ಶಹಾಪುರ: ನಗರಸಭೆಯಾದ ನಂತರ ಮೊದಲ ಬಾರಿಗೆ ನಡೆಯುತ್ತಿರುವ ಚುನಾವಣೆಗೆ ಸ್ಪರ್ಧಿಸುವ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಮುಖಂಡರಿಗೆ ತಲೆನೋವಾಗಿ ಪರಿಣಮಿಸಿದೆ.
ನಗರದಲ್ಲಿ ಒಟ್ಟು 31 ವಾರ್ಡ್‌ಗಳಿದ್ದು, 51 ಮತಗಟ್ಟೆ ಸ್ಥಾಪಿಸಲಾಗಿದೆ. ಒಟ್ಟು 48, 031 ಮತದಾರರಿದ್ದಾರೆ. ಇದರಲ್ಲಿ 24000 ಜನ ಪುರುಷರು, 24023 ಜನ ಮಹಿಳೆಯರು, 8 ಜನ ಇತರೆ ಮತದಾರರು ಇದ್ದಾರೆ.
ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮತ್ತು ಎಸ್‌ಡಿಪಿಐ ಕಾರ್ಯತಂತ್ರ ರೂಪಿಸುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ತೀವ್ರ ಲಾಬಿ ನಡೆಸುತ್ತಿದ್ದಾರೆ. ಬಿಜೆಪಿಯಲ್ಲೂ ಪೈಪೋಟಿ ಕಂಡು ಬಂದಿದೆ. ಇವೆರಡು ಪಕ್ಷದಿಂದ ಟಿಕೆಟ್ ದೊರೆಯದೆ ನಿರಾಶರಾದವರು ಬಂದರೆ ಅಂತವರನ್ನು ತಮ್ಮತ್ತ ಸೆಳೆದು ಸ್ಪರ್ಧೆಗೆ ಇಳಿಸುವ ಕುರಿತು ಜೆಡಿಎಸ್ ಲೆಕ್ಕಾಚಾರ ಹಾಕುತ್ತಿದೆ. ಈ ನಡುವೆ ನಗರದ 31 ವಾರ್ಡ್‌ಗಳ ಪೈಕಿ ಮುಸ್ಲಿಂ ಜನಸಂಖ್ಯೆ ಜಾಸ್ತಿ ಹೊಂದಿದ ವಾರ್ಡ್‌ಗಳಲ್ಲಿ ಎಸ್‌ಡಿಪಿಐ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಕುರಿತು ಆಲೋಚನೆ ಮಾಡುತ್ತಿದೆ. ಎಲ್ಲ ಪಕ್ಷಗಳು ಮೈತ್ರಿ ಮಾಡಿಕೊಳ್ಳದೇ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕುರಿತು ಚಿಂತನೆ ನಡೆಸಿವೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ತನ್ನ ಅಭ್ಯರ್ಥಿಗಳನ್ನು ರಹಸ್ಯವಾಗಿ ಆಯ್ಕೆ ಮಾಡಿದೆ. ಕೆಲವು ವಾರ್ಡ್‌ಗಳಿಗೆ ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್‌ನವರು ಈಗಾಗಲೇ ಹಲವಡೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ವಾರ್ಡ್ ನಂ.10ರ ಅಭ್ಯರ್ಥಿಯಾಗಿ ರಾಜು ಎಸ್.ಪಾಟೀಲ ಮಡ್ನಾಳ ಶುಕ್ರವಾರವೇ ನಾಮಪತ್ರ ಸಲ್ಲಿಸಿದ್ದಾರೆ. ಇಲ್ಲಿವರೆಗೆ ಇದೊಂದೇ ನಾಮಪತ್ರ ಸಲ್ಲಿಕೆಯಾಗಿದೆ. ಸೋಮವಾರ ಕೆಲವು ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಎಲ್ಲೆಡೆ ಅಭ್ಯರ್ಥಿಗಳ ಹೆಸರು ಬಹಿರಂಗಗೊಳಿಸದಿರುವ ತಂತ್ರಗಾರಿಕೆ ನಡೆದಿದೆ ಎನ್ನಲಾಗಿದೆ. ವಾರ್ಡ್ ನಂ.18, ವಾರ್ಡ್ ನಂ. 01, 03 ಹಾಗೂ 08 ವಾರ್ಡ್‌ನಲ್ಲಿ ಅಭ್ಯರ್ಥಿಗಳು ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ನಾಮಪತ್ರ ಸಲ್ಲಿಕೆಗೆ ಮೇ 16ರಂದು ಅಂತಿಮ ದಿನವಾಗಿದೆ. ಸಾಕಷ್ಟು ಸಂಖ್ಯೆಯಲ್ಲಿ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಸ್ಪರ್ಧೆಗೆ ಇಳಿಯಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ದರ್ಶನಾಪುರ-ಪಾಟೀಲ ಕಸರತ್ತು
ಈ ಮೊದಲು ಪುರಸಭೆ ಇದ್ದಾಗ ಕಳೆದ 20 ವರ್ಷದಿಂದ ಇಲ್ಲಿವರೆಗೆ ಹಾಲಿ ಶಾಸಕ ಶರಣಬಸಪ್ಪಗೌಡ ದರ್ಶನಪುರ ಅವರ ಹಿಡಿತದಲ್ಲಿಯೇ ಆಡಳಿತ ನಡೆದಿದೆ. ಆದರೆ ನಗರಸಭೆಯಾದ ನಂತರ ಮೊದಲ ಚುನಾವಣೆ ಇದಾಗಿದೆ. ಈ ಬಾರಿ 8 ವಾರ್ಡ್‌ಗಳು ಜಾಸ್ತಿಯಾಗಿವೆ. ಪುರಸಭೆ ಇದ್ದಾಗ 23 ಸದಸ್ಯ ಬಲ ಹೊಂದಿತ್ತು. ಈಗ ನಗರಸಭೆಯಲ್ಲಿ 31 ಸದಸ್ಯತ್ವ ಸ್ಥಾನ ತುಂಬಬೇಕಿದೆ. ಶಾಸಕ ದರ್ಶನಾಪುರ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಸಾಕಷ್ಟು ಶ್ರಮ ವಹಿಸುತ್ತಿದ್ದಾರೆ. ಮಾಜಿ ಶಾಸಕ ಗುರು ಪಾಟೀಲ ಸಹ ತೆರೆಮರೆಯಲ್ಲಿಯೇ ಕಸರತ್ತು ನಡೆಸುತ್ತಿದ್ದಾರೆ. ಜೆಡಿಎಸ್ ಮುಖಂಡ ಅಮೀನರಡ್ಡಿ ನಗರದ ಕಚೇರಿಯಲ್ಲಿ ಜೆಡಿಎಸ್ ಸಭೆ ನಡೆಸಿದ ನಂತರ ಎಲ್ಲೂ ಕಂಡು ಬರುತ್ತಿಲ್ಲ. ಆದರೆ ಇವೆರಡು ಪಕ್ಷದಿಂದ ಬೇಸತ್ತು ಬಂದವರಿಗೆ ಜೆಡಿಎಸ್ ಟಿಕೆಟ್ ನೀಡಬಹುದು ಎಂಬ ಮಾತು ಕೇಳಿ ಬರುತ್ತಿದೆ.
•
ಮಲ್ಲಿಕಾರ್ಜುನ ಮುದ್ನೂರ