ಶಹಾಪುರ: ಹಲವು ಸಮುದಾಯದ ಜನರಿಗೆ ಸ್ಮಶಾನ ಭೂಮಿ ದೊರೆಯದೇ ಪರದಾಡುವ ಸ್ಥಿತಿ ಇದೆ. ಈ ಪರಿಸ್ಥಿತಿ ಕ್ರೈಸ್ತ ಸಮುದಾಯಕ್ಕೆ ಹೊರತಾಗಿರಲಿಲ್ಲ. ರುದ್ರಭೂಮಿ ಇಲ್ಲದಿರುವುದನ್ನು ಜನ ನನ್ನ ಗಮನಕ್ಕೆ ತಂದರು. ತಕ್ಷಣ ಈ ಕುರಿತು ಸಂಬಂಧಿಸಿದ ಅಧಿ ಕಾರಿಗಳ ಜೊತೆ ಚರ್ಚಿಸಿ ರುದ್ರಭೂಮಿ ಒದಗಿಸುವ ಕಾರ್ಯ ಮಾಡಲಾಯಿತು ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.
ನಗರದ ಕನ್ಯಾಕೋಳೂರ ರಸ್ತೆ ಮಾರ್ಗದಲ್ಲಿ ಕ್ರೈಸ್ತಸಭಾ ನಾಯಕರ ಒಕ್ಕೂಟ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಜವಾಬ್ದಾರಿ ಹೆಚ್ಚಿಸಿದ ಸನ್ಮಾನ: ವಿಶ್ರಾಂತ ಭೂಮಿ ಮಂಜೂರಿ ಕಾರ್ಯ ಕೈಗೊಂಡ ಪರಿಣಾಮ ಕ್ರೈಸ್ತ ಸಮುದಾಯ ನಾನು ಮರೆಯದಂತ ಗೌರವ ಸನ್ಮಾನ ನೀಡಿದರು. ನಾನು ಮಾಡಿರುವುದು ಸಣ್ಣ ಕೆಲಸ. ಆದರೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮದ ಮೂಲಕ ನನಗೆ ಇನ್ನಷ್ಟು ಕೆಲಸ ಮಾಡುವ ಜವಾಬ್ದಾರಿ ನೀಡಿದ್ದಾರೆ. ಸಮುದಾಯದ ನಾಯಕರು ಸಲ್ಲಿಸಿದ ಬೇಡಿಕೆ ಕುರಿತು ಬರುವ ದಿನಗಳಲ್ಲಿ ಹಂತ ಹಂತವಾಗಿ ವಿಶ್ರಾಂತ ಭೂಮಿ ಸುತ್ತಲೂ ಕಾಂಪೌಂಡ್ ನಿರ್ಮಾಣ ಸೇರಿದಂತೆ ಶಿರವಾಳ ಗ್ರಾಮದಲ್ಲಿ ನಿರ್ಮಿಸಲಾಗುತ್ತಿರುವ ಚರ್ಚ್‌ಗೆ ಕಾಂಪೌಂಡ್ ಕಟ್ಟಲು ಸಮರ್ಪಕ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ವಸತಿ ಸೌಲಭ್ಯಕ್ಕೆ ಕ್ರಮ: ವಸತಿಹೀನ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇನ್ನೂ ಮೂರ್‍ನಾಲ್ಕು ಸಾವಿರ ಜನರಿಗೆ ವಸತಿ ಸೌಲಭ್ಯ ಕಲ್ಪಿಸುವ ಯೋಜನೆ ಇದೆ. ವಾಸಿಸಲು ಮನೆ, ಸ್ಥಳವಿಲ್ಲದ ಬಾಡಿಗೆಯೂ ಕಟ್ಟದಾಗದ ಬಡವರಿಗೆ ವಸತಿ ಸೌಲಭ್ಯ ಕಲ್ಪಿಸಬೇಕಿದೆ. ಸರ್ಕಾರಿ ಸೌಲಭ್ಯ ಅರ್ಹರಿಗೆ ತಲುಪಿಸಲು ಸರ್ವರ
ಸಹಭಾಗಿತ್ವ ಅಗತ್ಯವಿದೆ ಎಂದರು.ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಬಿ.ಧೂಳಪ್ಪ, ಕಲಬುರ್ಗಿಯ ಫಾದರ್ ವಿನ್ಸೆಂಟ್ ಪಿರೇರಾ ಸಾನ್ನಿಧ್ಯವಹಿಸಿ ಮಾತನಾಡಿದರು.
ಸೇಬಿನ ಹಾರ ಹಾಕಿ ಸನ್ಮಾನ: ಕಾರ್ಯಕ್ರಮದಲ್ಲಿ ಶಾಸಕ ಶರಣಬಸಪ್ಪಗೌಡ
ದರ್ಶನಾಪುರ ಅವರಿಗೆ ಸೇಬಿನ ಹಾರ ಹಾಕುವ ಮೂಲಕ ವಿಶೇಷವಾಗಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಚಂದ್ರಶೇಖರ ಆರಬೋಳ, ಸುರೇಂದ್ರ ಪಾಟೀಲ್ ಮಡ್ನಾಳ, ಬಸವರಾಜ ಹಿರೇಮಠ, ಸಣ್ಣ ನಿಂಗಣ್ಣ ನಾಯ್ಕೋಡಿ, ತಾಪಂ ಅಧ್ಯಕ್ಷ ನಾಗಣ್ಣ ಪೂಜಾರಿ, ಮಲ್ಲಪ್ಪ ಗುತ್ತೇದಾರ, ಶಿವುಕುಮಾರ ಬಿಲ್ಲಂಕೊಂಡಿ ಸೇರಿದಂತೆ ಸೀಮಿಯೊನ್ ಆರ್, ಸಾಮ್ಯುವೆಲ್ .ಇ, ಮಂಜು ನಾಯ್ಕ, ಬಸವರಾಜ, ಸೈಮನ್, ಗೇರ್ಷೋಮ್, ಗುರುಪುತ್ರ, ರಾಜೇಂದ್ರ ಪ್ರಸಾದ, ಮರಿರಾಜ ಮಾಸ್ಟರ್, ಸಾಲೋಮನ್, ವಸಂತಕುಮಾರ ಸುರಪುರಕರ್, ಇಮಾನ್‌ವೇಲ್, ವೆಸ್ಲಿ ವೇದರಾಜ ಇತರರು ಭಾಗವಹಿಸಿದ್ದರು.
ಫಾದರ್ ವಿಜಯರಾಜ ಪ್ರಾಸ್ತಾವಿಕ ಮಾತನಾಡಿದರು. ಫಾದರ್ ಎಬಿನೆಜರ್
ಸ್ವಾಗತಿಸಿದರು. ಫಾದರ್ ಫೆಡ್ರಿಕ್ ಡಿಸೋಜಾ ನಿರೂಪಿಸಿದರು.