Advertisement

ಫಿಲ್ಟರ್‌ ಬೆಡ್‌ ಕೆರೆಗೆ ಕೃಷ್ಣ ಕಳೆ

11:32 AM Apr 28, 2019 | Naveen |

ಶಹಾಪುರ: ನಗರದ ನಾಗರ ಕೆರೆ ಮತ್ತು ಮಾವಿನ ಕರೆ ಸೇರಿದಂತೆ ಫಿಲ್ಟರ್‌ ಬೆಡ್‌ ಕೆರೆ ಜನರ ಜೀವನಾಡಿಯಾಗಿದ್ದು, ಇದೀಗ ಬತ್ತಿದ ಕೆರೆಗಳಿಗೆ ಹರಿದ ಕೃಷ್ಣೆಯಿಂದ ಜೀವ ಕಳೆ ಬಂದಂತಾಗಿದೆ.

Advertisement

ಪ್ರಸ್ತುತ ಈ ಮೂರು ಕೆರೆಗಳಲ್ಲಿ ನೀರು ಬತ್ತಿದ್ದು, ಜೀವ ಸಂಕುಲಗಳಿಗೆ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ನಾಗರ ಮತ್ತು ಮಾವಿನ ಕೆರೆಗಳು ಬತ್ತಿರುವುದರಿಂದ ನಗರದ ಕೊಳವೆ ಬಾವಿಗಳಲ್ಲಿ ಅಂತರ್ಜಲ ಮಟ್ಟ ಕುಸಿದ ಪರಿಣಾಮ ಅಂದಾಜು ನಗರದ 200ಕ್ಕೂ ಹೆಚ್ಚು ಕೊಳವೆಬಾವಿಗಳು ಅಂತರ್ಜಲ ಕುಸಿತದಿಂದ ಸ್ಥಗಿತಗೊಂಡಿದ್ದವು.

ಅತಿರೇಕವಾದ ನೀರಿನ ಸಮಸ್ಯೆ: ಹೀಗಾಗಿ ಕಳೆದ ಎರಡ್ಮೂರು ತಿಂಗಳಿಂದ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ಈಚೆಗೆ ಫಿಲ್ಟರ್‌ ಬೆಡ್‌ ಕೆರೆ ನೀರು ಖಾಲಿಯಾಗಿರುವುದರಿಂದ ಜನತೆಗೆ ವಾರಕ್ಕೊಮ್ಮೆ ನೀರು ಸಿಗದೇ ಎಲ್ಲ ನಲ್ಲಿಗಳು ಮತ್ತು ಸಾಕಷ್ಟು ಕೊಳವೆಬಾವಿಗಳು ಸ್ಥಗಿತಗೊಂಡಿದ್ದವು. ಇದರಿಂದ ನೀರಿನ ಸಮಸ್ಯೆ ಅತಿರೇಕವಾಗಿತ್ತು.

ಚಾಮುಂಡಿ ನಗರ, ಆನೇಗುಂದಿ ಓಣಿ, ಮೋಚಿಗಡ್ಡ ಪ್ರದೇಶದ ಸುತ್ತಲಿನ ಬಡಾವಣೆಯಲ್ಲಿ ನೀರಿಗಾಗಿ ನಿತ್ಯ ಪರದಾಡುವಂತಾಗಿತ್ತು. ಇನ್ನೆರಡು ತಿಂಗಳ ಕಾಲ ನೀರಿಲ್ಲದೆ ಕಾಲ ಹೇಗೆ ಕಳೆಯುವುದು ಎಂಬ ಆತಂಕ ಜನರಲ್ಲಿ ಮನೆ ಮಾಡಿತ್ತು.

ನೀರಿಗೆ ನಿತ್ಯ ಪರದಾಟ: ಇಡೀ ನಗರಕ್ಕೆ ಕುಡಿಯುವ ನೀರು ಪೂರೈಸುವ ಫಿಲ್ಟರ್‌ ಬೆಡ್‌ ಕೆರೆಯಲ್ಲಿ ನೀರು ಖಾಲಿಯಾಗಿ ಬರಿದಾಗಿತ್ತು. ಭಾಗಶಃ ಕೆರೆ ಅಂಗಳ ಬಾಯ್ತೆರೆದು ನಿಂತ ಸ್ಥಿತಿ ಕಂಡು ಮರುಕ ಪಡುವಂತ ದೃಶ್ಯ ಕಾಣತಿತ್ತು. ಇಂತಹ ಸಂದರ್ಭದಲ್ಲಿ ಶನಿವಾರ ಕೃಷ್ಣಾ ಕಾಡಾ ಕಾಲುವೆ ಮೂಲಕ ನೀರು ಆಗಮಿಸಿದ್ದು, ಫಿಲ್ಟರ್‌ ಬೆಡ್‌ ಕೆರೆ ತುಂಬಿಸುವ ಕಾರ್ಯ ನಡೆದಿದೆ.

Advertisement

ನಾಗರ ಕೆರೆ ತುಂಬಿಸಿ: ಶನಿವಾರ ಕೃಷ್ಣಾ ಕಾಡಾ ಕಾಲುವೆಯಿಂದ ಬಂದ ನೀರು ಕೆರೆಗೆ ಜೀವ ಕಳೆ ತಂದಿದೆ. ಫಿಲ್ಟರ್‌ ಬೆಡ್‌ ಕೆರೆ ಸಂಪೂರ್ಣ ತುಂಬಿಸಿದ್ದಲ್ಲಿ ಬೇಸಿಗೆ ಕಳೆಯಬಹುದು ಎನ್ನುವ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿವೆ. ಹೀಗಾಗಿ ಫಿಲ್ಟರ್‌ ಬೆಡ್‌ ಕೆರೆ ತುಂಬಿಸುವ ಜತೆಗೆ ನಗರದಲ್ಲಿ ಅಂತರ್ಜಲ ಚೇತರಿಕೆಗಾಗಿ ನಾಗರ ಕೆರೆ ಸಹ ತುಂಬಿಸಬೇಕೆನ್ನುವ ಒತ್ತಾಯಗಳು ದಟ್ಟವಾಗಿವೆ.

ಇದರಿಂದ ಸ್ಥಗಿತಗೊಂಡಿದ್ದ ಕೊಳವೆಬಾವಿಗಳು ಕಾರ್ಯನಿರ್ವಹಿಸಲಿವೆ. ನಾಗರ ಕೆರೆಯಲ್ಲಿ ನೀರು ತುಂಬಿದ್ದಲ್ಲಿ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಚೇತರಿಕೆ ಕಾಣಲಿದೆ ಎಂದು ನಗರಸಭೆ ಮಾಜಿ ಸದಸ್ಯ ವಸಂತಕುಮಾರ ಸುರಪುರಕರ್‌ ತಿಳಿಸಿದ್ದಾರೆ.

ವಾರ್ಡ್‌ ನಂ.1, 3, 5, 6, 7, 8, 9 ಮತ್ತು 10ರಲ್ಲಿ ಕೊಳವೆಬಾವಿಗಳು ಅಂತರ್ಜಲ ಕುಸಿತದಿಂದ ಬತ್ತಿವೆ. ಕಳೆದ 70 ವರ್ಷದಲ್ಲಿ ಇಂತಹ ಸಮಸ್ಯೆ ಉಂಟಾಗಿರಲಿಲ್ಲ. ನಗರಸಭೆ ಅಧಿಕಾರಿಗಳು ಮುಂಜಾಗ್ರತವಾಗಿ ಕೆರೆಯಲ್ಲಿ ನೀರು ಸಂಗ್ರಹಿಸಿ ಅಂತರ್ಜಲ ಮಟ್ಟ ಸುಧಾರಿಸಿದ್ದಲ್ಲಿ ಇಂತಹ ಸ್ಥಿತಿ ಬರುತ್ತಿರಲಿಲ್ಲ. ಈಗಲೂ ಫಿಲ್ಟರ್‌ ಬೆಡ್‌ ಕೆರೆ ಜತೆಗೆ ನಾಗರ ಕೆರೆ ತುಂಬಿಸಬೇಕು. ಆಗ ಕೊಳವೆಬಾವಿಗಳು ಆರಂಭಗೊಳ್ಳಲಿವೆ ಎಂದು ಸುರಪುರಕರ್‌ ತಿಳಿಸಿದ್ದಾರೆ.

ನೀರಾವರಿ ಸಲಹಾ ಸಮಿತಿಯಲ್ಲಿ ನಿರ್ಣಯ ಕೈಗೊಂಡಂತೆ ಎಸ್‌ಬಿಸಿ, ಜೆಬಿಸಿ ಮತ್ತು ಎಂಬಿಸಿ ಕಾಲುವೆ ಮೂಲಕ 0.50 ಟಿಎಂಸಿ ನೀರು ಬಿಡಲಾಗಿದೆ. ಪ್ರಸ್ತುತ ಫಿಲ್ಟರ್‌ ಕೆರೆಗೆ ನೀರು ತುಂಬಿಸಲಾಗುತ್ತಿದ್ದು, ಇದು ಜೂನ್‌ ಅಂತ್ಯದವರೆಗೆ ಬರುವಂತೆ ನೋಡಿಕೊಳ್ಳಲಾಗುವುದು. ಪ್ರತಿ ಮೂರು ದಿನಕ್ಕೊಮ್ಮೆ ನೀರು ಬಿಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.
•ಶರಣಬಸಪ್ಪಗೌಡ ದರ್ಶನಾಪುರ, ಶಾಸಕ

ಸ್ತುತ ನೀರಿನ ಅಭಾವ ನಗರದಲ್ಲಿ ಹೆಚ್ಚಿದೆ. ಫಿಲ್ಟರ್‌ ಬೆಡ್‌ ಕೆರೆಗೆ ನೀರು ಬಂದಿರುವುದು ಸಂತಸದ ವಿಷಯ. ಆದರೂ ನೀರಿನ ಅಭಾವ ಕಾಡಲಿದ್ದು, ನಾಗರ ಕೆರೆಗೂ ನೀರು ತುಂಬಿಸುವ ಕೆಲಸ ನಡೆಯಬೇಕಿದೆ. ಆಗ ಕೊಳವೆಬಾವಿಯಲ್ಲಿ ಅಂತರ್ಜಲ ಚೇತರಿಕೆಯಾಗಲಿದೆ. ಮಳೆ ಅಭಾವದಿಂದ ನೀರಿನ ಹಾಹಾಕಾರ ಹೆಚ್ಚಾಗಿದೆ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಬಾರಿ ನೀರಿಗಾಗಿ ಜನ ತತ್ತರಿಸುವಂತಾಗಿದೆ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಪರಿಣಾಮ ನೀರಿನ ಸಮಸ್ಯೆ ಉಲ್ಬಣಿಸಿದೆ. ನಾಗರ ಕೆರೆ ತುಂಬಿಸಿದ್ದಲ್ಲಿ ಜನ-ಜಾನುವಾರುಗಳಿಗೆ ಅನುಕೂಲವಾಗಲಿದೆ.
ಗುರು ಪಾಟೀಲ್ ಶಿರವಾಳ,
 ಮಾಜಿ ಶಾಸಕ

•ಮಲ್ಲಿಕಾರ್ಜುನ ಮುದ್ನೂರ

Advertisement

Udayavani is now on Telegram. Click here to join our channel and stay updated with the latest news.

Next