ಶಹಾಪುರ: ಸಂಕ್ರಾಂತಿ ನಿಮಿತ್ತ ನಡೆಯುವ ತಾಲೂಕಿನ ಭೀಮರಾಯನ ಗುಡಿ ಬಲಭೀಮೆಶ್ವರ ಹಾಗೂ ದಿಗ್ಗಿ ಸಂಗಮೇಶ್ವರ ಉತ್ಸವ ಮೂರ್ತಿ ಹೊತ್ತ ಪಲ್ಲಕ್ಕಿಗಳ ಅದ್ಧೂರಿ ಮೆರವಣಿಗೆ ನಗರದಲ್ಲಿ ಸಹಸ್ರಾರು ಭಕ್ತರ ಮಧ್ಯೆ ಬುಧವಾರ ಆಹೋರಾತ್ರಿ ನಡೆಯಿತು.
ತಾಲೂಕಿನ ಹುರಸಗುಂಡಗಿ ಗ್ರಾಮದ ಭೀಮಾನದಿಯಲ್ಲಿ ಗಂಗಾಸ್ನಾನ ಮುಗಿಸಿಕೊಂಡು ಬುಧವಾರ ರಾತ್ರಿ ನಗರ ಜೋಡು ಪಲ್ಲಕ್ಕಿಗಳು ನಗರ ಪ್ರವೇಶಿಸಿದವು. ನಗರದ ಮಾರುತಿ ಮಂದಿರದ ಸನ್ನಿಧಿಯಲ್ಲಿ ಬಲಭೀಮೇಶ್ವರ ಪಲ್ಲಕ್ಕಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಇದೇ ಸಂದರ್ಭದಲ್ಲಿ ದೀಡ ನಮಸ್ಕಾರ ಇತರೆ ಹರಕೆಗಳನ್ನು ಭಕ್ತರು ತೀರಿಸಿದರು.
ದೇವರಿಗೆ ಆಕರ್ಷಕವಾದ ಹೂವಿನ ಚಾದಾರ, ಬಣ್ಣ ಬಣ್ಣದ ಛತ್ರಿಗಳು ಮತ್ತು ಹೂವಿನ ಛತ್ರಿ ಸೇರಿದಂತೆ ವಿವಿಧ ರೀತಿ ಹರಕೆಗಳನ್ನು ಭಕ್ತರು ಸಾಲಾಗಿ ಬಂದು ತೀರಿಸಿದರು. ಭಕ್ತರು ದರ್ಶನ ಪಡೆದು ಪುನೀತರಾದರು.
ಜೋಡು ಪಲ್ಲಕ್ಕಿಗಳ ಮುಂದೆ ಸಾಲಾಗಿ ದಿವಟಿಗೆಗಳ ಬೆಳಕು, ವಿದ್ಯುತ್ ದೀಪಗಳ ಬೆಳಕು ಝಗಮಗಿಸುತ್ತಿರುವುದನ್ನು ಭಕ್ತರು ಕಣ್ತುಂಬಿಕೊಂಡರು. ಅಲ್ಲದೆ ಬಣ್ಣ ಬಣ್ಣದ ಸಿಡಿಮದ್ದುಗಳ ಚಿತ್ತಾರ ಆಕರ್ಷಕವಾಗಿತ್ತು. ನಗರದ ಮೋಚಿಗಡ್ಡ, ಗಾಂಧಿ ಚೌಕ್, ದಿಗ್ಗಿಬೇಸ್ ರಸ್ತೆ ಮೂಲಕ ಎರಡು ಪಲ್ಲಕ್ಕಿಗಳ ಅತ್ಯಾಕರ್ಷಕ ಮೆರವಣಿಗೆ ಆಹೋರಾತ್ರಿ ನಡೆಯಿತು.
ನಗರದಿಂದ ಭವ್ಯ ಮೆರವಣಿಗೆಯೊಂದಿಗೆ ಮೂಲ ಸ್ಥಾನ ಭೀಮರಾಯನ ಗುಡಿಗೆ ಆಗಮಿಸಿದ ಪಲ್ಲಕ್ಕಿ ಸಾನ್ನಿಧ್ಯ ವಹಿಸುತ್ತಿದ್ದಂತೆ ಜಾತ್ರೆಗೆ ಚಾಲನೆ ನೀಡಲಾಯಿತು. ವಾರಗಳ ಕಾಲ ಭರ್ಜರಿ ಜಾತ್ರೆ ನಡೆಯಲಿದೆ.