ಶಹಾಪುರ: ಸಚಿವ ಸ್ಥಾನಕ್ಕಿಂತ ಅಭಿವೃದ್ಧಿ ಬಹು ಮುಖ್ಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ನಗರದ ಹಾಲಭಾವಿ ರಸ್ತೆ ಹಳ್ಳಕ್ಕೆ ಹೊಂದಿಕೊಂಡ ಸೇಂಟ್ ಪೀಟರ್ ಶಾಲೆಯ ಪಕ್ಕದಲ್ಲಿ ನಿರ್ಮಾಣಗೊಂಡ ಸೇತುವೆಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಎಚ್ಕೆಆರ್‌ಡಿಬಿ ಅನುದಾನದಲ್ಲಿ 1 ಕೋಟಿ 25 ಲಕ್ಷ. ರೂ. ವೆಚ್ಚದಲ್ಲಿ ಸೇತುವೆ ಮತ್ತು ಸಿಸಿ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ಸಂಪರ್ಕದಿಂದ ನಗರದಲ್ಲಿ ಟ್ರಾಫಿಕ್ ಕಡಿಮೆಯಾಗಲಿದೆ. ಮತ್ತು ಈ ಭಾಗದ ಬಡಾವಣೆಗಳ ಜನರ ಸಂಚಾರಕ್ಕೆ ಇದು ಸುಗಮವಾಗಲಿದೆ ಎಂದರು.
ವಿವಿಧ ಇಲಾಖೆ ಯೋಜನೆಗಳಲ್ಲಿ ಬರುವ ಅನುದಾನ ಕ್ರೋಢಿಕರಿಸಿ ಪ್ರಮುಖ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗುತ್ತದೆ. ಅಲ್ಲದೇ ಆಯಾ ಯೋಜನೆಗಳ ಮುಖಾಂತರ ಮಂಜೂರಾಗಿ ಬಂದ ಅನುದಾನದಲ್ಲಿ ಹಲವಾರು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ. ಆ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಶ್ರಮಿಸಬೇಕಾಗುತ್ತದೆ. ಇಲ್ಲವಾದಲ್ಲಿ ಯೋಜನೆ ಅನುಷ್ಠಾನವಾಗದೆ ಬರಿ ಕಾಗದದಲ್ಲಿ ಉಳಿಯಲಿದೆ ಎಂದರು. ಅಧಿಕಾರ ವಹಿಸಿಕೊಂಡಿಲ್ಲ: ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ. ಆದರೆ ನಾನು ಇದುವರೆಗೂ ಅಕಾರವಹಿಸಿಕೊಂಡಿಲ್ಲ. ಇನ್ನೂ ಹದಿನೈದು ದಿನಗಳವರೆಗೆ ಕಾಯ್ದು ನೋಡಬೇಕಿದೆ ಎಂದು ಶಾಸಕ ದರ್ಶನಾಪುರ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ ಆರಬೋಳ, ಲೋಕೋಪಯೋಗಿ ಇಲಾಖೆ ಅಧಿಕಾರಿ ಚೆನ್ನಬಸ್ಸಪ್ಪ ಮೆಕಾಲೆ, ಜೆಸ್ಕಾಂ ಎಇಇ ಶಾಂತಪ್ಪ ಪೂಜಾರಿ, ನಗರಸಭೆ ಅಧಿಕಾರಿ ಹರೀಶಕುಮಾರ, ಪ್ರಮುಖರಾದ ಮಹಾದೇವಪ್ಪ ಸಾಲಿಮನಿ, ಚಂದ್ರಶೇಖರ ಲಿಂಗದಳ್ಳಿ, ಶರಣಗೌಡ ಗುಂಡಗುರ್ತಿ, ಶಿವಮಹಾಂತ ಚಂದಾಪುರ, ಘೇವರಚಂದ್ ಜೈನ್, ಸೈಯ್ಯದ್ ಖಾಲಿದ್, ಬಸವರಾಜ ಹೇರುಂಡಿ, ನಗರಸಭೆ ಸದಸ್ಯರಾದ ಶಿವುಕುಮಾರ ತಳವಾರ, ಬಸವರಾಜ ಚೆನ್ನೂರ, ಅಂಬ್ಲಿಪ್ಪ, ಸಣ್ಣ ನಿಂಗಣ್ಣ ನಾಯ್ಕೋಡಿ, ನಾಗಪ್ಪ ತಹಶೀಲ್ದಾರ, ಶಿವಶರಣಪ್ಪ ಕಲಬುರ್ಗಿ, ಮುಸ್ತಫಾ ದರ್ಬಾನ, ರವಿಕುಮಾರ ಎದುರಮನಿ ಸೇರಿದಂತೆ ಇತರರಿದ್ದರು. ಬಸವರಾಜ ಸಿನ್ನೂರ ನಿರೂಪಿಸಿದರು. ರವಿ ಚೌದ್ರಿ ವಂದಿಸಿದರು.