ಶಹಾಪುರ: ಈ ಬಾರಿ ನಗರಸಭೆಯ ಆಡಳಿತ ಚುಕ್ಕಾಣಿ ಜೆಡಿಎಸ್ ಹಿಡಿಯುವುದು ಶತಸಿದ್ಧ ಎಂದು ಜೆಡಿಎಸ್ ಮುಖಂಡ ಅಮೀನರಡ್ಡಿ ಯಾಳಗಿ ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ರವಿವಾರ ನಗರದ ವಿವಿಧ ವಾರ್ಡ್‌ಗಳ ಮನೆ ಮನೆಗೆ ತೆರಳಿ ಜೆಡಿಎಸ್ ಅಭ್ಯರ್ಥಿಗಳ ಪರ ಮತಯಾಚಿಸಿ ಮಾತನಾಡಿದ ಅವರು, ಕಳೆದ 25 ವರ್ಷದಿಂದ ನಗರಸಭೆ ಆಡಳಿತ ನಡೆಸಿದ ಕಾಂಗ್ರೆಸ್ ದುರಾಡಳಿತ ನಡೆಸಿದೆ. ಯಾವುದೇ ಸಮರ್ಪಕ ಅಭಿವೃದ್ಧಿ ಕಾರ್ಯ ನೆರವೇರಿಸಿಲ್ಲ.
ನಗರದಲ್ಲಿ ಜನತೆ ನೀರಿಗಾಗಿ ಪರದಾಡುವಂತಾಗಿದೆ. ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರು, ಪಟ್ಟಣದ ಜನತೆಯ ಸಮಸ್ಯೆ ಪರಿಹಾರಕ್ಕೆ ಸ್ಪಂದಿಸಿಲ್ಲ. ನಗರದ ಬಹುತೇಕ ವಾರ್ಡ್‌ಗಳಲ್ಲಿ ಒಳ ಚರಂಡಿಯಿಲ್ಲ. ಸಮರ್ಪಕ ರಸ್ತೆಗಳಿಲ್ಲ. ಕೆಲವಡೆ ದುರಸ್ತಿಗೊಳಿಸಿದ ಚರಂಡಿಯಲ್ಲಿ ತ್ಯಾಜ್ಯ ವಿಲೇವಾರಿಯಾಗದೆ ಗಬ್ಬು ವಾಸನೇ ಬೀರುತ್ತಿದೆ. ಮೂಲ ಸೌಕರ್ಯ ಕಲ್ಪಿಸುವಲ್ಲಿ ಕಾಂಗ್ರೆಸ್ ಆಡಳಿತ ವಿಫಲವಾಗಿದೆ.
25 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್ ನಗರದಲ್ಲಿ ಒಂದು ಉತ್ತಮ ಉದ್ಯಾನವನ ನಿರ್ಮಾಣ ಮಾಡುವುದು ಆಗಿಲ್ಲ. ಟ್ರಾಫಿಕ್ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಆಗಿಲ್ಲ ಎಂದು ಆರೋಪಿಸಿದರು.
ಹೀಗಾಗಿ ಜನ ಆಡಳಿತಾರೂಢ ಕಾಂಗ್ರೆಸ್ ವಿರೋಧಿ ಮತ ಚಲಾವಣೆ ಮಾಡಲಿದ್ದಾರೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿಗಳು ಜಯ ಸಾಧಿಸಲಿದ್ದು, ನಗರಸಭೆ ಆಡಳಿತ ಚುಕ್ಕಾಣಿ ವಹಿಸಿದ್ದಲ್ಲಿ, ಇಡೀ ನಗರದ ಚಿತ್ರಣವೇ ಬದಲು ಮಾಡಲಿದ್ದೇವೆ. ಸುಂದರ ನಗರವನ್ನಾಗಿ ಪರಿವರ್ತಿಸುವ ಆಶ್ವಾಸನೆಯನ್ನು ನಾವು ನೀಡುತ್ತಿದ್ದೇವೆ. ಮತದಾರರು ಆಶೀರ್ವಾದ ಮಾಡಿದ್ದಲ್ಲಿ ಖಂಡಿತವಾಗಿ ಪಟ್ಟಣದ ಜನತೆಗೆ ಶಾಶ್ವತ ಕುಡಿಯುವ ನೀರು, ಸಮರ್ಪಕ ಚರಂಡಿ ವ್ಯವಸ್ಥೆ ಸೇರಿದಂತೆ ಉದ್ಯಾನವನ ನಿರ್ಮಾಣ ಮತ್ತು ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಿದ್ದೇವೆ ಎಂದು ತಿಳಿಸಿದರು.
ನಗರದ ವಾರ್ಡ್ ಸಂಖ್ಯೆ 30, 04, 24 ಮತ್ತು 23, 14ರಲ್ಲಿ ಸಂಚರಿಸಿ ತಮ್ಮ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ವಿಭೂತಿಹಳ್ಳಿ, ವಿಠ್ಠಲ್, ಶರಣಗೌಡ ಪಾಟೀಲ ಆಲ್ದಾಳ, ದೇವೀಂದ್ರ ಶಿರವಾಳ, ಶರಣಗೌಡ ಮಾಲಹಳ್ಳಿ ಇದ್ದರು.