Advertisement

ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಿ: ಹೂಗಾರ

03:22 PM Jul 07, 2019 | Naveen |

ಶಹಾಪುರ: ನಮ್ಮ ದೇಶದಲ್ಲಿ ಎಲ್ಲರೂ ಸಂವಿಧಾನ ಬದ್ಧವಾಗಿ ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ನಡೆಸುತ್ತಾರೆ. ತಮ್ಮ ಹಕ್ಕಿಗಾಗಿ ಸಂಘಟನಾತ್ಮಕವಾಗಿ ಪ್ರತಿನಿತ್ಯ ಪ್ರತಿಭಟನೆ, ಧರಣಿಗಳನ್ನು ನಡೆಸುತ್ತಾರೆ. ಆದರೆ ಅದೇ ಸಂವಿಧಾನದಲ್ಲಿ ಉಲ್ಲೇಖೀಸಲಾದ ತಮ್ಮ ಕರ್ತವ್ಯ ನಿರ್ವಹಿಸುವ ಕುರಿತು ಯಾರೊಬ್ಬರು ಮಾತಾಡುವುದಿಲ್ಲ ಎಂದು ಉಪ ವಲಯ ಅರಣ್ಯಾಧಿಕಾರಿ ಐ.ಬಿ.ಹೂಗಾರ ಬೇಸರ ವ್ಯಕ್ತಪಡಿಸಿದರು.

Advertisement

ಪಟ್ಟಣದ ದೇವಿ ನಗರದಲ್ಲಿರುವ ಸೇಂಟ್ ಪೀಟರ್‌ ಶಾಲೆಯಲ್ಲಿ ಆಯೋಜಿಸಲಾಗಿದ್ದ ಪರಿಸರ ದಿನಾಚರಣೆ ಹಾಗೂ ಸಂತಪ್ರೇತರ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಳೆದ ಹತ್ತಾರು ವರ್ಷಗಳ ಹಿಂದೆ ಜಾಗತಿಕ ತಾಪಮಾನ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತಿತ್ತು. ಪ್ರಸ್ತುತ ಜಾಗತಿಕ ತಾಪಮಾನದ ಬಗ್ಗೆ ಹಳ್ಳಿ ಹಳ್ಳಿ ಪ್ರತಿ ವಾರ್ಡ್‌ಗಳಲ್ಲಿ ಚರ್ಚಿಸುವ ಸ್ಥಿತಿ ನಿರ್ಮಾಣವಾಗಿದೆ. ಮೊನ್ನೆ ಕಳೆದ ಬೇಸಿಗೆ ಎಷ್ಟೊಂದು ಘೋರವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ನೀರಿನ ಅಭಾವ ರಣ ಬಿಸಿಲಿನ ಪ್ರಖರತೆ ನಾವೆಲ್ಲ ಕಂಡಿದ್ದೇವೆ. ಇದಕ್ಕೆಲ್ಲ ಕಾರಣ ಪರಿಸರ ಅಸಮತೋಲನವೇ ಕಾರಣ ಎಂದರು. ಭೂಮಿಯೊಂದು ಪರ್ಯಾಯ ದ್ವೀಪ. ಶೇ. 75ರಷ್ಟು ಈ ಪ್ರಪಂಚ ನೀರಿನಿಂದ ಕೂಡಿದೆ. ಇನ್ನೂ ಶೇ. 25ರಷ್ಟು ಮಾತ್ರ ಭೂಮಿ ಇದೆ. ಶೇ. 97ರಷ್ಟು ಸಮುದ್ರಗಳ ಮೂಲಕ ದೊರೆಯುವ ನೀರು ಉಪ್ಪು ನೀರಿನಿಂದ ಅಲ್ಲದೆ ಈ ನೀರು ಕೃಷಿಗೆ ಮತ್ತು ಕುಡಿಯಲು ಬಳಕೆಗೆ ಬರುವುದಿಲ್ಲ. ಇನ್ನೂ ಶೇ. 3ರಷ್ಟು ನೀರು ಮಾತ್ರ ಹಿಮಾಲಯದಿಂದ ಹಿಮ ಕರಗಿ ನದಿಗಳ ಮೂಲಕ ಬರುವ ನೀರು ಮಾತ್ರ ಕುಡಿಯಲು ಬಳಸಲು ಸಹಕಾರಿಯಾಗಿದೆ ಎಂದರು.

ಕಾರಣ ಈಗಲೇ ಪ್ರತಿಯೊಬ್ಬರು ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಬೇಕು. ಡಾ| ಅಂಬೇಡ್ಕರ್‌ ಅವರು ಸಂವಿಧಾನದಲ್ಲಿ ಮೂಲಭೂತ ಕರ್ತವ್ಯಗಳ ಕುರಿತು ತಿಳಿಸಿದ್ದಾರೆ. ಆ ಕುರಿತು ಎಲ್ಲರೂ ಯೋಚಿಸಿ ನಮ್ಮ ಕರ್ತವ್ಯಗಳನ್ನು ಅರಿತು ಮರಗಿಡ, ನದಿಗಳನ್ನು ರಕ್ಷಿಸಬೇಕು ಎಂದು ಕರೆ ನೀಡಿದರು.

ಫಾದರ್‌ ಫೆಡ್ರಿಕ್‌ ಡಿಸೋಜಾ ಮಾತನಾಡಿ, ಮಕ್ಕಳು ಸಂತಪ್ರೇತರ ತತ್ವಾದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಎಲ್ಲರನ್ನು ಪ್ರೀತಿಸಬೇಕು. ಉತ್ತಮ ಗುಣಗಳನ್ನು ಮೈಗೂಡಿಸಿಕೊಂಡು ಸಮಾಜದ ಒಳಿತಿಗಾಗಿ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

Advertisement

ಶಾಲೆಯ ಮುಖ್ಯಗುರು ಮಾತೆ ಸಿಸ್ಟರ್‌ ರೀನಾ ಡಿಸೋಜಾ, ಅರಣ್ಯ ರಕ್ಷಕ ಶ್ರೀಧರ ಯಕ್ಷಿಂತಿ, ಶಾಲಾ ಪಿಟಿಎ ಉಪಾಧ್ಯಕ್ಷ, ಪತ್ರಕರ್ತ ಮಲ್ಲಿಕಾರ್ಜುನ ಮುದ್ನೂರ, ಅರಣ್ಯ ರಕ್ಷಕ ಸೋಮರಾಯ, ಹಣಮಂತ ಸೇರಿದಂತೆ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಕುರಿತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಶಾಲೆಯಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನವು ವಿತರಿಸಲಾಯಿತು. ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next