ಶಹಾಪುರ: ಮಕ್ಕಳಲ್ಲಿ ಸಂಗೀತ, ಸಾಹಿತ್ಯ, ಸಂಸ್ಕೃತಿ ಬೆಳೆಸುವ ಮಹತ್ವದ ಜವಾಬ್ದಾರಿ ಪಾಲಕರ ಮೇಲಿದೆ. ಸಂಗೀತ ಜೀವನಕ್ಕೆ ಶಕ್ತಿ ತುಂಬಲಿದೆ. ಕಾರಣ ಪಾಲಕರು ಮಕ್ಕಳಲ್ಲಿ ಸಂಗೀತ ಅಭಿರುಚಿ ಬೆಳೆಸಬೇಕು ಎಂದು ಸಂಗೀತ ಶಿಕ್ಷಕ ಚಂದ್ರಶೇಖರ ಗೋಗಿ ತಿಳಿಸಿದರು.
ನಗರದ ಗಾಂಧಿ ಚೌಕ್ ಸಿ.ಬಿ. ಶಾಲಾ ಮೈದಾನದಲ್ಲಿ ಟ್ಯಾಲೆಂಟ್ ಕೋಚಿಂಗ್ ಕ್ಲಾಸಸ್ ವತಿಯಿಂದ ನಡೆದ ಸಂಗೀತ ಕಾರ್ಯಕ್ರಮ ಮತ್ತು ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಂಗೀತದಲ್ಲಿ ಅನೇಕ ವಿಧಗಳು ಇದೆ, ಶಾಸ್ತ್ರೀಯ ಸಂಗೀತ, ಜಾನಪದ ಸಂಗೀತ ಜೊತೆಗೆ ಚಿತ್ರ ಗೀತೆ ಹಾಡುಗಳ ಸಂಗೀತವು ಸಂದರ್ಭಕ್ಕೆ ಅನುಗುಣವಾಗಿ ಹುಟ್ಟುತ್ತದೆ. ದುಃಖದ ಸಮಯ ಸಂತೋಷದ ಸಮಯ ಆಯಾ ಭಕ್ತಿ ಭಾವಕ್ಕೆ ಅನುಗುಣವಾಗಿ ಸಂಗೀತವನ್ನು ನಾವು ಅನುಕರಣೆ ಮಾಡುತ್ತೇವೆ ಎಂದರು. ಪ್ರಸ್ತುತ ದಿನಮಾನಗಳಲ್ಲಿ ಭಕ್ತಿ, ಭಾವಗೀತೆ, ಮಹಾತ್ಮರ ವಚನಗಳು, ತತ್ವ ಪದಗಳ ಮೇಲೆ ಆಸಕ್ತಿ ಕಡಿಮೆಯಾಗಿರುವ ಕಾರಣ, ಚಿತ್ರ ಗೀತೆ ಸಂಗೀತಕ್ಕೆ ಮಾರು ಹೋಗಿದ್ದು, ಅಸಭ್ಯ ಜಾನಪದ ಗೀತೆಯಂತ ಅಶ್ಲೀಲ ಸಾಹಿತ್ಯ ಪದಗಳನ್ನು ಮಕ್ಕಳು ಆಲಿಸುವದು, ಹಾಡುವದರಿಂದ ಸಮಾಜದಲ್ಲಿ ಸಂಗೀತ ಕ್ಷೇತ್ರಕ್ಕೆ ಕಪ್ಪು ಚುಕ್ಕೆ ಇಟ್ಟಂತಾಗಿದೆ ಎಂದು ತಿಳಿಸಿದರು.
ಡಾ| ಪಂ. ಪುಟ್ಟರಾಜು ಸೇವಾ ಸಮಿತಿ ಅಧ್ಯಕ್ಷ ಮಲ್ಲಯ್ಯ ಇಟಗಿ ಅಧ್ಯಕ್ಷ ವಹಿಸಿ ಮಾತನಾಡಿದರು. ಉಮೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೀಮಾ ಕುಂಬಾರ ನಿರೂಪಿಸಿದರು. ರಾಜಶೇಖರ ಸ್ವಾಗತಿಸಿದರು. ಸಿದ್ಧಲಿಂಗ ವಂದಿಸಿದರು.