Advertisement

ಸರ್ವರನ್ನೂ ತನ್ನತ್ತ ಸೆಳೆದ ಬಸವಣ್ಣ

04:54 PM Oct 27, 2019 | Naveen |

ಶಹಾಪುರ: 12ನೇ ಶತಮಾನದಲ್ಲಿ ಹೆಣ್ಣು-ಗಂಡು, ಬಡವ ಬಲ್ಲಿದ ಎಂಬ ತಾರತಮ್ಯ ಇಲ್ಲದೆ ಸರ್ವರನ್ನು ಬಸವಣ್ಣ ತನ್ನತ್ತ ಸೆಳೆದುಕೊಂಡಿದ್ದರು ಎಂದು ಡಾ| ಶಿವಾನಂದ ಸ್ವಾಮೀಜಿ ಹೇಳಿದರು.

Advertisement

ಸ್ಥಳೀಯ ಬಸವ ಮಾರ್ಗ ಪ್ರತಿಷ್ಠಾನ ಬಸವ-ಬೆಳಕು ಸಭೆಯಲ್ಲಿ ಲಿಂಗೈಕ್ಯ ವೀರಣ್ಣ ಗುರಪ್ಪ ಸತ್ಯಂಪೇಟೆ ಅವರ ಸ್ಮರಣೆ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಶ್ಮೀರದಿಂದ ಬಂದ ಅರಸ ಮೋಳಿಗೆ ಮಾರಯ್ಯ, ಅಘಾನಿಸ್ತಾನದಿಂದ ಬಂದ ಮರುಳ ಶಂಕರ, ಸೌರಾಷ್ಟ್ರದಿಂದ, ತಮಿಳು ನಾಡಿನಿಂದ ಬಂದ ಚೇತನಗಳು ತಮ್ಮ ಮೂಲ ಕಳೆದುಕೊಂಡು ಶರಣರಾಗಿ ಪರಿವರ್ತಿತರಾದರು. ಅನುಭವ ಮಂಟಪ ಎಂಬುದು ಮನುಷ್ಯನನ್ನು ರೂಪಿಸುವ ಟಂಕ ಶಾಲೆಯಾಗಿ ಪರಿವರ್ತನೆಗೊಂಡಿತ್ತು. ಅನುಭವ ಮಂಟಪವನ್ನು ಕೇವಲ ಕಲ್ಲು, ಮಣ್ಣು, ಇಟ್ಟಂಗಿಗಳಿಂದ ಕಟ್ಟಿದ ಕಟ್ಟಡವಾಗಿರಲಿಲ್ಲ. ಅದು ಕಾಯಕ ಜೀವಿಗಳಾದ ಶರಣರ ಜೀವಧಾತುವಿನಿಂದ ಕಟ್ಟಿದ ಅಭೌತಿಕ ಕಟ್ಟಡವಾಗಿತ್ತು ಎಂದು ತಿಳಿಸಿದರು.

ಪ್ರತಿಷ್ಠಾನದ ವಿಶ್ವಾರಾಧ್ಯ ಸತ್ಯಂಪೇಟೆ ಮಾತನಾಡಿ, ಬಹಳಷ್ಟು ಜನರಲ್ಲಿ ಮಠಗಳನ್ನು ಪೀಠಾಧಿ ಪತಿಗಳೇ ಕಟ್ಟಿದ್ದಾರೆ ಎಂಬ ತಪ್ಪು ಕಲ್ಪನೆ ಇದೆ. ಮಠಗಳನ್ನು ಕಟ್ಟಿದ್ದು ಭಕ್ತರೆ ಹೊರತು ಮಠಾಧಿಧೀಶರಲ್ಲ. ಬಾದಾಮಿಯಲ್ಲಿ ಸ್ಥಾಪಿಸಿದ ಶಿವಯೋಗ ಮಂದಿರವೂ ಸಹ ಭಕ್ತರು ಕಟ್ಟಿದ್ದೆ ವಿನಃ ಹಾನಗಲ್‌ ಕುಮಾರ ಸ್ವಾಮೀಜಿಗಳಲ್ಲ ಎಂದವರು ಸ್ಪಷ್ಟ ಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಶಸಾಪ ಅಧ್ಯಕ್ಷ ಅಪ್ಪಾರಾವ್‌ ಅಕ್ಕೋಣಿ ಮಾತನಾಡಿ, ಶರಣರ ವಚನಗಳ ಪ್ರಸಾರಕ್ಕೆ ಮಠಾಧಿಧೀಶರು ಹೆಚ್ಚು ಆಸಕ್ತಿ ತೋರಲಿಲ್ಲ. ನಾವೇ ಶ್ರೇಷ್ಠ ಶರಣರು ನಮಗಿಂತ ಮೇಲೆ ಯಾರು ಇಲ್ಲ ಎಂಬ ಭಾವ ಅವರನ್ನು ಹಿಂದೆ ಕಾಡುತ್ತಿತ್ತು. ಹೀಗಾಗಿ ಬಹುತೇಕ ಮಠಗಳು ಶರಣ ಸಾಹಿತ್ಯ ಪ್ರಸಾರ ಮಾಡಲು ಹಿಂದೇಟು ಹಾಕಿದವು ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಗುರುಮಿಠಕಲ್‌ ಖಾಸಾ ಮಠದ ಶಾಂತವೀರ ಸ್ವಾಮೀಜಿ ಇದ್ದರು. ಕಮಲಮ್ಮ ವೀರಣ್ಣ ಸತ್ಯಂಪೇಟೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ರಾಜಶೇಖರ ಹುಲ್ಲೂರು, ಮಹಾದೇವಪ್ಪ ಗಾಳೆನೋರ ವಚನ ಗಾಯನ ಮಾಡಿದರು.

Advertisement

ಸಮಾರಂಭದಲ್ಲಿ ವೆಂಕಟಪ್ಪ ಅಲೆಮನಿ, ಡಾ| ಎಸ್‌.ಎಸ್‌. ನಾಯಕ, ಶರಣಪ್ಪ ಬಿರಾದಾರ, ಗೀತಾ ರಾಜಶೇಖರ, ಮಹಾಂತೇಶ ಹುಲ್ಲೂರು, ಕವಿತಾ ಚಂದ್ರಶೇಖರ ಕರುಣಾ, ಅಡಿವೆಪ್ಪ ಜಾಕಾ, ಸಿದ್ದಲಿಂಗಪ್ಪ ಆನೇಗುಂದಿ, ಗುಂಡಣ್ಣ ಕಲಬುರಗಿ, ಡಾ| ಭೀಮರಾಯ ಲಿಂಗೇರಿ, ಶಿವಲಿಂಗಪ್ಪ ಮುಖ್ಯ ಗುರುಗಳು, ಶಿವಶಂಕರ ಔರಸಂಗ ಸೇರಿದಂತೆ ಇತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next