ನವದೆಹಲಿ: ದಿಲ್ಲಿಯ ಶಾಹೀನ್ ಬಾಗ್ ಮತ್ತು ಜಾಮೀಯಾದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಆಕಸ್ಮಿಕ ಘಟನೆಯಲ್ಲ, ಇದೊಂದು ಭಾರತವನ್ನು ಇಬ್ಭಾಗವನ್ನಾಗಿಸುವ ಸಂಚು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಸೋಮವಾರ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಮೌನ ಮುರಿದಿರುವ ಪ್ರಧಾನಿ, ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂದೆ ರಾಜಕೀಯದ ಕೈವಾಡ ಇದ್ದಿರುವುದಾಗಿ ಆರೋಪಿಸಿದರು.
ಕಳೆದ ಹಲವು ದಿನಗಳಿಂದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಸೀಲಂಪುರ್, ಜಾಮೀಯಾ ಮತ್ತು ಶಾಹೀನ್ ಬಾಗ್ ನಲ್ಲಿ ಪ್ರತಿಭಟನೆ ನಡೆಯುತ್ತಲೇ ಇದೆ. ಈ ಪ್ರತಿಭಟನೆಗಳು ಕಾಕತಾಳೀಯವಲ್ಲ, ಈ ಪ್ರತಿಭಟನೆ ಭಾರತವನ್ನು ಇಬ್ಭಾಗವನ್ನಾಗಿಸುವ ಸಂಚು ಹೊಂದಿದೆ. ಇದರ ಹಿಂದೆ ರಾಜಕೀಯದ ಕೈವಾಡ ಇದೆ. ಇದು ದೇಶದ ಸೌಹಾರ್ದತೆಯನ್ನು ಹಾಳುಗೆಡುವುತ್ತಿದೆ ಎಂದು ಮೋದಿ ಟೀಕಿಸಿದರು.
ಸಚಿವರುಗಳು ಸಿಎಎ ಕುರಿತು ಪದೇ, ಪದೇ ಭರವಸೆಗಳನ್ನು ನೀಡಿದ ನಂತರ ಪ್ರತಿಭಟನೆಗಳು ನಿಂತು ಹೋಗಿದ್ದವು. ಆದರೆ ಶಾಹೀನ್ ಬಾಗ್ ಸೇರಿದಂತೆ ದೇಶದ ಇತರ ಭಾಗಗಳಲ್ಲಿ ಪ್ರತಿಭಟನೆ ಆರಂಭಗೊಳ್ಳಲು ಆಪ್ ಮತ್ತು ಕಾಂಗ್ರೆಸ್ ಪಕ್ಷದ ಪ್ರಚೋದನೆಯೇ ಕಾರಣ ಎಂದು ದೂರಿದರು.
ದಿಲ್ಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಅಕ್ರಮ ಕಾಲೋನಿಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಈ ಸಂದರ್ಭದಲ್ಲಿ ಮತದಾರರಿಗೆ ಭರವಸೆ ನೀಡಿದರು. 2022ರೊಳಗೆ ಎಲ್ಲರಿಗೂ ಮನೆ ನಿರ್ಮಿಸಿ ಕೊಡುವ ನಿರ್ಧಾರಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.