ಶಹಾಪುರ: ಮನುಸ್ಮತಿ ಎಳೆಯನ್ನು ಹಿಡಿದುಕೊಂಡು ಹೊರಟ ಗಂಡು ಪ್ರಧಾನ ಸಮಾಜ ತನ್ನ ಮೂಗಿನ ನೇರಕ್ಕೆ ಆಲೋಚಿಸಿ ಸಮಾಜದಲ್ಲಿ ಕಟ್ಟುಪಾಡುಗಳನ್ನು ರೂಪಿಸಿಕೊಂಡು ಹೊರಟಿದೆ. ಇದರಿಂದ ಸಹಜವಾಗಿ ಹೆಣ್ಣು ಮಕ್ಕಳಿಗೆ ಹೆಚ್ಚಿನ ಸ್ವಾತಂತ್ರ್ಯ ಇಂದಿಗೂ ಇಲ್ಲ ಎಂದು ಕಾವ್ಯಶ್ರೀ ಮಹಾಗಾಂವಕರ್ ವಿಷಾದ ವ್ಯಕ್ತ ಪಡಿಸಿದರು.
ನಗರದ ಬಸವ ಮಾರ್ಗ ಪ್ರತಿಷ್ಠಾನ ಆಯೋಜಿಸಿದ್ದ ತಿಂಗಳ ಬಸವ ಬೆಳಕು-86ರ ಸಭೆಯಲ್ಲಿ ಶಿವಶರಣರದ ದೃಷ್ಟಿಯಲ್ಲಿ ಮಹಿಳೆ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಶರಣರು ಹೆಣ್ಣು ಗಂಡು ಭಿನ್ನ ಅಲ್ಲವೆ ಅಲ್ಲ ಎಂದು ಪ್ರತಿಪಾದಿಸಿದವರು. ಜನನ ಕೊಡುವವಳು, ಹೆಂಡತಿಯಾಗಿ ಪ್ರೀತಿಸುವವಳು, ಮುದ್ದು ಮಾಡುವಂತೆ ನಮ್ಮನ್ನು ಪ್ರೇರೇಪಿಸುವವಳು ಹೆಣ್ಣು. ಆದ್ದರಿಂದ ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ ಆಕೆ ಸಾಕ್ಷಾತ್ ದೇವಸ್ವರೂಪಿ ಎಂದು ತಿಳಿಸಿದರು.
ಬಸವಣ್ಣನವರು ಹಾಗೂ ನೀಲಾಂಬಿಕೆ ತಾಯಿ ಇಬ್ಬರು ಪರಸ್ಪರ ಒಬ್ಬರಿಗೊಬ್ಬರು ಕೂಸಾಗಿ ಬದುಕಿರುವುದು ಅತ್ಯಂತ ಸೋಜಿಗದ ಸಂಗತಿ. ಹೆಣ್ಣು ತನ್ನನ್ನು ತಾನು ಕೀಳೆಂದು ಭಾವಿಸದೆ ಧೈರ್ಯವಾಗಿ ಸಮಾಜದಲ್ಲಿ ಮುಂದೆ ಬರಬೇಕು ಎಂದರು.
ನಿವೃತ್ತ ಆಹಾರ ನಿರೀಕ್ಷಕ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಅಣ್ಣ ಲಿಂಗಣ್ಣ ಸತ್ಯಂಪೇಟೆ, ಅವ್ವ ಶಿವಮ್ಮ, ಅಪ್ಪ ಗುರಪ್ಪ ಸಮಾಜಕ್ಕಾಗಿ ತಮ್ಮ ಜೀವವನ್ನು ತೇದು ಹೋದವರು. ನಮ್ಮ ಕುಟುಂಬವೆಲ್ಲ ಸಮಾಜಕ್ಕಾಗಿ ಸಮರ್ಪಿಸಿಕೊಂಡು ನಮಗೆಲ್ಲ ಆದರ್ಶ ಪ್ರಾಯರಾಗಿದ್ದಾರೆ ಎಂದರು.
ನೀಲಾಂಬಿಕೆ ಸತ್ಯಂಪೇಟೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯಲ್ಲಿ ಸಿದ್ಧರಾಮ ಹೊನ್ಕಲ್, ಮಾನಪ್ಪ ಹೂಗಾರ, ಮರಿಲಿಂಗಪ್ಪ ತಳವಾರ, ಶಿವಯೋಗಪ್ಪ ಮುಡಬೂಳ, ತಿಪ್ಪಣ್ಣ ಬಸವಕಲ್ಯಾಣ, ಶಂಕರಗೌಡ ದಿಗ್ಗಿ, ಸಾಹೇಬಗೌಡ ಮಲ್ಲೇದ, ಶಿವಕುಮಾರ ಆವಂಟಿ, ಚೆನ್ನಮಲ್ಲಿಕಾರ್ಜುನ ಗುಂಡಾನೋರ, ಶಿವಲಿಂಗಣ್ಣ ಸಾಹು, ಮಹಾಂತೇಶ ಆವಂಟಿ, ಚೆನ್ನಪ್ಪ ಹರನೂರ, ಬಸವರಾಜ ಅರುಣಿ, ಸಿದ್ದಲಿಂಗಪ್ಪ ಆನೇಗುಂದಿ, ಡಾ.ಗುರುರಾಜ ಸತ್ಯಂಪೇಟೆ ಮುಂತಾದವರು ಉಪಸ್ಥಿತರಿದ್ದರು. ರಾಜು ಕುಂಬಾರ ಸ್ವಾಗತಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಪಂಪಣ್ಣಗೌಡ ಮಾಲಿ ಪಾಟೀಲ ವಂದಿಸಿದರು.