ಶಹಾಪುರ: ಸಾಧನೆಗಳ ಪರಿಪೂರ್ಣತೆಗೆ ಇಚ್ಛಾಶಕ್ತಿ ದೃಢ ನಿಷ್ಠೆ, ಕಾರ್ಯದಲ್ಲಿ ಅಚಲ ಶ್ರದ್ಧೆ ಜತೆಗೆ ಗುರುಕಾರುಣ್ಯದೊಂದಿಗೆ ಸತತ ಪ್ರಯತ್ನದ ದಾರಿ ಹಿಡಿದರೆ ಯಶಸ್ಸು ನಿಶ್ಚಿತವಾಗಿ ದೊರಕುತ್ತದೆ ಎಂದು ದಂಡಗುಂಡ ಸಂಸ್ಥಾನಮಠದ ಶ್ರೀ ಸಂಗನಬಸವ ಶಿವಾಚಾರ್ಯರು ಹೇಳಿದರು.
ನಗರದ ಹೊರವಲಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ಫೌಂಡೇಶನ್ ಆಶ್ರಯದಲ್ಲಿರುವ ಶ್ರೀಶೈಲ ಮಲ್ಲಿಕಾರ್ಜುನ ಅನಾಥಾಶ್ರಮದ ಎರಡನೇ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.
ಭಗವಂತನ ಅನುಗ್ರಹ ಗುರುವಿನ ಕಾರುಣ್ಯದಿಂದ ಸೇವಾ ಕಾರ್ಯದಲ್ಲಿ ತೊಡಗಿರುವ ರೇಣುಕಾ ಬಿ. ಹುಗ್ಗಿ ಮತ್ತು ಅವರ ಪುತ್ರ ಸೋಮಲಿಂಗ ಬಿ. ಹುಗ್ಗಿ ತಂದೆ-ತಾಯಿ, ಬಂಧು-ಬಳಗ ಪ್ರೀತಿಯಿಂದ ವಂಚಿತರಾದ ಎಳೆಯ ಮಕ್ಕಳ ಭವಿಷ್ಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಜೀವನದ ಗುರಿ ಸಾಧನೆಗೆ ಅವರ ಪರಿಶ್ರಮ ಮೆಚ್ಚುವಂಥದ್ದು, ಅವರ ಕಾರ್ಯಕ್ಕೆ ಯಶಸ್ಸು ಸಿಗಲಿ. ಮುಂಬರುವ ದಿನಗಳಲ್ಲಿ ಇಲ್ಲಿನ 16 ಮಕ್ಕಳು ಉತ್ತಮ ಶಿಕ್ಷಣ ಸೌಲಭ್ಯ ಪಡೆದು ಪ್ರತಿಭಾವಂತರಾಗಲಿ ಎಂದು ಹರಸಿದರು.
ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ಸರ್ಕಾರದ ಸಹಾಯ ಸಹಕಾರವಿಲ್ಲದೆ, ಸಮಾಜದ ಹಲವು ಕಾಳಜಿಯ ಮನಸ್ಸುಗಳು ನೀಡಿದ ಸಹಕಾರದಿಂದ ಆಶ್ರಮ ನಡೆದಿರುವುದು ತಾಯಿ ಮಗನಲ್ಲಿರುವ ಸೇವೆ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು. ಜಿಲ್ಲಾ ಮಕ್ಕಳ ಅಧಿಕಾರಿ ಹಾಗೂ ಹಿರಿಯ ನಾಗರಿಕರು ಮತ್ತು ವಿಕಲಚೇತನರ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ ಕ್ಯಾತನಾಳ ಮಾತನಾಡಿ, ಸರ್ಕಾರ 18 ವರ್ಷದೊಳಗಿನ ಅನಾಥ ಮಕ್ಕಳಿಗೆ ಬಾಲ ಸಂಸ್ಕಾರ ಕೇಂದ್ರ ನಿರ್ಮಾಣ ಮಾಡಿದ್ದು, ಅಲ್ಲಿ ಸೂಕ್ತ ವ್ಯವಸ್ಥೆ ಅವಕಾಶವಿದ್ದು ಒಂದೆಡೆಯಾದರೆ ಇಲ್ಲಿನ ಆಶ್ರಮ ಸ್ವಯಂ ಆಸಕ್ತಿಯಿಂದ ಒಂದಿಲ್ಲೊಂದು ಕಾರಣದಿಂದ ಕುಟುಂಬದ ಪ್ರೀತಿಯಿಂದ ದೂರವಾದ ಮಕ್ಕಳಿಗೆ ಆಶ್ರಯ ನೀಡಿ ಸರ್ಕಾರದ ಭಾರ ಕಡಿಮೆ ಮಾಡಿದೆ.
ಇಲ್ಲಿನ ಕೇಂದ್ರ ಮೂಲಭೂತ ಸೌಲಭ್ಯದಿಂದ ಕೂಡಿ ಮಕ್ಕಳ ಭವಿಷ್ಯಕ್ಕೆ ನಾಂದಿಯಾಗಲಿ ಎಂದು ಹೇಳಿದರು. ಶಿಕ್ಷಕ ಲಕ್ಷ್ಮಣ ಲಾಳಸೇರಿ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಹಲವು ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಾಂಸ್ಕತಿಕ
ಕಾರ್ಯಕ್ರಮಗಳು ನಡೆದವು. ಗೆಳೆಯರ ಬಳಗದಿಂದ ಅನಾಥಾಶ್ರಮದ ಮುಖ್ಯಸ್ಥರನ್ನು ಗೌರವಿಸಲಾಯಿತು.
ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರು ಕಾಮ, ಮುಖಂಡರಾದ ಚನ್ನಪ್ಪಗೌಡ ಶಿರವಾಳ, ಸುಧೀರ ಚಿಂಚೋಳಿ, ಡಾ| ಮೌನೇಶ ಕೆಂಭಾವಿ, ಮರೆಪ್ಪ ಎಂ. ಪ್ಯಾಟಿ ಪ್ರಶಾಂತ ದೊಡ್ಡಮನಿ, ತಿಪ್ಪಣ್ಣ ಕ್ಯಾತನಾಳ, ಡಾ| ಜಗದೀಶ ಉಪ್ಪಿನ, ರವಿ ಮೋಟಗಿ, ಅರವಿಂದ ಉಪ್ಪಿನ, ರಾಜು ಬಾಂತಾಳ, ಶಿವಕುಮಾರ ಚೌದ್ರಿ, ಅಮರೇಶ, ವೆಂಕಟೇಶ ಕುಲಕರ್ಣಿ, ಬಸ್ಸು ಗುತ್ತೇದಾರ, ಮಲ್ಲಪ್ಪ ದೋರನಹಳ್ಳಿ, ಸಂತೋಷ ಕುಮಾರ, ವೆಂಕಟೇಶ ಟೊಣಪೆ, ಉಮೇಶ ಕುಮಾರ, ರಾಜು ಪಂಚಬಾವಿ, ಸಂತೋಷ ಹಿರೇಮಠ, ಇಕ್ಬಾಲ ಪಠಾಣ ಇದ್ದರು. ಮಲ್ಲಿಕಾರ್ಜುನ ಸ್ವಾಗತಿಸಿದರು. ಮಲ್ಲಯ್ಯಸ್ವಾಮಿ ಇಟಗಿ ನಿರೂಪಿಸಿದರು. ಅವಿನಾಶ ಗುತ್ತೇದಾರ ವಂದಿಸಿದರು.