Advertisement

ಶಹಾಪುರದಲ್ಲಿ ನೀರಿಗಾಗಿ ಹಾಹಾಕಾರ

11:16 AM May 15, 2019 | Naveen |

ಶಹಾಪುರ: ನಗರದಲ್ಲಿ ಈಗ ನೀರಿಗಾಗಿ ಹಾಹಾಕಾರ ಶುರುವಾಗಿದೆ. ನಗರದ ಜನರ ಜೀವನಾಡಿಯಾಗಿದ್ದ ನಾಗರ ಕೆರೆ ಮತ್ತು ಮಾವಿನ ಕೆರೆಗಳು ಬತ್ತಿ ಬರಿದಾಗಿವೆ. ಕೊಳವೆ ಬಾವಿಗಳು ಬತ್ತಿ ಹೋಗಿದ್ದು, ಅಂತರ್ಜಲ ಸಂಪೂರ್ಣ ಕುಸಿತಗೊಂಡಿದೆ.

Advertisement

ನಗರದ ವಾರ್ಡ್‌ ನಂ. 3, 4, 5, 6, 7, 8, 9, 10, 13 ಸೇರಿದಂತೆ ಬಹುತೇಕ ಬಡಾವಣೆಗಳಲ್ಲಿ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ನೀರಿಗಾಗಿ ಹೊಸ ಕೊಳವೆ ಬಾವಿಗಳನ್ನು ತೋಡಿದರೂ ನೀರು ಬರುತ್ತಿಲ್ಲ. 300 ಫೀಟ್ ಆಳ ತೋಡಿದರೂ ನೀರು ಬೀಳುತ್ತಿಲ್ಲ.

ನಗರಕ್ಕೆ ನೀರು ಪೂರೈಸುತ್ತಿರುವ ಏಕೈಕ ಫಿಲ್ಟರ್‌ ಬೆಡ್‌ ಕೆರೆಯಲ್ಲೂ ನೀರಿಲ್ಲ. ಕಳೆದ ವಾರದ ಹಿಂದೆಯಷ್ಟೇ ಫಿಲ್ಟರ್‌ ಕೆರೆಗೆ ಕೃಷ್ಣಾ ಕಾಲುವೆ ಮೂಲಕ ನೀರು ತುಂಬುವ ಕಾರ್ಯ ನಡೆಯಿತು. ಆದರೂ ಫಿಲ್ಟರ್‌ ಬೆಡ್‌ ಕೆರೆ ಸಂಪೂರ್ಣ ತುಂಬಲಿಲ್ಲ.

ನಗರಸಭೆ ಪ್ರಸ್ತುತ ನಾಲ್ಕು ದಿನಕ್ಕೊಮ್ಮೆ ನೀರು ಬಿಡುತ್ತಿದೆ. ಅದು ಸಮರ್ಪಕವಾಗಿ ತಲುಪುತ್ತಿಲ್ಲ. ಕೆಲವೆಡೆ ಕಿರು ನೀರು ಸರಬರಾಜು ವ್ಯವಸ್ಥೆ ಇದೆ. ಆದರೆ ಕೊಳವೆ ಬಾವಿಯಲ್ಲಿ ನೀರು ಬಾರದ ಕಾರಣ ಕಿರು ನೀರು ಸರಬರಾಜು ಸ್ಥಗಿತಗೊಂಡಿವೆ.

ನಗರದ ಚಾಮುಂಡಿ ಬಡಾವಣೆಯಲ್ಲಿ ನೀರಿನ ಸಮಸ್ಯೆ ಸಾಕಷ್ಟಿದೆ. ಹತ್ತಾರು ಬಾರಿ ನಗರಸಭೆ ಮೆಟ್ಟಿಲೇರಿದರೂ, ಪ್ರತಿಭಟನೆ ನಡೆಸಿದರೂ ನೀರೊದಗಿಸುವ ಕಾರ್ಯ ಮಾಡಲಾಗಿಲ್ಲ. ಚಾಮುಂಡಿ ಬಡಾವಣೆ ನಾಗರಿಕರು ಸ್ವಂತ ಖರ್ಚಿನಲ್ಲೇ ಟ್ಯಾಂಕರ್‌ ನೀರು ತರಿಸಿಕೊಂಡ ಉದಾಹರಣೆಗಳಿವೆ.

Advertisement

ಇಲ್ಲಿ ಬಡವರ ಬವಣೆ ಕೇಳುವವರಿಲ್ಲ. ಜನಪ್ರತಿನಿಧಿಗಳು ಹಾಯಾಗಿರುತ್ತಾರೆ. ಆದರೆ ನಾವಿಲ್ಲಿ ಹನಿ ನೀರಿಗಾಗಿ ಹಗಲು-ರಾತ್ರಿಯೆನ್ನದೇ ಪರದಾಡುವಂತಾಗಿದೆ ಎನ್ನುತ್ತಾರೆ ಚಾಮುಂಡಿ ನಗರ ನಿವಾಸಿ ಮಹ್ಮದ್‌ ಅಲಿ.

ಶಾಶ್ವತ ಯೋಜನೆ ರೂಪಿಸಲಿ: ನಗರಕ್ಕೆ ಸಮೀಪದ ಸನ್ನತಿ ಬ್ರೀಜ್‌ ಕಂ ಬ್ಯಾರೇಜ್‌ ಮೂಲಕ ಕುಡಿಯುವ ನೀರಿನ ಯೋಜನೆ ಜಾರಿಯಾದಲ್ಲಿ ನಗರಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಗರಸಭೆ ಆಡಳಿತ, ಶಾಸಕರು, ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು. ಹಾಲಿ ಶಾಸಕ ದರ್ಶನಾಪುರ ಮುತುವರ್ಜಿವಹಿಸಿ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕು ಎಂಬುದು ನಾಗರಿಕರ ಆಗ್ರಹ.

ಕುಡಿಯುವ ನೀರಿನ ಸಮಸ್ಯೆ ಭೀಕರತೆ ಕಾಣುತ್ತಿರುವ ಸಂದರ್ಭದಲ್ಲೇ ನಗರಸಭೆ ಚುನಾವಣೆ ಎದುರಿಸುವಂತಾಗಿದೆ. ನಮ್ಮ ಬಡಾವಣೆಗೆ ಯಾರು ಕುಡಿವ ನೀರಿನ ವ್ಯವಸ್ಥೆ ಮಾಡುತ್ತಾರೋ ಅವರಿಗೆ ಮತ ನೀಡುತ್ತೇವೆ ಎಂಬುದು ಮತದಾರರ ಮಾತು.

ಇಂದಿರಾ ನಗರಕ್ಕೆ ಮನಸ್ಸು ಬಂದಾಗ ನೀರು ಬಿಡುತ್ತಾರೆ. ನಾವು ಜಾತಕ ಪಕ್ಷಿಯಂತೆ ನೀರು ಬಿಟ್ಟಿದ್ದಾರೋ ಇಲ್ಲವೋ ಎಂದು ಕಾಯಬೇಕು. ನೀರಿಗಾಗಿ ನಿತ್ಯ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕನಿಷ್ಟ ಟ್ಯಾಂಕರ್‌ ಮೂಲಕವಾದರೂ ನೀರು ಪೂರೈಸಬೇಕು. ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು.
ಅನುಸೂಯಾ ವಿ.ಎಲ್.,
ನಿವೃತ್ತ ಎಸ್‌ಟಿಒ. ಇಂದಿರಾ ನಗರ

ಮಳೆ ಅಭಾವದಿಂದ ಕೆರೆಗಳು ಬತ್ತಿದ್ದು, ನಗರದಲ್ಲಿ ಅಂತರ್ಜಲ ಕುಸಿದ ಪರಿಣಾಮ ಕೊಳವೆ ಬಾವಿಗಳು ಬತ್ತಿವೆ. ಹೀಗಾಗಿ ನೀರಿನ ಸಮಸ್ಯೆ ಉದ್ಭವವಾಗಿದೆ. ಸುಮಾರು 200 ಕೊಳವೆ ಬಾವಿಗಳು ಬತ್ತಿರುವ ಮಾಹಿತಿ ಇದೆ. ಯಾವುದೇ ನಗರಕ್ಕೆ ಟ್ಯಾಂಕರ್‌ ನೀರು ಸರಬರಾಜು ವ್ಯವಸ್ಥೆ ಮಾಡಿಲ್ಲ. ನಾಲ್ಕು ದಿನಕ್ಕೊಮ್ಮೆ ಫಿಲ್ಟರ್‌ ಬೆಡೆ ಕೆರೆ ನೀರು ಬಿಡಲಾಗುತ್ತಿದೆ. ಆದರೂ ಜನರಿಂದ ನೀರಿನ ಸಮಸ್ಯೆ ಬಗ್ಗೆ ದೂರು ಬಂದಿವೆ. ಸದ್ಯ ಚುನಾವಣೆ ಕರ್ತವ್ಯದಲ್ಲಿದ್ದು, ಕೂಡಲೇ ವ್ಯವಸ್ಥೆ ಮಾಡಲಾಗುವುದು.
•ಬಸವರಾಜ ಶಿವಪೂಜೆ,
ಪೌರಾಯುಕ್ತ

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next