ಶಹಾಪುರ: ನಗರದ ಹಳೇ ಬಸ್ ನಿಲ್ದಾಣ ಮುಂಭಾಗದ ರಸ್ತೆಯಲ್ಲಿ ಹೆಚ್ಚಾಗಿ ರಸ್ತೆ ಅಪಘಾತ ಸಂಭವಿಸುತ್ತಿದ್ದು, ಬಸ್ ನಿಲುಗಡೆಗೆ ತಾತ್ಕಾಲಿಕ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಲ್ಲಿನ ನಾಗರಿಕ ಹೋರಾಟ ಒಕ್ಕೂಟ ಸಮಿತಿ ರಸ್ತೆ ತಡೆ ನಡೆಸಿ ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಅವರಿಗೆ ಮನವಿ ಸಲ್ಲಿಸಿತು.
ಅ. 29ರಂದು ನಗರದಲ್ಲಿ ನಡೆದ ಅಪಘಾತದಲ್ಲಿ ಬಾಲಕ ಕೆಎಸ್‌ಆರ್‌ಟಿಸಿ ಬಸ್‌ನ ಹಿಂಬದಿ ಚಕ್ರಕ್ಕೆ ಸಿಲುಕಿ ಮೃತಪಟ್ಟರೆ, ಜೊತೆಯಲ್ಲಿದ್ದ ಬಾಲಕನ ಅಜ್ಜಿ ನೂರಜಾಹ ತೀವ್ರಗಾಯಗೊಂಡಿದ್ದು, ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸಾವು ನೋವಿನ ನಡುವೆ ಹೋರಾಡುತ್ತಿದ್ದಾಳೆ. ಕೂಲಿ ಮಾಡಿ ಬದುಕುವ ಈ ಬಡ ಕುಟುಂಬಕ್ಕೆ ಜಿಲ್ಲಾಡಳಿತ ಸೂಕ್ತ ಸ್ಪಂದನೆ ನೀಡಬೇಕಿದೆ.
ಮೃತಪಟ್ಟ ಬಾಲಕನ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಹಳೇ ಬಸ್ ನಿಲ್ದಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಬಸ್ ನಿಲುಗಡೆಗೆ ಸೂಕ್ತ ಸ್ಥಳವಕಾಶ ಇಲ್ಲದ ಕಾರಣ ಹೆದ್ದಾರಿ ಮೇಲೆ ಬಸ್ ನಿಲ್ಲುತ್ತಿವೆ.
ಅಲ್ಲದೇ ಹೆದ್ದಾರಿ ಬದಿಯಲ್ಲಿ ಆಟೋಗಳ ನಿಲುಗಡೆ ಮತ್ತು ಇತರೆ ವಾಹನಗಳ ಅಡ್ಡಾದಿಡ್ಡಿ ನಿಲುಗಡೆಯಿಂದಾಗಿ ನಿತ್ಯ ಒಂದಿಲ್ಲೊಂದು ಅವಘಡಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾನಿರತರು ಆರೋಪಿಸಿದರು.
ಬಸ್ ನಿಲ್ದಾಣದ ಎರಡು ಗೇಟ್ ಮುಂಭಾಗದಲ್ಲಿ ನಿರ್ಮಿಸಲಾದ ರಸ್ತೆ ವಿಭಜಕ ಒಡೆದು ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಸರ್ಕಾರಿ ಬಾಲಕಿಯರ ಕಾಲೇಜಿಗೆ ಹೋಗಲು ನಿಲ್ದಾಣ ಎದುರುಗಡೆ ಇರುವ ರಸ್ತೆ ವಿಭಜಕವನ್ನು ಒಡೆದು ಸುಗಮವಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಅನುಕೂಲ ಕಲ್ಪಿಸಬೇಕು. ಕೂಡಲೇ ನಿಲ್ದಾಣ ಕಾಮಗಾರಿ ಮುಗಿಸಿ ಸಾರ್ವಜನಿಕ ಸೇವೆಗೆ ಲಭ್ಯವಾಗುವಂತೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಸೈಯ್ಯದ್ ಇಸಾಕ ಹುಸೇನಿ ಖಾಲಿದ್, ತಾಪಂ ಸದಸ್ಯ ಪರಶುರಾಮ ಕುರುಕುಂದಿ, ಮಲ್ಲಿಕಾರ್ಜುನ ಗಂಗಾಧರಮಠ, ಲಾಲನಸಾಬ ಖುರೇಶಿ, ಶಿವಕುಮಾರ ತಳವಾರ, ಅಪ್ಪಣ್ಣ ದಶವಂತ, ಸತೀಶ ಪಂಚಬಾವಿ, ರವಿ ಯಕ್ಷಂತಿ, ಉಮೇಶ ಬಾಗೇವಾಡಿ, ಭಾಷಾ ಪಟೇಲ್, ನಾಗಣ್ಣ ಬಡಿಗೇರ, ಸಂಗಯ್ಯ ಸ್ವಾಮಿ, ಅಮೃತ ಹೂಗಾರ, ಶಿವುಪುತ್ರ ಜವಳಿ, ರಾಯಪ್ಪ ಸಾಲಿಮನಿ, ಮೌನೇಶ ನಾಟೇಕಾರ ಸೇರಿದಂತೆ ವಿವಿಧ ಸಂಘಟನೆ ಮುಖಂಡರು ಇದ್ದರು.