ಶಹಾಪುರ: ಸತತ ಎರಡನೇ ಸಾಲಿಗೂ ಮುಂಗಾರು ಹಂಗಾಮು ಮಳೆ ಕೈಕೊಡುತ್ತಿದ್ದು, ರೈತರು ಕೃಷಿ ಕಾರ್ಮಿಕರು ಕೇಲಸವಿಲ್ಲದೆ ಗೂಳೆ ಹೋಗುತ್ತಿದ್ದಾರೆ. ಕಾರಣ ಗ್ರಾಮೀಣ ಭಾಗದ ರೈತರಿಗೆ ಕೂಡಲೇ ಖಾತರಿ ಯೋಜನೆಯಡಿ ಕೆಲಸ ಕೊಡಬೇಕು ಮತ್ತು ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ಇಲ್ಲಿನ ತಾಪಂ ಕಚೇರಿ ಎದುರು ಕೃಷಿ ಕೂಲಿ ಕಾರ್ಮಿಕರ ಸಂಘ ಬೃಹತ್ ಪ್ರತಿಭಟನೆ ನಡೆಸಿತು.
ಹಳ್ಳಿಗಳಲ್ಲಿ ಕೆಲಸವಿಲ್ಲದೆ ಜನ ಸಾಮಾನ್ಯರು ಪರದಾಡುವಂತಾಗಿದೆ. ಕೂಡಲೇ ಖಾತ್ರಿ ಕೆಲಸ ನೀಡಿ ಕೃಷಿ ಕೂಲಿ ಕಾರ್ಮಿಕರನ್ನು ರಕ್ಷಣೆ ಮಾಡಬೇಕು. ಅಲ್ಲದೆ ಈಗಾಗಲೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿದ ನೂರಾರು ಕಾರ್ಮಿಕರಿಗೆ ನೀಡಬೇಕಿದ್ದ ಕೂಲಿ ಹಣ ಹಲವಾರು ಗ್ರಾಪಂಗಳಲ್ಲಿ ಬಾಕಿ ಉಳಿದಿದ್ದು, ಕೂಡಲೇ ಪಾವತಿಸಬೇಕು ಎಂದು ಒತ್ತಾಯಿಸಿದರು.
ಆಯಾ ಗ್ರಾಪಂ ವ್ಯಾಪ್ತಿ ಅಭಿವೃದ್ಧಿ ಅಧಿಕಾರಿಗಳು ಬರ ಕಾಮಗಾರಿ ಕೈಗೊಂಡು ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು. ಅಲ್ಲದೆ ಪ್ರತಿ 15 ದಿನಕ್ಕೊಮ್ಮೆ ಕೂಲಿಕಾರರಿಗೆ ಹಣ ಬಿಡುಗಡೆ ಮಾಡಬೇಕು. ಅಲ್ಲದೆ ಕೆಲಸ ಮಾಡಲು ಕಾರ್ಮಿಕರಿಗೆ ವಿವಿಧ ಸಲಕರಣೆಗಳು ಸಹ ಒದಗಿಸಬೇಕು ಎಂದರು.
ಕಾಡಂಗೇರಾ ಗ್ರಾಪಂ ವ್ಯಾಪ್ತಿ ಇಂತಹ ಸಾಕಷ್ಟು ಅಕ್ರಮ ನಡೆದಿದ್ದು, ಕೂಡಲೇ ಇಲ್ಲಿನ ಪಿಡಿಒ ಅವರನ್ನ ವರ್ಗಾವಣೆ ಮಾಡಬೇಕು ಎಂದು ತಾಪಂ ಕಾರ್ಯನಿರ್ವಹಣ ಅಧಿಕಾರಿಗೆ ಈ ಸಂದರ್ಭದಲ್ಲಿ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾ ಅಧ್ಯಕ್ಷ ದಾವಲಸಾಬ್ ನದಾಫ್, ಮಲ್ಲಯ್ಯ ಪೋಲಂಪಲ್ಲಿ, ಖಾಜಾಸಾಬ್ ಬೋನಾಳ, ಮಸಾಕಸಾಬ, ನಿಂಗಣ್ಣ ನಾಟೇಕಾರ, ಮಲ್ಲಮ್ಮ ಕೂಡ್ಲಿ, ಬಾಬುರಾವ್, ಚಂದ್ರಡ್ಡಿ ಇಬ್ರಾಹಿಂಪುರ, ಶೇಖಪ್ಪ ಕಾಡಂಗೇರಾ, ನಾಗಪ್ಪ, ರಂಗಮ್ಮ, ಭೀಮಣ್ಣ, ಅಂಬಲಯ್ಯ ಬೇವಿನಕಟ್ಟಿ, ತಾಯಮ್ಮ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.