ಶಹಾಪುರ: ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವ ಮೂಲಕ ಬಡವರಿಗೆ ಕೈಗೆಟುಕದ ರೋಗಗಳ ತಪಾಸಣೆ ನಡೆಸಿ ಆಯಾ ರೋಗಕ್ಕೆ ಬೇಕಾದ ಸೂಕ್ತ ಶಸ್ತ್ರ ಚಿಕಿತ್ಸೆ ಕೊಡಿಸುವಂತ ಮಹತ್ವದ ಕಾರ್ಯಕ್ಕೆ ಸಹಕಾರ ನೀಡುತ್ತಿರುವ ಇಲ್ಲಿನ ಸ್ವಕುಳ ಸಾಳಿ ಸಮಾಜ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಮಂಡಳಿ ಕಾರ್ಯ ಶ್ಲಾಘನೀಯ ಎಂದು ಶಿಕ್ಷಕಿ ಸುರೇಖಾ ಏಕಬೋಟೆ ಹೇಳಿದರು.
ಭಗವಾನ್ ಶ್ರೀ ಜೀವ್ಹೇಶ್ವರ ಜಯಂತ್ಯುತ್ಸವ ಅಂಗವಾಗಿ ನಗರದ ಜೀವೇಶ್ವರ ಕಲ್ಯಾಣ ಮಂಟಪದಲ್ಲಿ ಇಲ್ಲಿನ ಸ್ವಕುಳ ಸಾಳಿ ಸಮಾಜ ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆ ಆಶ್ರಯದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸರ್ವರ ಸಹಭಾಗಿತ್ವ ಅಗತ್ಯ. ಆ ನಿಟ್ಟಿನಲ್ಲಿ ಸ್ವಕುಳ ಸಾಳಿ ಸಮಾಜ ಕೈ ಜೋಡಿಸಿರುವುದು ಸಂತಸದ ವಿಚಾರ. ಆರೋಗ್ಯವೇ ಭಾಗ್ಯ ಎನ್ನಲಾಗುತ್ತಿದೆ. ಮೊದಲು ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯ ಸರಿ ಇದ್ದಲ್ಲಿ ಮಾತ್ರ ಏನಾದರೂ ಸಾಧಿಸಲು ಸಾಧ್ಯವಿದೆ ಎಂದರು. ಪ್ರಸ್ತುತ ಕಾಲದಲ್ಲಿ ಆರೋಗ್ಯ ಸುಧಾರಿಸಿಕೊಳ್ಳಲು ದುಬಾರಿ ಹಣ ಖರ್ಚು ಮಾಡಬೇಕಿದೆ. ಬಡವರು ದುಬಾರಿ ವೆಚ್ಚ ಭರಿಸಿ ಆರೋಗ್ಯ ಸುಧಾರಿಸಿಕೊಳ್ಳುವ ಸ್ಥಿತಿಯಲ್ಲಿ ಇರುವುದಿಲ್ಲ. ಇಂತಹ ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಂಡು ಆರೋಗ್ಯ ಸರಿಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಮುಖಂಡ ಅಮರೇಶಗೌಡ ದರ್ಶನಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಸಪ್ತಗಿರಿ ಆಸ್ಪತ್ರೆ ಹೃದಯ ರೋಗ ತಜ್ಞ ಡಾ| ಎ. ಹಣಮಂತ್ರರಾಯ, ನರರೋಗ ತಜ್ಞ ಡಾ| ಗೌರವಸಿಂಗ್, ಡಾ| ಶಿವಂ, ಡಾ| ದಾವಲಸಾಬ ಸೇರಿದಂತೆ ಸ್ಥಳೀಯರಾದ ಮಕ್ಕಳ ತಜ್ಞ ಡಾ| ವೆಂಕಟೇಶ ಟೊಣಪೆ, ಡಾ| ಜ್ಯೋತಿ ಇದ್ದರು.
ಸಮಾಜದ ಅಧ್ಯಕ್ಷ ರಾಜಕುಮಾರ ಚಿಲ್ಲಾಳ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಲ್ಲಿಕಾರ್ಜುನ ಚಿಲ್ಲಾಳ, ಮಲ್ಲಯ್ಯ ಫಿರಂಗಿ, ಜನಾರ್ದನ ಮಾನು, ನಾಗೇಂದ್ರ ದಂಡು, ಮಂಜುನಾಥ ಪಾಣಿಬಾತೆ, ಪ್ರಶಾಂತ ಗೋಗಿ, ಅನಿಲಕುಮಾರ, ಮಾರುತಿ ಚಿಲ್ಲಾಳ ಸೇರಿದಂತೆ ಇತರರಿದ್ದರು.