Advertisement

ಮನೆಮನೆಗೆ ಧಾನ್ಯ, ತರಕಾರಿ ಹಂಚುತ್ತಿರುವ ಕ್ರಿಕೆಟಿಗ ಶಹಬಾಜ್‌ ನದೀಂ

12:08 PM Apr 04, 2020 | keerthan |

ರಾಂಚಿ (ಜಾರ್ಖಂಡ್‌): ಸಂಕಷ್ಟ ಬಂದಾಗಲೇ ಸಹಾಯದ ಮಹತ್ವದ ಅರ್ಥವಾಗುವುದು. 130 ಕೋಟಿ ಜನ ಇರುವ ಭಾರತ ಈಗ ಎಂದೂ ಕಾಣದ ಸಂಕಷ್ಟದಲ್ಲಿದೆ. ಇಂತಹ ಹೊತ್ತಿನಲ್ಲಿ ಸಮಾಜದ ಮೂಲೆ ಮೂಲೆಯಿಂದ ಜನ ಸಹಾಯ ಮಾಡಲು ಎದ್ದು ಬರುತ್ತಿದ್ದಾರೆ. ಅದರಲ್ಲಿ ಒಬ್ಬರು ಜಾರ್ಖಂಡ್‌ ಕ್ರಿಕೆಟಿಗ ಶಹಬಾಜ್‌ ನದೀಂ. ಗಮನಿಸಬೇಕಾದ ಸಂಗತಿಯೆಂದರೆ, ಅವರೇನು ಭಾರೀ ಶ್ರೀಮಂತ ಕ್ರಿಕೆಟಿಗರಲ್ಲ. ಆದರೆ ತಮ್ಮ ಬಳಿ ಇರುವುದನ್ನು ಇತರರಿಗೂ ಹಂಚುವ ಉದಾತ್ತತೆಯನ್ನು ಅವರು ತೋರುತ್ತಿದ್ದಾರೆ.

Advertisement

ಅವರು ಸದ್ಯ ತಾವಿರುವ ಧನಬಾದ್‌ನ ಝರಿಯದ 350 ಕುಟುಂಬಗಳಿಗೆ ನೆರವು ನೀಡುವ ತೀರ್ಮಾನ ಮಾಡಿದ್ದಾರೆ. ಈಗಾಗಲೇ 150 ಕುಟುಂಬಗಳಿಗೆ ಸಹಾಯ ಮಾಡಿದ್ದಾರೆ. ಅಕ್ಕಿ, ಇತರೆ ಧಾನ್ಯ, ತರಕಾರಿ, ಸಕ್ಕರೆ ಇವೆಲ್ಲವನ್ನು ಸ್ವತಃ ಶಹಬಾಜ್‌ ನದೀಂ ಕುಟುಂಬಸ್ಥರೇ ಪ್ಯಾಕ್‌ ಮಾಡುತ್ತಿದ್ದಾರೆ. ಆಮೇಲೆ ತಾವೇ ಸ್ವತಃ ಹಂಚುತ್ತಿದ್ದಾರೆ. ನೇರವಾಗಿ ಸಹಾಯ ಮಾಡುವುದರಲ್ಲಿ ತನಗೆ ನಂಬಿಕೆಯಿದೆ ಎಂದು ನದೀಂ ಹೇಳಿದ್ದಾರೆ. ಹೇಳಿ ಕೇಳಿ ಜಾರ್ಖಂಡ್‌ ಬಡವರೇ ಅಧಿಕವಿರುವ ರಾಜ್ಯ, ಅಂತಹ ಕಡೆ ನದೀಂ ಕೆಲಸ ಸ್ತುತ್ಯರ್ಹವಾಗಿದೆ.

ಈಗ ಐಪಿಎಲ್‌ ಮುಖ್ಯವಲ್ಲ: ಐಪಿಎಲ್‌ನಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ಪರ ಅವರು ಆಡುತ್ತಿದ್ದಾರೆ. ಈಗ ಐಪಿಎಲ್‌ ಇಲ್ಲದೇ ಇರುವುದರಿಂದ ಜಿಮ್‌ನಲ್ಲಿ ಅಭ್ಯಾಸ ನಡೆಸುತ್ತ ಕಾಲ ಕಳೆಯುತ್ತಿದ್ದಾರೆ. ಇವತ್ತಲ್ಲ ನಾಳೆ ಐಪಿಎಲ್‌ ನಡೆಯುತ್ತೆ. ನನ್ನ ಬಳಿ ಕಾಯುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಆದರೆ ಈಗಿನ ತುರ್ತು ಇರುವುದು ಸಮಸ್ಯೆಗೆ ಸಿಲುಕಿರುವ ಜನರಿಗೆ ನೆರವಾಗುವುದು ಎಂದು ನದೀಂ ಹೇಳುತ್ತಾರೆ.

ನದೀಂ 2019ರಲ್ಲಿ ದ.ಆಫ್ರಿಕಾ ವಿರುದ್ಧ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಆ ಪಂದ್ಯದಲ್ಲಿ ಅವರು 4 ವಿಕೆಟ್‌ ಪಡೆದಿದ್ದರು. ಅದಾದ ಮೇಲೆ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಜಾರ್ಖಂಡ್‌ ರಾಜ್ಯ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next