ಶಹಾಪುರ: ಮಹಾತ್ಮ ಗಾಂಧೀಜಿ ಸೇರಿದಂತೆ ಹಲವಾರು ಮಹಾತ್ಮರ ನಾಯಕರ ನೇತೃತ್ವದಲ್ಲಿ ಹೋರಾಟ, ಅಹಿಂಸಾತ್ಮಕ ಚಳವಳಿ ನಡೆಸುವ ಮೂಲಕ ಬ್ರಿಟಿಷರ ಕಪಿ ಮುಷ್ಟಿಯಲ್ಲಿದ್ದ ಭಾರತವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯಕ್ಕಾಗಿ ಹಲವಾರು ನಾಯಕರು ಬಲಿದಾನ ನೀಡಿದ್ದಾರೆ. ಅಂತವರ ಸ್ಮರಣೆ ಅಗತ್ಯವಿದೆ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಸಿಪಿಎಸ್ ಶಾಲಾ ಮೈದಾನದಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾಲೂಕು ಆಡಳಿತ ಆಯೋಜಿಸಿದ್ದ ಸ್ವಾತಂತ್ರ್ಯ ದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರಮಿಸಿದ ದೇಶದ ಮಹಾನ್ ನಾಯಕರ ಸ್ಮರಣೆ ಮಾಡುವುದಲ್ಲದೆ, ಸ್ವಾತಂತ್ರ್ಯ ದೊರೆಯಲು ಹೋರಾಡಿದ ತಮ್ಮ ಜೀವನವನ್ನೆ ಮುಡಿಪಿಟ್ಟ ಮಹಾತ್ಮರ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಬೇಕು. ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ ಬೆಳೆಸಬೇಕು. ದೇಶದ ಪ್ರಗತಿಗೆ ಪೂರಕ ವಾತಾವರಣ ನಿರ್ಮಾಣ ಮಾಡಬೇಕು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮಕ್ಕಳನ್ನು ಶಿಕ್ಷಣದಿಂದ ವಂಚಿತರಾದಲ್ಲಿ ಮುಂದೆ ಅವರ ಬದುಕು ದುಸ್ತರವಾದೀತು ಎಂದು ಎಚ್ಚರಿಸಿದರು.
ತಹಶೀಲ್ದಾರ್ ಸಂಗಮೇಶ ಜಿಡಗೆ ದ್ವಜಾರೋಹಣ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಗ ಗಳಿಸಿದ ತಾಲೂಕಿನ ಐವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಿದರು.
ಶಿರವಾಳ ಮುರಾರ್ಜಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಮಲ್ಲಕಂಬ ಯೋಗಾಸನ ಪ್ರದರ್ಶನ ನಡೆಯಿತು.
ಇದೇ ಸಂದರ್ಭದಲ್ಲಿ ಮಕ್ಕಳಿಂದ ಸಂತ್ರಸ್ತರಿಗಾಗಿ ಸಂಗ್ರಹಿಸಿದ ಪರಿಹಾರ ನಿಧಿಯನ್ನು ತಹಶೀಲ್ದಾರರಿಗೆ ಒಪ್ಪಿಸಲಾಯಿತು.
ತಾಪಂ ಅಧ್ಯಕ್ಷ ಬಸವಂತ್ರರಡ್ಡಿ ಸಾಹು, ತಾಪಂ ಇಒ ಪಂಪಾಪತಿ ಹಿರೇಮಠ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಹುತಪ್ಪ ಹವಾಲ್ದಾರ್, ಪೌರಾಯುಕ್ತ ಬಸವರಾಜ ಶಿವಪೂಜೆ, ಸಿಪಿಐ ಹಣಮಂತರಡ್ಡೆಪ್ಪ, ಕೃಷಿಕ ಸಮಾಜದ ಅಧ್ಯಕ್ಷ ಬಸನಗೌಡ ಮರಕಲ್, ಮಾಣಿಕರಡ್ಡಿ ಗೋಗಿ, ಚಂದ್ರಶೇಖರ ಲಿಂಗದಳ್ಳಿ, ಬಿಸಿಎಂ ಅಧಿಕಾರಿ ಸೋಮಶೇಖರ ಇದ್ದರು.