Advertisement

ಗರಿಗೆದರಿದ ಶಹಾಪುರ ನಗರಸಭೆ ಚುನಾವಣೆ

12:08 PM May 04, 2019 | Team Udayavani |

ಶಹಾಪುರ: ಗುರುವಾರ ನಗರಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಯಾ ವಾರ್ಡ್‌ಗಳಲ್ಲಿ ಮಹತ್ವದ ಚರ್ಚೆಗಳು ಶುರುವಾಗಿವೆ. ಲೋಕಾಸಭೆ ಚುನಾವಣೆ ಸಮರ ಮುಗಿದಿದ್ದು, ಗೆಲವು ಲೆಕ್ಕಾಚಾರದಲ್ಲಿ ತೊಡಗಿದ್ದ ನಗರದಲ್ಲೀಗ ನಗರಸಭೆ ಚುನಾವಣೆ ರಾಜಕೀಯ ಕುರಿತು ಮಾತುಕತೆಗಳು ನಡೆದಿವೆ.

Advertisement

ಈ ಮೊದಲೇ ಆಯಾ ವಾರ್ಡ್‌ವಾರು ಕೆಟೆಗರಿ ಲಿಸ್ಟ್‌ ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಆ ಪ್ರಕಾರ ಆಕಾಂಕ್ಷಿಗಳು ತಮ್ಮ ನೆಚ್ಚಿನ ವಾರ್ಡ್‌ ಆರಿಸಿಕೊಂಡು ಇದೇ ವಾರ್ಡಿಗೆ ಟಿಕೆಟ್ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ತಮ್ಮ ತಮ್ಮ ಬೆಂಬಲಿಗರ ಮೂಲಕ ಆಯಾ ಪಕ್ಷದಲ್ಲಿ ಟಿಕೆಟಗಾಗಿ ನಾನು ಪಟ್ಟು ಹಾಕಿದ್ದಾರೆ.

ನಗರಸಭೆಗೆ ಈ ಬಾರಿ 31 ಸದಸ್ಯರ ಆಯ್ಕೆ ನಡೆಯಲಿದೆ. ಕಳೆದ ಬಾರಿ ಪುರಸಭೆ ಇದ್ದಾಗ 23 ವಾರ್ಡ್‌ಗಳು ಇದ್ದವು. ಈ ಬಾರಿ 8 ವಾರ್ಡ್‌ ಹೆಚ್ಚಾಗಿದ್ದು, ಆಕಾಂಕ್ಷೆಗಳ ಸಂಖ್ಯೆಯು ಜಾಸ್ತಿಯಾಗಿದೆ.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಪಕ್ಷಗಳಿಂದ ಅಭ್ಯರ್ಥಿಗಳು ಸ್ಪರ್ಧಿಸಲು ಕಾತುರರಾಗಿದ್ದಾರೆ. ಕೆಲವಡೆ ಪಕ್ಷೇತರರಾಗಿಯೂ ನಿಲ್ಲುವ ಸಂಭವ ಕಂಡು ಬಂದಿದೆ. ಆಯಾ ಪಕ್ಷಗಳಲ್ಲಿ ನಾಯಕರ ಕಚೇರಿ ಮತ್ತು ಮನೆ ಮುಂದೆ ರಂಗ ತಾಲೀಮು ಶುರುವಾಗಿದೆ. ಆಕಾಂಕ್ಷಿಗಳ ಹಿಂಡು ತಮ್ಮ ನಾಯಕರ ಮನವೊಲಿಸಿ ಟಿಕೆಟ್ ಪಡೆಯಲು ನಾನಾ ಕಸರತ್ತು ನಡೆಸುತ್ತಿದ್ದಾರೆ.

ಜೆಡಿಎಸ್‌ ಸ್ವಂತ ಸ್ವಂತ ಬಲದ ಮೇಲೆ ಮೈತ್ರಿ ಮಂತ್ರ ದಿಕ್ಕರಿಸಿ ಚುನಾವಣೆ ಕಣಕ್ಕೆ ಇಳಿದಿದ್ದೇ ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ನಗರಸಭೆ ಅಧಿಕಾರ ಹಿಡಿಯಲು ಹವಣಿಸುವ ಸಾಧ್ಯತೆ ಇದೆ. ಸುಲಭವಾಗಿ ಯಾರಿಗೂ ನಗರಸಭೆ ಗದ್ದುಗೆ ದೊರೆಯುವದು ಸಾಧ್ಯವಿಲ್ಲ. ತ್ರಿಕೋನ ಸ್ಪರ್ಧೆ ನಡೆದರೂ ಅಚ್ಚರಿ ಪಡಬೇಕಿಲ್ಲ.

Advertisement

ಆಯಾ ಪಕ್ಷದ ನಾಯಕರು ಸಹ ಸ್ಥಳೀಯ ಮುಖಂಡರ ಜೊತೆ ಮಾತು ಕತೆ ನಡೆಸುತ್ತಿದ್ದು, ಯಾವ ವಾರ್ಡ್‌ಗೆ ಅಭ್ಯರ್ಥಿ ಯಾರು ಸೂಕ್ತ ಎಂಬ ಲೆಕ್ಕಚಾರವು ನಡೆಸುತ್ತಿದ್ದಾರೆ. ನಗರಸಭೆ ಪ್ರವೇಶ ಪಡೆಯಲು ಯುವಕರ ಹುಮ್ಮಸ್ಸು ಹೆಚ್ಚಾಗಿ ಕಂಡು ಬರುತ್ತಿದೆ. ಮಾಜಿ ಶಾಸಕ ಗುರು ಪಾಟೀಲ ಮತ್ತು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಚೇರಿ ಮುಂದೆ ಯುವಕರ ದಂಡು ನೆರೆದಿದ್ದು, ನಾಯಕರನ್ನು ಹುಡುಕಿಕೊಂಡು ಅವರಿದ್ದಲ್ಲಿಗೆ ಹೋಗಿ ನಗರಸಭೆ ಕುರಿತು ಟಿಕೆಟ್ ಪಡೆಯುವ ನಾನಾ ಕಸರತ್ತು ನಡೆಸುತ್ತಿರುವುದು ಕಂಡು ಬಂದಿದೆ. ನಗರದಲ್ಲಿ ಸ್ಥಳೀಯ ಸಂಸ್ಥೆಗಳ ರಾಜಕೀಯ ರಂಗು ಗರಿಗೆದರಿದೆ.

ಮೈತ್ರಿ ಅಭ್ಯರ್ಥಿಗಳಿಲ್ಲ
ಲೋಕಾಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಪಕ್ಷದ ಬಿ.ವಿ. ನಾಯಕ ಸ್ಪರ್ಧಿಸಿದ್ದರು. ಆದಾಗ್ಯು ಇಲ್ಲಿ ಜೆಡಿಎಸ್‌ ಲೋಕಸಭೆ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗವಹಿಸಲಿಲ್ಲ. ಪ್ರಸಕ್ತ ಇಲ್ಲಿನ ನಗರಸಭೆ ಚುನಾವಣೆ ಘೋಷಣೆಯಾಗಿದ್ದು, ಈ ಕುರಿತು ಜೆಡಿಎಸ್‌ ಮುಖಂಡರನ್ನು ಸಂಪರ್ಕಿಸಿದಾಗ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿಯಾಗಿ ನಗರಸಭೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಜೆಡಿಎಸ್‌ ಪ್ರತ್ಯೇಕವಾಗಿ ನಮ್ಮ ಪಕ್ಷದವತಿಯಿಂದ ಅಭ್ಯರ್ಥಿಗಳನ್ನು ಹಾಕಲಿದ್ದೇವೆ ಎಂದು ಜೆಡಿಎಸ್‌ ಮುಖಂಡ ಬಸವರಾಜ ಅರುಣಿ ಸ್ಪಷ್ಟಪಡಿಸಿದರು.

31 ವಾರ್ಡ್‌ಗಳ ಮೀಸಲಾತಿ ಪಟ್ಟಿ ಪ್ರಕಟ
8 ವಾರ್ಡ್‌ ಸಾಮಾನ್ಯ ಪುರುಷ, 8 ಸಾಮಾನ್ಯ ಮಹಿಳೆ, 3 ಹಿಂದುಳಿದ ವರ್ಗ(ಎ) ಪುರುಷ, 3 ಹಿಂದುಳಿದ ವರ್ಗ (ಎ) ಮಹಿಳೆ, 1 ಹಿಂದುಳಿದ ವರ್ಗ (ಬಿ) ಪುರುಷ, 2 ಹಿಂದುಳಿದ ವರ್ಗ (ಬಿ) ಮಹಿಳೆ, 2 ಪರಿಶಿಷ್ಟ ಜಾತಿ ಪುರುಷ, 2 ಪರಿಶಿಷ್ಟ ಜಾತಿ ಮಹಿಳೆ, 1 ಎಸ್‌.ಟಿ. ಪುರುಷ, 1 ಎಸ್‌.ಟಿ. ಮಹಿಳೆ ಈ ರೀತಿ ಮೀಸಲಾತಿ ಪಟ್ಟಿ ಪ್ರಕಟಗೊಂಡಿದೆ.

ನಗರಸಭೆ ಚುನಾವಣೆಯಲ್ಲಿ ಎಲ್ಲಾ 31 ವಾರ್ಡ್‌ಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಲಿದ್ದೇವೆ. ಲೋಕಾಸಭೆಗೆ ಮೈತ್ರಿ ನಡೆದಿಲ್ಲ. ಇನ್ನೇನು ನಗರಸಭೆಯಲ್ಲಿ ಅದನ್ನು ಪಾಲಿಸುವುದು. ನಮ್ಮ ಪಕ್ಷ ನಗರಸಭೆ ಚುನಾವಣೆ ನಡೆಸಲು ಬಲಿಷ್ಠವಾಗಿದೆ. ಎಲ್ಲಾ ವಾರ್ಡ್‌ಗೆ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆ. ನಮ್ಮ ನಾಯಕರಾದ ಅಮೀನರಡ್ಡಿ ಪಾಟೀಲ ಜೊತೆ ನಾವೆಲ್ಲರೂ ನಗರದಲ್ಲಿ ಸಂಚರಿಸಿ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಲಿದ್ದೇವೆ.
ವಿಠ್ಠಲ್ ವಗ್ಗಿ. ಜೆಡಿಎಸ್‌ ತಾಲೂಕು ಅಧ್ಯಕ್ಷ

ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next