ಶಹಾಪುರ: ಜನ ಸಾಮಾನ್ಯರ ಅಗತ್ಯ ಬೇಡಿಕೆಗೆ ಸೂಕ್ತ ಸ್ಪಂದನೆ ನೀಡುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಪ್ರತಿ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಾರ್ವಜನಿಕರ ಕುಂದು ಕೊರತೆಗಳಿಗಾಗಿ ಅಹವಾಲು ಸ್ವೀಕಾರ ಸಭೆ ನಡೆಸಲು ನಿರ್ಧರಿಸಲಾಗಿದ್ದು, ಶೀಘ್ರದಲ್ಲಿ ಸಭೆ ಕರೆಯಲಾಗುವುದು ಎಂದು ಜಿಪಂ ಸಿಇಒ ಶಿಲ್ಪಾ ಶರ್ಮಾ ತಿಳಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ದೂರು ಸ್ವೀಕಾರ ಸಭೆಯಲ್ಲಿ ಮಾತನಾಡಿದ ಅವರು, ಜನರು ತಮ್ಮ ಕಾರ್ಯ ಕೆಲಸಗಳಿಗೆ ಅಡ್ಡಿ ಉಂಟಾದಲ್ಲಿ ಯಾದಗಿರಿ ಜಿಪಂ ಕೇಂದ್ರ ಕಚೇರಿಗೆ ಬಂದು ದೂರು ಸಲ್ಲಿಸುವ ಅಗತ್ಯವಿಲ್ಲ. ಆಯಾ ತಾಲೂಕು ಅಧಿಕಾರಿಗಳಿಂದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಾರ್ವಜನಿಕರಿಂದ ಒಟ್ಟು 12 ದೂರುಗಳನ್ನು ಸ್ವೀಕರಿಸಿದ ಅವರು, ಸಂಬಂಧಿಸಿದ ಅ ಧಿಕಾರಿಗಳಿಗೆ ಪರಿಹಾರ ಕೈಗೊಳ್ಳಲು ಸೂಚನೆ ನೀಡಿದರು. ರಸ್ತಾಪುರ ಗ್ರಾಪಂ ವ್ಯಾಪ್ತಿಯ ಶಾರದಳ್ಳಿ ಗ್ರಾಮದ ಓರ್ವ ವಿಕಲಚೇತನತನಗೆ ತ್ರಿಚಕ್ರ ವಾಹನ ನೀಡದಿರುವ ಬಗ್ಗೆ ದೂರು ನೀಡಿದರು. ಈ ಕುರಿತು ರಸ್ತಾಪುರ ಪಿಡಿಒಗೆ ಪರಿಶೀಲನೆ ನಡೆಸಿ, ಕೂಡಲೇ ತ್ರಿಚಕ್ರ ವಾಹನ ವ್ಯವಸ್ಥೆ ಮಾಡಲು ನಿರ್ದೇಶನ ನೀಡಿದರು.
ಆಶ್ರಯ ಮನೆಗಳಿಗೆ ಜಿಪಿಎಸ್ ಮಾಡಿದ್ದರೂ ಇಲ್ಲಿವರೆಗೆ ಅನುದಾನ ಕಲ್ಪಿಸದ ಬಗ್ಗೆ ದೂರು ಕೇಳಿ ಬಂದವು. ಈ ಕುರಿತು ಸಂಬಂಧಿ ಸಿದ ಅಧಿಕಾರಿ, ಸಿಬ್ಬಂದಿಗಳೊಂದಿಗೆ ಚರ್ಚಿಸಿ, ಪರಿಶೀಲಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಹಲವಸೆ ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದ್ದರೂ ಕುಡಿಯಲು ನೀರು ಪೂರೈಕೆಯಾಗುತ್ತಿಲ್ಲ. ಸ್ಥಗಿತಗೊಳಿಸಿರುವ ಬಗ್ಗೆ ದೂರು ಸಲ್ಲಿಸಲಾಯಿತು. ಸಾರ್ವಜನಿಕ ಶೌಚಾಲಯ ಮತ್ತು ಅಲೆಮಾರಿ ಸಮುದಾಯದವರಿಗೆ ಮನೆ ಹಂಚಿಕೆ ಮತ್ತು ಪ್ರತಿ ಗ್ರಾಪಂ ಕಚೇರಿಯಲ್ಲಿ ಆಧಾರ್ ಕಾರ್ಡ್ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕೆಂದು ಮನವಿ ಮಾಡಲಾಯಿತು.
ತಾಪಂ ಕಾರ್ಯ ನಿರ್ವಾಹಣಾಧಿಕಾರಿ ಪಂಪಾಪತಿ ಹೀರೆಮಠ, ಜಿಪಂ ಎಇಇ ಶರಣಗೌಡ ಕುರುಕುಂದಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ರಾಜಕುಮಾರ ಪತ್ತಾರ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ರಾಹುತಪ್ಪ ಹವಲ್ದಾರ, ಸಿಡಿಪಿಒ ಗುರುಪಾದಪ್ಪ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌತಮ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಇದ್ದರು.