ಶಹಾಪುರ: ವನ್ಯ ಸಂಪತ್ತು ಈಗ ನಶಿಸಿ ಹೋಗುತ್ತಿದ್ದು, ಭೂಮಿಯಲ್ಲಿನ ಪ್ರತಿ ಜೀವ ಸಂಕುಲ ಅನಾರೋಗ್ಯದಿಂದ ಬಳಲುವಂತಾಗಿದೆ. ಪರಿಸರ ಸಂಪತ್ತು ಅವಸಾನದತ್ತ ಸಾಗುತ್ತಿದ್ದು, ಅದರ ಸಂರಕ್ಷಣೆಗೆ ಪ್ರತಿಯೊಬ್ಬರು ಮುಂದಾಗಬೇಕು ಎಂದು ಪಿಎಸ್‌ಐ ರಾಜಕುಮಾರ ಕರೆ ನೀಡಿದರು.
ಭೀಮರಾಯನ ಗುಡಿ ಪೊಲೀಸ್ ಠಾಣೆ ಆವರಣದಲ್ಲಿ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗಿಡ ಮರಗಳಿಂದ ಮನುಷ್ಯನ ಆರೋಗ್ಯ ಉತ್ತಮವಾಗಿರಲಿದೆ. ಆರೋಗ್ಯಕರ ವಾತಾವರಣ ನಿರ್ಮಾಣವಾಗಲಿದೆ. ಗಿಡ ಮರಗಳ ಸಂಖ್ಯೆ ಕಡಿಮೆಯಾದಂತೆ ಅನಾರೊಗ್ಯ ಹೆಚ್ಚಾಗುತ್ತ ಸಾಗಲಿದೆ. ಕಾರಣ ಯುವಕರು ಇಂದಿನಿಂದಲೇ ಸಸಿ ನೆಡುವ ಮೂಲಕ ಅರಣ್ಯ ಸಂಪತ್ತು ರಕ್ಷಣೆ ಮಾಡುವ ಮೂಲಕ ಸಮಾಜದಲ್ಲಿ ಉತ್ತಮ ವಾತಾವರಣ ನಿರ್ಮಾಣಕ್ಕೆ ಮುಂದಗಬೇಕು ಎಂದು ಸಲಹೆ ನೀಡಿದರು. ಕೇವಲ ಸಸಿ ನೆಟ್ಟು ಕೈತೊಳೆದುಕೊಳ್ಳುವುದು ಮುಖ್ಯವಲ್ಲ. ಅದನ್ನು ಸಂರಕ್ಷಣೆ ಮಾಡಬೇಕು. ನಿತ್ಯ ನೀರುಣಿಸುವ ಮೂಲಕ ಬೆಳೆಸಬೇಕು. ಆಗ ಅದಕ್ಕೊಂದು ಅರ್ಥ ಬರಲಿದೆ. ಜೀವ ಸಂಕುಲ ಆರೋಗ್ಯಕರವಾಗಿ ಬಾಳಬೇಕಾದಲ್ಲಿ, ಪ್ರಕೃತಿಯಡಿ ಮಳೆ, ಗಾಳಿ ಮತ್ತು ಬೆಳಕು ಅತ್ಯಗತ್ಯ. ಇದನ್ನು ನಾವು ಶುದ್ಧವಾಗಿ ಪಡೆಯಬೇಕಾದ್ದಲ್ಲಿ ನಾವೆಲ್ಲರೂ ಸಸಿಗಳನ್ನು ನೆಟ್ಟು ಹಸಿರುಮಯ ವಾತಾವರಣ ನಿರ್ಮಾಣದ ಶಪಥ ಮಾಡಬೇಕಿದೆ. ಅಲ್ಲದೆ ಮುಖ್ಯವಾಗಿ ಯುವಕರು ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಎರಚುವುದನ್ನು ಮತ್ತು ಅದರ ಬಳಕೆ ನಿಲ್ಲಿಸಬೇಕಿದೆ. ಇಂತಹ ಸಣ್ಣ ಪುಟ್ಟ ಕೆಲಸಗಳನ್ನು ಮಾಡದಿರುವ ಬಗ್ಗೆ ಎಲ್ಲರೂ ಪ್ರಮಾಣ ಮಾಡಬೇಕಿದೆ ಎಂದು ಹೇಳಿದರು. ಉಪ ವಲಯ ಅರಣ್ಯಾಧಿಕಾರಿ ಬಿ.ವಿ. ಹೂಗಾರ ಮತ್ತು ಅರಣ್ಯ ರಕ್ಷಕ ಶ್ರೀಧರ ಯಕ್ಷಿಂತಿ ಇದ್ದರು.