ಶಹಾಪುರ: ಮಾನವ ತನ್ನ ಆಸೆ ಆಕಾಂಕ್ಷೆಗಳ ಈಡೇರಿಕೆಗೆ ಭೂಮಿ ಒಡಲು ಕೊರೆದು ಭವ್ಯ ಕಟ್ಟಡ ನಿರ್ಮಿಸಿಕೊಳ್ಳುತ್ತಿದ್ದಾನೆ. ಇದು ದಿನೇ ದಿನೇ ಹೆಚ್ಚಾಗುತ್ತಿದೆ. ಅಗತ್ಯಕ್ಕನುಗುಣವಾಗಿ ಬಳಸುವ ಮೂಲಕ ಭೂಮಿ ಸಂರಕ್ಷಣೆ ಮಾಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಜೀವ ಸಂಕುಲ ಉಳಿಯುವುದು ಅನುಮಾನ ಎಂದು ಹಿರಿಯ ಶ್ರೇಣಿ ನ್ಯಾಯಾಲಯದ ನ್ಯಾಯಾಧೀಶ ಪ್ರಭು ಎನ್. ಬಡಿಗೇರ ಕಳವಳ ವ್ಯಕ್ತಪಡಿಸಿದರು.
ನಗರದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನವನ ಬೇಕಾಬಿಟ್ಟಿ ಕೃತ್ಯಗಳಿಗೆ ಭೂಮಿ ಮೇಲಿನ ಪದರು ನಾಶವಾಗುತ್ತಿದೆ. ಈಗಲೇ ಎಚ್ಚರವಹಿಸಬೇಕು. ಮಳೆ ಬಂದಾಗ ನೀರು ಹರಿದು ಸವಕಳಿಯಾಗುತ್ತದೆ. ಇದರ ರಕ್ಷಣೆಗೆ ಗಿಡಗಳನ್ನು ಬೆಳೆಸಬೇಕು. ಮಾತ್ರವಲ್ಲದೇ ಮರಗಳನ್ನು ಉಳಿಸಬೇಕು. ಅತಿಯಾಗಿ ಭೂಮಿ ಕೊರೆದು ಕೊಳವೆಬಾವಿ ಮೂಲಕ ನೀರು ಸೆಳೆದುಕೊಳ್ಳುವುದು ಅಪಾಯಕಾರಿ ಬೆಳೆವಣಿಗೆಯಾಗಿದೆ. ನೀರಿನ ಅವಶ್ಯಕತೆ ಇದ್ದಷ್ಟು ಮಾತ್ರ ಬಳಕೆಮಾಡಿಕೊಳ್ಳಬೇಕು ಎಂದು ಹೇಳಿದರು.
ಅನ್ನ ನೀಡುವ ಭೂಮಿ ಸಂರಕ್ಷಣೆ ಮಾಡದೆ ಹೋದರೆ ಮುಂದೆ ಅಪಾಯ ಕಟ್ಟಿಟ್ಟ ಬುತ್ತಿ. ಅಗತ್ಯಕ್ಕನುಗುಣವಾಗಿ ಭೂಮಿ, ನೀರು ಬಳಕೆ ಮಾಡಬೇಕು. ಮುಂದಿನ ಪೀಳಿಗೆ ಉಳಿಯಬೇಕಾದರೆ ಭೂಮಿ ಮೇಲೆ ಹೆಚ್ಚಿನ ಒತ್ತಡ ಹಾಕಬಾರದು ಎಂದು ಹೇಳಿದರು.
ಇಲ್ಲಿನ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆದ ತಕ್ಷಣ ಮೇವಿಗೆ ಬೆಂಕಿ ಹಚ್ಚುವುದು ಸರಿಯಲ್ಲ. ಇದರಿಂದ ಮಣ್ಣಿನಲ್ಲಿ ಇರುವ ಜೀವ ಕಣಗಳು ನಾಶವಾಗುತ್ತವೆ. ಅಲ್ಲದೆ ಅತಿಯಾದ ನೀರು ಬಳಕೆಯಿಂದ ಭೂಮಿ ಸವಳಾಗುತ್ತದೆ. ಬಿತ್ತನೆ ಮಾಡುವಾಗ ರೈತರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿ ಅದರ ಗುಣಧರ್ಮದಂತೆ ಬೀಜ ಬಿತ್ತಬೇಕು ಎಂದು ಸಲಹೆ ನೀಡಿದರು.
ನ್ಯಾಯಾಯಾಧೀಶರಾದ ಎಚ್.ಆರ್. ಕುಲಕರ್ಣಿ, ಕಾಡಪ್ಪ ಹುಕ್ಕೇರಿ, ಸರಕಾರಿ ಅಭಿಯೋಜಕ ಗುರುಲಿಂಗಪ್ಪ ತೇಲಿ, ವಕೀಲರ ಸಂಘದ ಅಧ್ಯಕ್ಷ ಸಾಲೋಮನ್ ಆಲ್ಫ್ರೆಡ್, ಕಾರ್ಯದರ್ಶಿ ಸಂತೋಷ ಸತ್ಯಂಪೇಟೆ, ಹಿರಿಯ ವಕೀಲರಾದ ಭಾಸ್ಕರರಾವ್ ಮುಡಬೂಳ, ಬಿ.ಎಂ. ರಾಂಪುರೆ, ಮಲ್ಲಿಕಾರ್ಜುನ ಬುಕ್ಕಲ, ಶರಬಣ್ಣ ರಸ್ತಾಪುರ, ಆರ್.ಎಂ. ಹೊನ್ನಾರಡ್ಡಿ, ಹಯ್ನಾಳಪ್ಪ ಹಯ್ನಾಳಕರ, ಅಮರೇಶ ನಾಯಕ ಇಟಗ, ಶರಣಪ್ಪ ಪ್ಯಾಟಿ ಇದ್ದರು.