ಶಹಾಪುರ: ದೇಶದ ಗಡಿಯಲ್ಲಿ ಮಳೆ, ಬಿಸಿಲು, ಚಳಿ ಎನ್ನದೆ ತಾಯಿ ನಾಡು, ನಮ್ಮಲ್ಲೆರ ರಕ್ಷಣೆಯಲ್ಲಿ ತನ್ನನ್ನು ಒತ್ತೆ ಇಟ್ಟು ಕೆಲಸ ಮಾಡುತ್ತಿರುವ ಸೈನಿಕರು ಮತ್ತು ದೇಶಕ್ಕೆ ಅನ್ನ ನೀಡುವ ಅನ್ನದಾತ ರೈತರ ಕುಟುಂಬದ ಸಮೃದ್ಧಿಗೆ ಸರ್ವರೂ ಪ್ರಾರ್ಥಿಸಬೇಕು ಎಂದು ಗದುಗಿನ ಕಲ್ಲಯ್ಯಜ್ಜ ಕರೆ ನೀಡಿದರು.
ನಗರದ ಚರಬಸವೇಶ್ವರ ಗದ್ದುಗೆ ಆವರಣದಲ್ಲಿ ನಡೆದ ಸಗರನಾಡು ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ವಿದ್ಯೆಗಿಂತ ಸಂಸ್ಕಾರ ಕಲಿಸುವುದು ಬಹುಮುಖ್ಯ. ಭಾರತೀಯ ಸಂಸ್ಕೃತಿ ಆಚರಣೆ ಎಂದರೆ ಮೂಗು ಮುರಿಯುವ ಯುವಕ ಯುವತಿಯರೇ ಜಾಸ್ತಿಯಾಗುತ್ತಿದ್ದಾರೆ. ಇಂಗ್ಲಿಷ್ ವ್ಯಾಮೋಹಕ್ಕೆ ಬಿದ್ದು ನಮ್ಮತನ ಕಳೆದುಕೊಂಡು ಸುಸಂಸ್ಕೃತ ಮರೆತು ವಿದೇಶ ಸಂಸ್ಕೃತಿಗೆ ಜೋತು ಬಿದ್ದು ಬದುಕು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.
ಮಕ್ಕಳಿಗೆ ಚಿಕ್ಕಂದಿನಿಂದಲೇ ಉತ್ತಮ ಸಂಸ್ಕಾರ ನೀಡಬೇಕು. ಆಧ್ಯಾತ್ಮ, ಗುರು ಹಿರಿಯರಿಗೆ ಗೌರವ, ಜ್ಞಾನಕ್ಕೆ ಪ್ರೋತ್ಸಾಹ ನೀಡಬೇಕು. ಜಂಜಾಟ ಇಲ್ಲದೆ ಒತ್ತಡದ ನಡುವೆಯೂ ಹೇಗೆ ಬದುಕಬೇಕು ಎಂಬುದನ್ನು ಕಲಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕಲ್ಲಯ್ಯಜ್ಜನವರ ತುಲಾಭಾರ ನೆರವೇರಿಸಲಾಯಿತು. ಗದ್ದುಗೆ ಬಸವಯ್ಯ ಶರಣರು ಸಾನ್ನಿಧ್ಯ ವಹಿಸಿದ್ದರು. ಕರವೇ ಉಕ ಅಧ್ಯಕ್ಷ ಶರಣು ಗದ್ದುಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾಂಗ್ರೆಸ್ ಯುವ ನಾಯಕ ಬಾಪುಗೌಡ , ಸಿಪಿಐ ಹನುಮರಡ್ಡೆಪ್ಪ, ವಾಸ್ತು ತಜ್ಞ ಎಂ.ಡಿ.ಪಾಟೀಲ, ಹಿರಿಯ ಕಲಾವಿದ ವೈಜನಾಥ ಬಿರೆದಾರ, ಜಾನಪದ ಅಕಾಡೆಮಿ ಸದಸ್ಯ ಅಮರೀಶ ಜಾಲಿಬೆಂಚಿ ಇದ್ದರು. ಇದೇ ಸಂದರ್ಭದಲ್ಲಿ ಕಾಮಿಡಿ ಕಲಾವಿದರು ವೀಕ್ಷಕರನ್ನು ನಗೆನಗಡಲ್ಲಿ ತೇಲಿಸಿದರು. ಜ್ಯೂನಿಯರ್ ಸಾಧು ಕೋಕಿಲ ಹಾಸ್ಯ ಗಮನ ಸೆಳೆಯಿತು. ನಂತರ ವಿವಿಧ ಸಂಸ್ಕೃತಿ ಕಾರ್ಯಕ್ರಮಗಳು ನಡೆದವು.