Advertisement

ಇಂಜಿನಿಯರ್‌ ಹುಡುಗನೀಗ ಯಶಸ್ವಿ ರೈತ..

11:58 AM Apr 28, 2019 | Naveen |

ಶಹಾಪುರ: ಓದಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್‌. ಹೇಗೋ ಕಷ್ಟಪಟ್ಟು ಓದಿ ಬದುಕಿನ ಬಂಡಿ ಸಾಗಿಸಬೇಕೆಂದು ಮುನ್ನಡೆದರೂ ಕೈಗೆಟುಕದ ಉದ್ಯೋಗ, ಅಸಮರ್ಪಕ ಸಂಬಳ ಹಾಗೂ ಕೃಷಿ ಮೇಲಿನ ಆಸಕ್ತಿಯಿಂದ ಕೃಷಿ ಮೂಲಕವೇ ಜೀವನ ಹಸಿರಾಗಿಸಿಕೊಂಡು ಹೊಸ ದಾರಿ ಕಂಡುಕೊಂಡ ಒಬ್ಬ ವಿದ್ಯಾವಂತನ ಕಥೆಯಿದು.

Advertisement

ಹೌದು, ಶಹಾಪುರ ನಿವಾಸಿಯಾದ ನೀಲಕಂಠ ಸುಭಾಷ ಕಡಗಂಚಿ ಅವರ ಯಶಸ್ವಿ ಬದುಕಿನ ಚಿತ್ರಣವಿದು. ಈತ ಓದಿನಲ್ಲೂ ತುಂಬ ಜಾಣ. ಮೆಕ್ಯಾನಿಕಲ್ ಮುಗಿಸಿ ವೃತ್ತಿ ಅರಸಿ ಕೆಲ ವರ್ಷಗಳ ಕಾಲ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ. ಲಾಭ-ನಷ್ಟ ಲೆಕ್ಕ ಹಾಕದ ಈತ ಮಾಡುವ ಕೆಲಸ ಶ್ರದ್ಧೆಯಿಂದ ಅಚ್ಚುಕಟ್ಟಾಗಿ ಮಾಡುತ್ತಿದ್ದ.

ಕಷ್ಟಗಳಿಗೆ ಸ್ಪಂದನೆ: ಆದರೆ ಮೆಕ್ಯಾನಿಕಲ್ ಕೆಲಸ ಮುಗಿಸಿ ಕೆಲವೊಂದು ಕಂಪನಿಗಳಲ್ಲಿ ದುಡಿಯುತ್ತ ಕೆಲ ದಿನ ಬದುಕಿನ ಬಂಡಿ ದೂಡಿದ. ನಂತರ ಕೈಗೆಟುಕದ ಸಂಬಳ, ಇತರ ತೊಂದರೆಯಿಂದ ನಗರದಲ್ಲಿ ಬಸವ ವ್ಹೀಲ್ ಅಲೈನ್‌ಮೆಂಟ್ ಶಾಪ್‌ ತೆಗೆಯುತ್ತಾರೆ. ಇಲ್ಲಿ ಸ್ವತಃ ವಾಹನಗಳ ವ್ಹೀಲ್ ಅಲೈನ್‌ಮೆಂಟ್ ಕೆಲಸವನ್ನು ಹಲವಾರು ವರ್ಷದಿಂದ ಇಂದಿಗೂ ಯಶಸ್ವಿಯಾಗಿ ಮುಂದುವರಿಸಿದ್ದಾರೆ. ಜೊತೆಗೆ ತಮ್ಮ ಶಾಪ್‌ನಲ್ಲಿ ನಾಲ್ಕಾರು ಜನರಿಗೆ ಕೆಲಸ ಕೊಟ್ಟು ಇತರರ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ.

ಹೆಚ್ಚಾದ ಕೃಷಿ ಬಯಕೆ: ಮೊದಲಿನಿಂದ ಕೃಷಿ ಮಾಡಬೇಕೆಂಬ ಬಯಕೆ ಹೊಂದಿರುವ ಕಾರಣ ನಗರ ಸಮೀಪ ಎರಡು ಎಕರೆ ಜಮೀನು ಖರೀದಿಸಿ, ಭೂಮಿ ಹದಗೊಳಿಸಿ ಒಂದಿಷ್ಟು ತರಕಾರಿ, ಶೇಂಗಾ ಬೆಳೆ ಬೆಳೆದಿದ್ದಾರೆ. ಮರು ವರ್ಷ ಹಲವಾರು ಕಡೆ ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಭೇಟಿಯಾಗಿ ಮತ್ತು ಕೃಷಿ ಸಂಶೋಧಕರು, ಬಾಗಲಕೋಟೆ ಕೃಷಿ ಸಂಶೋಧನ ಕೇಂದ್ರ ಸಮೀಪದ ಭೀಮರಾಯನ ಗುಡಿ ಕೃಷಿ ವಿಜ್ಞಾನಿಗಳನ್ನು ಭೇಟಿಯಾಗಿ ವಿವಿಧ ಬೆಳೆ ಬೆಳೆಯುವ ಕುರಿತು ಮಾಹಿತಿ ಪಡೆಯುತ್ತಾರೆ. ಅಲ್ಲದೆ ಹಲವಾರು ರೈತರು ಬೆಳೆದಿರುವ ಬೆಳೆ ಬಗ್ಗೆ ಸ್ವತಃ ಜಮೀನಿಗೆ ಹೋಗಿ ನೋಡಿಕೊಂಡು ಕೃಷಿಯಲ್ಲಿ ನೂತನ ಪ್ರಯೋಗ ಮಾಡುವ ಮೂಲಕ ಹೊಸದೊಂದು ದಾರಿ ಕಂಡುಕೊಂಡಿದ್ದಾರೆ.

ವಾರಕ್ಕೊಮ್ಮೆ ಆದಾಯ: ಪ್ರಸ್ತುತ ಜಮೀನಿನಲ್ಲಿ ಹನಿ ಡ್ರಾಪ್‌ ಅಳವಡಿಸಿಕೊಂಡು ಕಲ್ಲಂಗಡಿ ಮತ್ತು ಸೋರೆಕಾಯಿ, ಬೆಂಡೆಕಾಯಿ, ಟೊಮ್ಯಾಟೊ, ನುಗ್ಗೆಕಾಯಿ, ಬದನೆಕಾಯಿ, ಹೀರೆಕಾಯಿ ಸೇರಿದಂತೆ ವಿವಿಧ ತರಕಾರಿ ಬೆಳೆಯುವ ಮೂಲಕ ಯಶಸ್ವಿ ರೈತನಾಗಿಯೂ ಹೊರಹೊಮ್ಮಿದ್ದಾರೆ. ಅಲ್ಲದೆ ಕಲ್ಲಂಗಡಿ ನಡುವೆ ಚೆಂಡು ಹೂವಿನ ಎರಡ್ಮೂರು ಸಾಲು ನೆಟ್ಟು ವಾರಕ್ಕೆ ಸಾವಿರ ರೂ. ಹೂವು ಮಾರಾಟ ಮಾಡುವ ಮೂಲಕ ಇತರ ರೈತರಿಗೂ ಮಾದರಿಯಾಗಿದ್ದಾರೆ.

Advertisement

30 ಟನ್‌ ಕಲ್ಲಂಗಡಿ: ಕಲ್ಲಂಗಡಿ ಬೆಳೆಯಲು ಭೂಮಿ ಹದ ಮಾಡಿಕೊಂಡು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಮೊದಲ ಬಾರಿಗೆಯೇ ಎಕರೆಗೆ 30 ಟನ್‌ ಕಲ್ಲಂಗಡಿ ಬೆಳೆ ತೆಗೆದಿದ್ದಾರೆ. ಮತ್ತು ಇದನ್ನು 8 ರೂ. ಕೆ.ಜಿಯಂತೆ ಮಾರಾಟ ಮಾಡಿ ಯಶಸ್ಸು ಕಂಡಿದ್ದಾರೆ. ಎರಡು ಎಕರೆಯಲ್ಲಿ ಒಂದಿಷ್ಟು ವಿವಿಧ ತರಕಾರಿ ಬೆಳೆದರೆ, ಇನ್ನೊಂದು ಎಕರೆಯಲ್ಲಿ ಸುಮಾರು ಒಂದು ಲಕ್ಷ ರೂ.ಖರ್ಚು ಮಾಡಿ ಕಲ್ಲಂಗಡಿ ಸಸಿ ಹಚ್ಚಿದ್ದಾರೆ.

ಉತ್ತಮ ಲಾಭ: ಇದು ಕೇವಲ 65 ದಿನದ ಬೆಳೆಯಾಗಿದ್ದು, 65 ದಿನದಲ್ಲಿ 2.40 ಲಕ್ಷ ರೂ. ಬೆಳೆ ಬೆಳೆದಿದ್ದಾರೆ. ಎಕರೆಗೆ 30 ಟನ್‌ ಕಲ್ಲಂಗಡಿ ಬೆಳೆದು, ಮಾಡಿದ ಇತರೆ ಖರ್ಚು ತೆಗೆದರೂ ಎರಡು ತಿಂಗಳಲ್ಲಿ 1.50 ಲಕ್ಷ ರೂ. ಲಾಭ ಹೊಂದಿದ್ದಾರೆ.

ಪ್ರಸ್ತುತ ಎರಡನೇ ಬಾರಿ ಕಲ್ಲಂಗಡಿ ಸಸಿ ನೆಡುತ್ತಿದ್ದು, ಈ ಬಾರಿ ಖರ್ಚು ಕಡಿಮೆ ಮಾಡಿದ್ದು ಲಾಭ ದುಪ್ಪಟ್ಟು ಬಂದಿದೆ ಎನ್ನುತ್ತಾರೆ ನೀಲಕಂಠ ಕಡಗಂಚಿ. ಇದಕ್ಕೆ ಮೊದಲ ಬೆಳೆಗೆ ಹನಿ ಡ್ರಾಪ್‌ ಇತರೆ ಕೆಲಸಕ್ಕೆ ಖರ್ಚು 1 ಲಕ್ಷ ರೂ.ಆಗಿತ್ತು. ಪ್ರಸ್ತುತ ಸಸಿ ಮಾತ್ರ ನೆಡುವುದು, ಒಂದಿಷ್ಟು ಔಷಧೋಪಚಾರ ಖರ್ಚು ಮಾತ್ರ ಬರಲಿದೆ. ಅಲ್ಲದೆ ಸ್ನೇಹಿತರಿಗೆ ತನ್ನ ಜಮೀನು ತೋರಿಸಿ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ.

ಚಿಕ್ಕಂದಿನಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ತರಕಾರಿ ಜತೆ ಕಲ್ಲಂಗಡಿ ಬೆಳೆಯುತ್ತಿದ್ದೇನೆ. ಇದು ಲಾಭ ತಂದು ಕೊಟ್ಟಿದೆ. ತರಕಾರಿಯಿಂದ ವಾರಕ್ಕೊಮ್ಮೆ 1000ದಿಂದ 2000 ರೂ. ಬರುತ್ತದೆ. ಬಂದ ಹಣವನ್ನೇ ಕಲ್ಲಂಗಡಿ ಬೆಳೆ ನಿರ್ವಹಣೆಗೆ, ಔಷಧೋಪಚಾರ ಹಾಗೂ ಇತರೆ ಖರ್ಚಿಗೆ ಬಳಸುತ್ತೇನೆ. ನಿತ್ಯ ಬೆಳಗಿನ ಜಾವ ಹೊಲದಲ್ಲಿ ಕೈಲಾದ ಕೆಲಸ ಮಾಡುತ್ತೇನೆ. 10 ಗಂಟೆ ನಂತರ ಅಂಗಡಿಗೆ ಹೋಗುತ್ತೇನೆ. ಕೃಷಿ ಮನಸ್ಸಿಗೆ ತೃಪ್ತಿ ಮತ್ತು ಆದಾಯ ತಂದಿದೆ.
•ನೀಲಕಂಠ ಕಡಗಂಚಿ,
ಶಹಾಪುರ

Advertisement

Udayavani is now on Telegram. Click here to join our channel and stay updated with the latest news.

Next