Advertisement

ಫಿಲ್ಟರ್‌ ಬೆಡ್‌ ಕೆರೆ ಖಾಲಿ ಖಾಲಿ

03:02 PM Jul 12, 2019 | Naveen |

ಮಲ್ಲಿಕಾರ್ಜುನ ಮುದ್ನೂರ
ಶಹಾಪುರ:
ನಗರಕ್ಕೆ ಕುಡಿಯುವ ನೀರು ಪೂರೈಸುವ ಫಿಲ್ಟರ್‌ ಬೆಡ್‌ ಕೆರೆ ನೀರಿಲ್ಲದೆ ಒಣಗುತ್ತಿದೆ. ಏಪ್ರಿಲ್, ಮೇನಲ್ಲಿ ನಾರಾಯಣಪುರ ಎಡದಂಡೆಯಿಂದ ನೀರು ಹರಿಸಿದಾಗ ಶಹಾಪುರ ಶಾಖಾ ಕಾಲುವೆ ಮೂಲಕ ಸಂಗ್ರಹಿಸಿಕೊಳ್ಳಲಾಗಿತ್ತು. ಈಗ ನೀರು ಖಾಲಿಯಾಗಿ ಹಲವು ದಿನಗಳಾಯಿತು.

Advertisement

ನಗರದಲ್ಲಿ ಹದಿನೈದು ದಿನಕ್ಕೊಮ್ಮೆಯೂ ನೀರು ಪೂರೈಕೆಯಾಗುತ್ತಿಲ್ಲ. ಜನರು ನೀರಿಗಾಗಿ ಪರದಾಡುವಂತಾಗಿದೆ. ನೀರಿನ ಸಮಸ್ಯೆ ಪರಿಹರಿಸುವಲ್ಲಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜನರು ಪ್ರಸಕ್ತ ವರ್ಷದಲ್ಲಿ ಕುಡಿಯುವ ನೀರಿಗಾಗಿ ಪಡುತ್ತಿರುವ ಸಂಕಷ್ಟ ಅಷ್ಟಿಷ್ಟಲ್ಲ. ಇದಕ್ಕೆಲ್ಲ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ನಾಗರಿಕರು ದೂರುತ್ತಿದ್ದಾರೆ. ಮುಂಜಾಗೃತವಾಗಿ ಯಾವುದೇ ಕ್ರಮಕೈಗೊಳ್ಳದ ಅಧಿಕಾರಿಗಳ ವಿರುದ್ಧ ಜನರುಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬೇಸಿಗೆ ಬರುವ ಮುಂಚಿತವಾಗಿಯೇ ಈ ಬಾರಿ ಕುಡಿಯುವ ನೀರಿನ ಅಭಾವ ಎದುರಿಸುವಂತಾಗಿದೆ. ನಗರದಲ್ಲಿ ಅಂತರ್ಜಲ ಮಟ್ಟ ಸಂಪೂರ್ಣ ಕುಸಿದಿದೆ. ಬೇಸಿಗೆ ಕಳೆದರೂ ಇದುವರೆಗೂ ಸಮರ್ಪಕವಾಗಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ನಗರಸಭೆ ಅಧಿಕಾರಿಗಳು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆರೋಪಿಸಿದರು.

ನಗರಸಭೆ ಕಚೇರಿ ಎದುರು ವಿವಿಧ ಬಡಾವಣೆ ಜನರು ದಿನ ದಿನಬಿಟ್ಟು ನಿತ್ಯ ಪ್ರತಿಭಟನೆ, ಧರಣಿ ನಡೆಸಿದರೂ ಯಾವುದೇ ಕ್ರಮಕೈಗೊಳ್ಳದಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದು ಚಾಮುಂಡಿ ನಗರ ನಿವಾಸಿಗಳು ದೂರಿದ್ದಾರೆ.

ನಗರದ ವಾರ್ಡ್‌ ನಂ.11 ಆನೇಗುಂದಿ ಬಡಾವಣೆ ಜನರು ನಗರಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಬಹಿಷ್ಕರಿಸಲು ಪಟ್ಟುಹಿಡಿದಿದ್ದರೂ ತಹಶೀಲ್ದಾರ್‌ ಸಂಗಮೇಶ ಜಿಡಗೆ ಮತ್ತು ನಗರಸಭೆ ಪೌರಾಯುಕ್ತ ಬಸವರಾಜ ಶಿವಪೂಜೆ ಆಗ ಬಡಾವಣೆ ಜನರ ಮನವೊಲಿಸಲು ಪ್ರಯತ್ನಿಸಿದ್ದರು. ತಾತ್ಕಾಲಿಕವಾಗಿ ನೀರು ಪೂರೈಕೆಗೆ ಟ್ಯಾಂಕರ್‌ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿತ್ತು. ಆದರೂ ಅಧಿಕಾರಿಗಳಿಂದ ಸಮರ್ಪಕ ಸ್ಪಂದನೆ ದೊರೆಯಲಿಲ್ಲ. ನಗರದ ಚಾಮುಂಡಿ ಬಡಾವಣೆ ಸೇರಿದಂತೆ ಹಲವಡೆ ಜನರು ದುಡ್ಡು ಖರ್ಚು ಮಾಡಿ ಟ್ಯಾಂಕರ್‌ ಮೂಲಕ ನೀರು ತರಿಸಿಕೊಳ್ಳುತ್ತಿದ್ದಾರೆ.

Advertisement

ನಳದಲ್ಲಿ ನೀರು ಬಾರದೇ ತಿಂಗಳುಗಳೇ ಗತಿಸಿದೆ. ವಾರಕ್ಕೊಮ್ಮೆ ಬರುತ್ತಿದ್ದ ನೀರು ಸದ್ಯ ಅದು ಮಾಯವಾಗಿದೆ. ಇನ್ನೇನು ನೀರು ಪೂರೈಕೆ ನಗರಸಭೆಗೆ ಆಗುವುದಿಲ್ಲ ಎಂಬ ಫಲಕ ಹಾಕುವುದು ಮಾತ್ರ ಬಾಕಿ ಉಳಿದಿದೆ ಎಂದು ಮಹಿಳೆಯರು ಹಿಡಿ ಶಾಪ ಹಾಕುತ್ತಿದ್ದಾರೆ.

ಫಿಲ್ಟರ್‌ ಬೆಡ್‌ ಕೆರೆಗೆ ಕಾಲುವೆ ಮೂಲಕ ನೀರು ಸಂಗ್ರಹಿಸಿದ್ದ ವೇಳೆ ಜೂನ್‌ ಅಂತ್ಯದವರೆಗೆ ಬಳಕೆಯಾಗಲಿದೆ. ಯಾವುದೇ ತೊಂದರೆ ಇಲ್ಲ ನಗರಸಬೇ ಪೌರಾಯುಕರು ಹೇಳಿದ್ದರು. ಆದರೆ ಈಗ ನೀರು ಖಾಲಿಯಾಗಿ ತಿಂಗಳಾದರೂ ಯಾವುದೇ ಕ್ರಮಕ್ಕೆ ಮುಂದಾಗದೇ ಕೈಚಲ್ಲಿ ಕುಳಿತಿದ್ದಾರೆ. ನಗರಸಭೆಗೆ ಹೋದವರಿಗೆ ನಾಲ್ಕು ದಿವಸದ ಭರವಸೆ ನೀಡಿ ಕಳುಹಿಸುತ್ತಿದ್ದಾರೆ ಎಂದು ಚಾಮುಂಡಿ ನಗರದ ಮಹಿಳೆಯರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next