ಶಹಾಪುರ: ತಾಲೂಕಿನಾದ್ಯಂತ ನೀರಿನ ಸಮಸ್ಯೆ ಕಾಡುತ್ತಿದೆ. ಸಮರ್ಪಕವಾಗಿ ನೀರು ದೊರೆಯದೇ ಜನರು ಮತ್ತು ಜಾನುವಾರುಗಳು ಪರದಾಡುವಂತಾಗಿದೆ. ಇಂತಹ ಸಂದರ್ಭದಲ್ಲಿ ಜಾನುವಾರುಗಳಿಗೆ ನೀರು ಒದಗಿಸುವ ಕಾರ್ಯ ಸದ್ದಿಲ್ಲದೇ ನಡೆದಿದೆ.
ನಗರದಿಂದ 8 ಕಿಮೀ ದೂರದ ಕನ್ಯಾಕೋಳೂರಗೆ ತೆರಳುವ ಮಾರ್ಗದಲ್ಲಿ ಜಾನುವಾರುಗಳ ನೀರಿನ ದಾಹ ಇಳಿಸುವ ಕಾರ್ಯ ಕಳೆದ ಹಲವು ದಿನಗಳಿಂದ ನಡೆಯುತ್ತಿದೆ. ಗ್ರಾಮದ ಯುವ ರೈತ ನೀಲಕಂಠ ಕಡಗಂಚಿ ತೊಟ್ಟಿ ಇಟ್ಟು ನೀರಿನ ವ್ಯವಸ್ಥೆ ಮಾಡಿದ್ದು, ಜಾನುವಾರುಗಳಿಗೆ ಅನುಕೂಲವಾಗಿದೆ.
ತನ್ನ ಜಮೀನಿರುವ ಸುತ್ತಲಿನ ಪ್ರದೇಶದಲ್ಲಿ ಇರುವ ತೆರದ ಮತ್ತು ಕೊಳವೆ ಬಾವಿ, ಕೆರೆ ಹಳ್ಳಗಳು ಬತ್ತಿರುವ ಕಾರಣ ಜಾನುವಾರುಗಳಿಗೆ ನೀರಿನ ಹಾಹಾಕಾರ ಉಂಟಾಗಿರವುದು ಗಮನಿಸಿದ ರೈತ ನೀಲಕಂಠ ನೀರಿನ ತೊಟ್ಟಿ ನಿರ್ಮಿಸಿದ್ದಾರೆ.
ತಮ್ಮ ಜಮೀನಿನ ಮುಂದೆ ರಸ್ತೆ ಬದಿ ಅಂದಾಜು 40 ಸಾವಿರ ರೂ. ಖರ್ಚು ಮಾಡಿ ಸಿಮೆಂಟ್ ಮೂಲಕ ತಯಾರಿಸಿದ ನೀರಿನ ತೊಟ್ಟಿ ಇಸಿದ್ದಾರೆ. ತನ್ನ ಜಮೀನಿನಲ್ಲಿರುವ ಕೊಳವೆ ಬಾವಿಯಿಂದ ಅವುಗಳಿಗೆ ನಿತ್ಯ ನೀರು ತುಂಬಿಸಲಾಗುತ್ತಿದ್ದು, ಬಾಯಾರಿದಾಗ ಜಾನುವಾರುಗಳು ಬಂದು ನೀರು ಕುಡಿಯುತ್ತಿವೆ. ಇದು ರೈತಾಪಿ ಜನರ ಮೆಚ್ಚುಗೆಗೂ ಪಾತ್ರವಾಗಿದೆ. ನಿತ್ಯ ಇಲ್ಲಿಗೆ ದನ ಕಾಯುವ ಹುಡಗರು, ಕುರಿಗಾಯಿಗರು ಜಾನುವಾರುಗಳನ್ನು ಕರೆ ತಂದು ನೀರು ಕುಡಿಸಿಕೊಂಡು ತೆರಳುವುದು ಸಾಮಾನ್ಯವಾಗಿದೆ. ಅಡವಿಯಲ್ಲಿ ಎಲ್ಲೂ ನೀರಿಲ್ಲ. ಸಾಹುಕಾರರು ಜಮೀನನ ಹತ್ತಿರ ನೀರಿನ ಸೌಕರ್ಯ ಮಾಡಿಕೊಟ್ಟಿದ್ದಾರೆ. ಇದರಿಂದ ತುಂಬಾ ಅನುಕೂಲವಾಗಿದೆ ಎನ್ನುತ್ತಾರೆ ಕುರಿಗಾಯಿ ಬೀರಪ್ಪ.
•ಮಲ್ಲಿಕಾರ್ಜುನ ಮುದ್ನೂರ