Advertisement

ಶಹೀನಾಬಾಗ್ ಸದ್ಯದಲ್ಲೇ ಜಲಿಯನ್‍ವಾಲಾ ಬಾಗ್ ಆಗಲಿದೆ: ಒವೈಸಿ ಆತಂಕ

10:13 AM Feb 07, 2020 | Hari Prasad |

ಹೈದ್ರಾಬಾದ್: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ರಾಷ್ಟ್ರರಾಜಧಾನಿ ದೆಹಲಿಯ ಶಹೀನಾಬಾಗ್ ಪ್ರದೇಶದಲ್ಲಿ ನಡೆಸುತ್ತಿರುವ ಪ್ರತಿಭಟನೆ 50 ದಿನಗಳನ್ನು ಪೂರೈಸಿದೆ. ಈ ನಡುವೆ ಶಹೀನಾಬಾಗ್ ಹೋರಾಟವನ್ನು ಹತ್ತಿಕ್ಕಿಲು ಕೇಂದ್ರ ಸರಕಾರ ಸದ್ಯದಲ್ಲೇ ಬಲಪ್ರಯೋಗ ನಡೆಸಬಹುದೆಂಬ ಆತಂಕವನ್ನು ಎಐಎಂಐಎಂ ಪಕ್ಷದ ನಾಯಕ ಹಾಗೂ ಸಂಸದ ಅಸಾದುದ್ದೀನ್ ಒವೈಸಿ ಅವರು ವ್ಯಕ್ತಪಡಿಸಿದ್ದಾರೆ.

Advertisement

ದೆಹಲಿ ಚುನಾವಣೆಯ ಬಳಿಕ ಕೇಂದ್ರ ಸರಕಾರವು ಶಹೀನಾಬಾಗ್ ಹೋರಾಟಗಾರರ ಮೇಲೆ ಬಲ ಪ್ರಯೋಗ ನಡೆಸುವ ಸಾಧ್ಯತೆಗಳಿವೆ ಎಂದು ಹೇಳಿರುವ ಒವೈಸಿ ಅವರು, ‘ಹೋರಾಟಗಾರರ ಮೇಲೆ ಅವರು ಗುಂಡು ಹಾರಿಸಬಹುದು, ಶಹೀನಾ ಬಾಗ್ ಅನ್ನು ಅವರು ಇನ್ನೊಂದು ಜಲಿಯನ್‍ವಾಲಾ ಬಾಗ್ ಆಗಿ ಪರಿವರ್ತಿಸಬಹುದು. ಬಿಜೆಪಿ ಸಚಿವರೇ ‘ಗುಂಡು ಹಾರಿಸಿ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಇದಕ್ಕೆಲ್ಲಾ ಸೂಕ್ತ ಉತ್ತರ ಕೇಂದ್ರ ಸರಕಾರದ ಕಡೆಯಿಂದ ಬರಬಹುದು’ ಎಂದು ಒವೈಸಿ ಹೇಳಿದ್ದಾರೆ.

ಫೆಬ್ರವರಿ 8ರಂದು ದೆಹಲಿಯಲ್ಲಿ ಮತದಾನ ನಡೆಯಲಿದ್ದು ಆ ದಿನದಂದು ಶಹೀನಾಬಾಗ್ ನಲ್ಲಿ ಪ್ರತಿಭಟನೆ ನಡೆಸುತ್ತಿರುವವರನ್ನು ಬಲಪ್ರಯೋಗದಿಂದ ತೆರವುಗೊಳಿಸುವ ಸಾಧ್ಯತೆಗಳಿವೆ ಎಂಬ ವರದಿಯ ಹಿನ್ನಲೆಯಲ್ಲಿ ಒವೈಸಿ ಅವರು ಈ ಮಾತುಗಳನ್ನು ಹೇಳಿದ್ದಾರೆ.

‘2024ರವರೆಗೆ ದೇಶದಲ್ಲಿ ಎನ್.ಸಿ.ಆರ್. ಜಾರಿಗೊಳಿಸುವುದಿಲ್ಲ ಎಂದು ಸರಕಾರ ಸ್ಪಷ್ಟವಾಗಿ ಹೇಳಬೇಕು. ಸುಮಾರು 3,900 ಕೋಟಿ ರೂಪಾಯಿಗಳನ್ನು ಎನ್.ಪಿ.ಆರ್.ಗೋಸ್ಕರ ಸರಕಾರ ವ್ಯಯಿಸುತ್ತಿರುವುದಾದರೂ ಯಾಕೆ. ನಾನೊಬ್ಬ ಇತಿಹಾಸದ ವಿದ್ಯಾರ್ಥಿಯಾಗಿದ್ದು ಇದಕ್ಕೆ ಉತ್ತರವನ್ನು ಹೀಗೆಂದು ಕಂಡುಕೊಂಡಿದ್ದೇನೆ, ಹಿಟ್ಲರ್ ತನ್ನ ಆಡಳಿತಾವಧಿಯಲ್ಲಿ ಜರ್ಮನಿಯಲ್ಲಿ ಎರಡೆರಡು ಬಾರಿ ಜನಗಣತಿ ನಡೆಸಿದ್ದ ಮತ್ತು ಆ ಬಳಿಕವಷ್ಟೇ ಆತ ಯಹೂದಿಯರನ್ನು ಗ್ಯಾಸ್ ಚೇಂಬರ್ ಗೆ ತಳ್ಳಿದ್ದ. ನನ್ನ ದೇಶ ಇನ್ನೊಂದು ಜರ್ಮನಿಯಾಗಲು ನಾನು ಬಿಡುವುದಿಲ್ಲ’ ಎಂದು ಅಸಾದುದ್ದೀನ್ ಒವೈಸಿ ಅವರು ಎನ್.ಪಿ.ಆರ್. ಹಾಗೂ ಎನ್.ಆರ್.ಸಿ. ಕುರಿತಾದ ಪ್ರಶ್ನೆಗೆ ಉತ್ತರಿಸುತ್ತಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next