡೆ ಅವರದ್ದು ಮನಮುಟ್ಟುವ ಅಭಿನಯ. ನವ ಪ್ರತಿಭೆಗಳಾದ ವಿನಯ್‌, ನಿಧಿ ಹೆಗ್ಡೆ ಮೊದಲ ಪ್ರಯತ್ನದಲ್ಲೇ ಗಮನ ಸೆಳೆದರೆ, ಸುಜಯ್‌ ಶಾಸ್ತ್ರೀ ಅಲ್ಲಲ್ಲಿ ಪ್ರೇಕ್ಷಕರಿಗೆ ನಗು ತರಿಸುತ್ತಾರೆ. ಉಳಿದಂತೆ ಇತರ ಕಲಾವಿದರದ್ದು ಪಾತ್ರಕ್ಕೆ ತಕ್ಕದಾದ ಅಚ್ಚುಕಟ್ಟು ಅಭಿನಯ.

ತಾಂತ್ರಿಕವಾಗಿ ಸಿನಿಮಾದ ಛಾಯಾಗ್ರಹಣ, ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಮಾಮೂಲಿ ಸಿನಿಮಾಗಳಿಗಿಂತ ಹೊರತಾಗಿರುವ ಸಿನಿಮಾಗಳನ್ನು ಮತ್ತು ಹೊಸಬರ ಪ್ರಯತ್ನವನ್ನು ಬೆಂಬಲಿಸಬೇಕೆನ್ನುವವರು ಒಮ್ಮೆ “ಶಾಖಾಹಾರಿ’ ನೋಡಿಬರಬಹುದು.

Advertisement

 ಜಿ.ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next