ಶಹಾಪುರ: ಸಮಾಜ ಕಲ್ಯಾಣ ಇಲಾಖೆಯಡಿ ವಸತಿ ನಿಲಯಕ್ಕೆ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿ ಅಧಿಕಾರಿಗಳು ತಮ್ಮ ಮನಬಂದಂತೆ ವಿದ್ಯಾರ್ಥಿಗಳ ಆಯ್ಕೆ ನಡೆಸಿದ್ದು, ಅರ್ಹ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದ್ದಾರೆ ಎಂದು ಎಸ್‌ಎಫ್‌ಐ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಆಗಮಿಸಿದ ಕಂದಾಯ ಇಲಾಖೆ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು.
ತಾಲೂಕಿನಲ್ಲಿ ಶೇ.70ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅರ್ಹ ವಿದ್ಯಾರ್ಥಿಗಳನ್ನು ಕಡೆಗಣಿಸಿದ್ದು, ಜನಪ್ರತಿನಿಧಿಗಳು ಸೂಚಿಸಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲದೆ ತಮ್ಮ ಇಚ್ಛಾನುಸಾರ ವಿದ್ಯಾರ್ಥಿಗಳನ್ನು ನಿಲಯಕ್ಕೆ ಸೇರ್ಪಡೆ ಮಾಡಿಕೊಂಡಿದ್ದು, ಸಾಕಷ್ಟು ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಕಡೆಗಣೆಸುವ ಮೂಲಕ ಅರ್ಹರಿಗೆ ಅನ್ಯಾಯ ಎಸಗಿದ್ದಾರೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಹಿಂದುಳಿದ ವಿಭಾಗದಲ್ಲಿ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿಭಾಗದಲ್ಲಿ ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಆಯ್ಕೆ ಮಾಡಿಕೊಳ್ಳದ ಕಾರಣ ನೂರಾರು ವಿದ್ಯಾರ್ಥಿಗಳು ವಿದ್ಯಾರ್ಜನೆಯಿಂದ ವಂಚಿತಗೊಳ್ಳುವ ಸಾಧ್ಯತೆ ಇದೆ. ಕಾರಣ ಜಿಲ್ಲಾಧಿಕಾರಿಗಳು ಅರ್ಹ ವಿದ್ಯಾರ್ಥಿಗಳನ್ನು ವಸತಿ ನಿಲಯಕ್ಕೆ ಸೇರ್ಪಡೆಗೊಳಿಸಿಕೊಳ್ಳುವಂತೆ ಸೂಚನೆ ನೀಡಬೇಕೆಂದು ಆಗ್ರಹಿಸಿದರು. ಮತ್ತು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಶಿಷ್ಯ ವೇತನ ನೀಡುವಲ್ಲಿಯೂ ಇಲಾಖೆ ಅಧಿಕಾರಿಗಳು ಎಡವಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ ಕನ್ಯಾಕೋಳೂರ ಗ್ರಾಮದಿಂದ ಡಿಗ್ರಿ ಕಾಲೇಜುವರೆಗೂ ಸಿಟಿ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂಬುದನ್ನು ಸೇರಿದಂತೆಇತರೆ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಮುಖಂಡರಾದ ಚೆನ್ನಪ್ಪ ಆನೇಗುಂದಿ, ಎಸ್.ಎಂ. ಸಾಗರ, ವಿಜಯ ರಾಠೊಡ, ಹೊನ್ನಪ್ಪ ಮಾನ್ಪಡೆ, ಭೀಮರಾಯ ಪೂಜಾರಿ, ಕೇಶುನಾಥ ರಾಠೊಡ, ಹಣಮಂತ ವಡಿಗೇರಾ, ಜುಬಲೇಶ ಪಿಂಜಾರ್, ಆನಂದ ಪವಾರ್, ಸುರೇಶ ಚವ್ಹಾಣ ಸೇರಿದಂತೆ ಇತರರು ಭಾಗವಹಿಸಿದ್ದರು.