ಲಾಹೋರ್: ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹೀದ್ ಅಫ್ರಿದಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ಬಗ್ಗೆ ಸ್ವತಃ ಅಫ್ರಿದಿಯೇ ಟ್ವೀಟ್ ಮಾಡಿ ಮಾಹಿತಿಯನ್ನು ಸ್ಪಷ್ಟಪಡಿಸಿದ್ದಾರೆ.
ಕಳೆದ ಗುರುವಾರದಿಂದ ನನ್ನ ಅನಾರೋಗ್ಯಕ್ಕೆ ಒಳಗಾಗಿದ್ದೆ. ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭ ನನಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ ಎಂದು ಅಫ್ರಿದಿ ತನ್ನ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಆಲ್ ರೌಂಡರ್ ಶಾಹೀದ್ ಅಫ್ರಿದಿ ಕೋವಿಡ್-19 ಪಾಸಿಟಿವ್ ದೃಢಪಟ್ಟ ಮೂರನೇ ಕ್ರಿಕೆಟ್ ಆಟಗಾರನಾಗಿದ್ದಾರೆ. ಈ ಹಿಂದೆ ತೌಫಿಕ್ ಉಮರ್ ಮತ್ತು ಜಾಫರ್ ಸರ್ಫರಾಜ್ ರಿಗೂ ಕೋವಿಡ್-19 ಸೋಂಕು ದೃಢವಾಗಿತ್ತು. ಇವರಿಬ್ಬರೂ ಸದ್ಯ ಕೋವಿಡ್-19 ಸೋಂಕಿನಿಂದ ಮುಕ್ತರಾಗಿದ್ದಾರೆ.
ಸ್ಕಾಟ್ಲೆಂಡ್ ಆಟಗಾರ ಮಜೀದ್ ಹಕ್ ಮತ್ತು ದಕ್ಷಿಣ ಆಫ್ರಿಕಾದ ಸೊಲೊ ಕ್ವಾನಿ ಕೋವಿಡ್ ಪಾಸಿಟಿವ್ ವಿಶ್ವದ ಇತರ ಕ್ರಿಕೆಟಿಗರಾಗಿದ್ದಾರೆ.
ತನ್ನ ಶಾಹೀದ್ ಅಫ್ರಿದಿ ಫೌಂಡೇಶನ್ ಮುಖಾಂತರ ಕೋವಿಡ್ ಸಮಯದಲ್ಲಿ ಅಫ್ರಿದಿ ಸಾಮಾಜಿಕ ಕಾರ್ಯಗಳನ್ನು ಮಾಡಿದ್ದರು. ಈ ಅಫ್ರಿದಿ ಫೌಂಡೇಶನ್ ಗೆ ಸಹಾಯ ಮಾಡುವಂತೆ ಭಾರತೀಯ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದರು. ಹಾಗಾಗಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.
40 ವರ್ಷದ ಅಫ್ರಿದಿ 398 ಏಕದಿನ ಪಂದ್ಯಗಳನ್ನಾಡಿದ್ದು, 8064 ರನ್ ಗಳಿಸಿದ್ದಾರೆ. ಉತ್ತಮ ಲೆಗ್ ಸ್ಪಿನ್ನರ್ ಆಗಿರುವ ಅಫ್ರಿದಿ ಏಕದಿನ ಕ್ರಿಕೆಟ್ ನಲ್ಲಿ 395 ವಿಕೆಟ್ ಕಬಳಿಸಿದ್ದಾರೆ.