ಶಹಾಪುರ: ಲಿಂಗಾಯತ ಧರ್ಮ ಕ್ರಾಂತಿಕಾರಿ ವಿಚಾರಗಳ ಮೊತ್ತ. ವೈದಿಕ ವ್ಯವಸ್ಥೆಯಲ್ಲಿ ಕಲುಷಿತಗೊಂಡಿದ್ದ ಗುರು ಲಿಂಗ ಜಂಗಮ ಪಾದೋದಕ ಪ್ರಸಾದ ಎಂಬ ಪದಗಳಿಗೆ ಹೊಸ ವ್ಯಾಖ್ಯೆ ಬರೆದವರು ವಿಶ್ವಗುರು ಬಸವಣ್ಣನವರು ಎಂದು ಬಸವಕಲ್ಯಾಣ ಬಸವ ಧರ್ಮ ಪೀಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ ಪಟ್ಟರು.
ನಗರದ ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಜಂಟಿಯಾಗಿ ಆಯೋಜಿಸಿದ್ದ ತಿಂಗಳ ಬಸವ ಬೆಳಕು-86ರ ಸಭೆಯಲ್ಲಿ ಎತ್ತೆತ್ತ ನೋಡಿದತ್ತ ಬಸವ ಎಂಬ ಬಳ್ಳಿ ವಿಷಯದ ಕುರಿತು ಸ್ವಾಮೀಜಿ ಮಾತನಾಡಿದರು.
ಬಸವಣ್ಣನವರನ್ನು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತಗೊಳಿಸಲಾಗದ ವ್ಯಕ್ತಿತ್ವ ಕಟ್ಟಿಕೊಂಡಿದ್ದರು. ಅವರನ್ನು ಸಮಾಜ ಸುಧಾರಕ, ಆರ್ಥಿಕ ತಜ್ಞ, ಮನಃಶಾಸ್ತ್ರಜ್ಞ, ರಾಜಕೀಯ ಚಿಂತಕ, ಹೋರಾಟಗಾರ, ದೀನ ದಲಿತರ ಆಪ್ತ ಬಂಧು, ಸ್ತ್ರೀಕುಲ ಉದ್ಧಾರಕ ಎಂಬ ಶಬ್ದಗಳಿಂದ ಕರೆದರೆ ಅದು ಸೀಮಿತವಾಗುತ್ತದೆ. ಬಸವಣ್ಣನವರು ನಮ್ಮ ನಿಮ್ಮೆಲ್ಲರ ಆತ್ಮಪ್ರಜ್ಞೆ ಎಚ್ಚರಿಸಲು ಬಂದ ಕಾರಣಿಕ ಪುರುಷ ಎಂದು ಬಣ್ಣಿಸಿದರು.
ಮಾತೃಹೃದಯಿಯಾದ ಬಸವಣ್ಣ ತನ್ನ ಸುತ್ತ ಮುತ್ತ ಶರಣ ಸಂಕುಲ ಕಟ್ಟಿದರು. ರಾಷ್ಟ್ರದ ಮೂಲೆ ಮೂಲೆಯಿಂದ ಜನರು ತಂಡೋಪ ತಂಡವಾಗಿ ಕಲ್ಯಾಣದ ನಾಡಿಗೆ ಬಂದರು. ನಿಸ್ಪೃಹವಾದ ಕಾಯಕ ಮಾಡಿ ದಾಸೋಹ ನೆರವೇರಿಸಿದರು. ದಾಸೋಹಂ ಭಾವದ ಬದುಕಿನ ಮೂಲಕ ಜಗತ್ತಿನ ಎಲ್ಲರಿಗೂ ಬೆಳಕಿನ ಹೊಳೆಯಾದರು. ಜಗತ್ತಿಗೆ ಈಗ ಬೇಕಾಗಿರುವುದು ಅಂತಃಕರಣ, ಮಾನವೀಯ ಮಿಡಿತ, ನಾವೆಲ್ಲರೂ ಒಂದೇ, ಎಲ್ಲರೂ ಶಿವನ ಪ್ರಭೆಯಿಂದ ಬೆಳಗುವ ಜೀವಿಗಳು ಎಂಬ ಅರಿವು ಇಟ್ಟುಕೊಂಡರೆ ಇಡೀ ಜಗತ್ತನ್ನು ಪ್ರೀತಿಸುವ ಮನಸ್ಸು ನಮ್ಮದಾಗುತ್ತದೆ ಎಂದು ಹೇಳಿದರು.
ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ಶರಣರ ವಚನಗಳನ್ನು ಓದಿ ಅರಿತುಕೊಂಡು ನಡೆದರೆ ನಮ್ಮ ಬದುಕು ಬಂಗಾರವಾಗುತ್ತದೆ. ಜೀವನದಲ್ಲಿ ಬರುವ ಕಷ್ಟ ಸುಖ ಅನುಭವಿಸಿ ಜೀವಿಸಬೇಕು. ಯಾರ ಟೀಕೆ ಟಿಪ್ಪಣಿಗಳಿಗೆ ಎದೆಗುಂದದೆ ವೈಚಾರಿಕವಾಗಿ ಬದುಕುವ ಶಕ್ತಿಯನ್ನು ವಚನ ಸಾಹಿತ್ಯ ನಮಗೆ ಕಲಿಸಿಕೊಡುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪಟ್ಟಣದ ಹಿರಿಯ ವಕೀಲ ಭಾಸ್ಕರರಾವ್ ಮುಡಬೂಳ ಮಾತನಾಡಿ, ನಾವೆಲ್ಲ ಸಂಕುಚಿತ ಸಂಕೋಲೆಯಲ್ಲಿ ಬದುಕುತ್ತಿದ್ದೇವೆ. ಶರಣರ ಸಂತರ ವಿಶಾಲವಾದ ಮನೋಭಾವ ಅರ್ಥ ಮಾಡಿಕೊಳ್ಳುವ ಮೂಲಕ ಶರಣರಾಗಬೇಕಾಗಿದೆ. ನಮ್ಮ ನಡುವೆಯೇ ಶರಣ ಜೀವನವನ್ನು ಬದುಕಿ ಹೋದ ಹಲವಾರು ವ್ಯಕ್ತಿಗಳಿದ್ದಾರೆ. ಅವರನ್ನು ಅನುಸರಿಸುವ ಮೂಲಕ ನಮ್ಮ ಬದುಕನ್ನು ಸರಿಪಡಿಸಿಕೊಳ್ಳಬೇಕು ಎಂದು ಹೇಳಿದರು.
ಜ್ಯೋತಿ ಬೆಳಗಿಸುವ ಮೂಲಕ ಬೆಂಗಳೂರಿನ ಶ್ರೀಶೈಲ ಮಸೂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭೀಮರಾಯ ಲಿಂಗೇರಿ ಸ್ವಾಗತಿಸಿದರು. ಅಲ್ಲಮಪ್ರಭು ಸತ್ಯಂಪೇಟೆ, ಮಹಾದೇವಪ್ಪ ಗಾಳೆನೋರ, ಚೆನ್ನಮಲ್ಲಿಕಾರ್ಜುನ ಗುಂಡಾನೋರ ವಚನ ಹಾಡಿದರು.
ಕರ್ನಾಟಕ ರಾಜ್ಯ ರೈತ ಸಂಘದ ನಾಗರತ್ನ ವಿ. ಪಾಟೀಲ ವಂದಿಸಿದರು. ಶಿವಣ್ಣ ಇಜೇರಿ ನಿರೂಪಿಸಿದರು. ಶರಣು ಮಂಡಗಳ್ಳಿ, ಶಿವಯೋಗಪ್ಪ ಮುಡಬೂಳ, ಹೊನ್ನಾರೆಡ್ಡಿ ವಕೀಲರು, ಶಾಂತರೆಡ್ಡಿ ವಕೀಲರು, ಸಿದ್ಧಲಿಂಗಪ್ಪ ಆನೇಗುಂದಿ, ರಾಜು ಸಾಲಿಮನಿ, ದೇವರಾಜ ಪೂಜಾರಿ, ಶಿವಕುಮಾರ ಕರದಳ್ಳಿ, ಗುಂಡಪ್ಪ ತುಂಬಗಿ, ರಾಜಶೇಖರ ದಿಗ್ಗಿ, ವಿಶ್ವನಾಥರೆಡ್ಡಿ ಸಾವುರ, ಅಡಿವೆಪ್ಪ ಜಾಕಾ, ಗುಂಡಣ್ಣ ಕಲಬುರ್ಗಿ, ಜಗದೀಶ ನೂಲಿನವರ, ವಿಶ್ವನಾಥರೆಡ್ಡಿ ಗೊಂದಡಗಿ ಭಾಗವಹಿಸಿದ್ದರು.