Advertisement

ಪಾದಚಾರಿಗಳ ಸುಗಮ ಸಂಚಾರಕ್ಕೂ ಸಂಕಷ್ಟ

10:06 AM May 20, 2019 | Team Udayavani |

ಶಹಾಬಾದ: ನಗರದ ರೈಲ್ವೆ ನಿಲ್ದಾಣದ ಬಳಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಕೂಡಲೇ ಸಂಚಾರಿ ಪೊಲೀಸ್‌ ಇಲಾಖೆ ಸೂಕ್ತ ಕ್ರಮ ಕೈಗೊಂಡು ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

ಈ ಹಿಂದೆ ರೈಲ್ವೆ ಇಲಾಖೆ ವತಿಯಿಂದ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ ಕೊಟ್ಟಿದ್ದರಿಂದ ಅಷ್ಟೊಂದು ಸಮಸ್ಯೆ ಕಂಡು ಬಂದಿರಲಿಲ್ಲ. ಆದರೆ ಸದ್ಯ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸದ ಕಾರಣ ವಾಹನ ಸವಾರರು ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದ ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿಸಲು ತೀವ್ರ ತೊಂದರೆಯಾಗುತ್ತಿದೆ.

ದ್ವಿಚಕ್ರ ವಾಹನ ಹಾಗೂ ಆಟೋಗಳ ನಿಲುಗಡೆಯಿಂದ ರಸ್ತೆ ತುಂಬಿ ಹೋಗಿ ಪಾದಚಾರಿಗಳಿಗೂ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ನಿಲ್ದಾಣದ ಹೊರಗೆ ಚಹಾ ಹಾಗೂ ಬಜಿ ಸೇವಿಸಲು ಬಂದ ಜನರು ರಸ್ತೆ ಪಕ್ಕ ವಾಹನ ನಿಲ್ಲಿಸಿ ಸಂಚಾರಕ್ಕೆ ಅಡೆತಡೆ ಮಾಡುತ್ತಿದ್ದಾರೆ. ಅಲ್ಲದೇ ಬಸ್‌ ನಿಲ್ದಾಣದಿಂದ ಬಸ್‌ ಸಂಚಾರ ರೈಲ್ವೆ ನಿಲ್ದಾಣ ಮುಂಭಾಗದ ವೃತ್ತದ ಮೂಲಕ ಹೋಗುವ ವೃತ್ತದಲ್ಲಿ ರಸ್ತೆ ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್‌ ಕಿರಿಕಿರಿ ಹೆಚ್ಚಾಗಿದೆ. ಇಲ್ಲಿ ರೈಲ್ವೆ ನಿಲ್ದಾಣದೊಳಗೆ ಪ್ರವೇಶ ಮಾಡಬೇಕೆಂದರೆ ಹರಸಾಹಸ ಪಡಬೇಕಾಗುತ್ತದೆ. ಹಗಲಿನಲ್ಲಿಯೇ ಸಾಕಷ್ಟು ತೊಂದರೆ ಪಡಬೇಕಾದ ಸಂದರ್ಭವಿದ್ದು, ರಾತ್ರಿಯಾದರೆ ಮಹಿಳೆಯರ ಪಾಡು ಕೇಳದಂತಾಗಿದೆ. ನೆಹರು ವೃತ್ತದಲ್ಲಿ ಇಕ್ಕಟ್ಟಾದ ರಸ್ತೆ ಇದ್ದು, ಬಸ್‌ ತಿರುವು ತೆಗೆದುಕೊಳ್ಳುವಾಗ ಬಹಳ ತೊಂದರೆಯಾಗುತ್ತಿದೆ. ಇದರಿಂದ ಟ್ರಾಫಿಕ್‌ ಜಾಮ್‌ ಆಗುತ್ತಿದೆ. ಇಲ್ಲಿ ರಸ್ತೆ ಅಗಲೀಕರಣ ಆಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಹಿಂದೆ ಪೊಲೀಸ್‌ ಇಲಾಖೆ ವಾಹನಗಳ ನಿಲುಗಡೆಗೆ ವ್ಯವಸ್ಥಿತ ಕ್ರಮ ಕೈಗೊಂಡಿತ್ತು. ಒಂದು ದಿನ ಒಂದು ಬದಿಯಲ್ಲಿ ವಾಹನಗಳ ನಿಲುಗಡೆಯಾದರೆ ಮರು ದಿನ ಇನ್ನೊಂದು ಬದಿಯಲ್ಲಿ ಅದಲಿ-ಬದಲಿಯಾಗುವಂತೆ ವಾಹನಗಳನ್ನು ನಿಲ್ಲಿಸುವ ಕಾರ್ಯಾಚರಣೆ ಕೈಗೊಂಡಿತ್ತು. ಅಲ್ಲದೇ ಅಡ್ಡಾದಿಡ್ಡಿಯಾಗಿ ನಿಲ್ಲಿಸುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಿತ್ತು. ಇದರಿಂದ ಟ್ರಾಫಿಕ್‌ ಕಿರಿಕಿರಿ ಇರಲಿಲ್ಲ. ಆದರೆ ಚುನಾವಣೆ ಘೋಷಣೆಯಾದ ನಂತರ ಈ ಕಡೆ ಗಮನ ಹರಿಸುವುದನ್ನು ಬಿಟ್ಟಿದ್ದಾರೆ. ಇದರಿಂದ ಮತ್ತೆ ಯಥಾಸ್ಥಿತಿ ಮುಂದುವರಿದಿದೆ ಎನ್ನುತ್ತಾರೆ ಸಾರ್ವಜನಿಕರು.

ಆಗ್ರಹ: ಸರಳವಾಗಿ ನಡೆದುಕೊಂಡು ಹೋಗುವ ಹಾಗಿಲ್ಲ. ಇದರ ಮಧ್ಯೆ ದ್ವಿಚಕ್ರ ವಾಹನ ಹಾಗೂ ಆಟೋ ರಿಕ್ಷಾದವರು ಜನಗಳ ಮಧ್ಯೆ ಬಂದು ನಿಲ್ಲಿಸುತ್ತಾರೆ. ಇದರಿಂದ ಜನಗಳ ಮಧ್ಯದಿಂದ ಹೋಗಬೇಕಾದರೆ ಮೈ ತಾಗಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ಕೂಡಲೇ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಪೊಲೀಸ್‌ ಇಲಾಖೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಮಹಿಳೆಯರು ಆಗ್ರಹಿಸಿದ್ದಾರೆ.

Advertisement

ದಿನನಿತ್ಯ ನಗರದಿಂದ ಸಾವಿರಾರು ಜನರು ಕಲಬುರಗಿ ಹಾಗೂ ಇತರ ನಗರಕ್ಕೆ ಹೋಗುತ್ತಾರೆ. ಆದರೆ ರೈಲ್ವೆ ನಿಲ್ದಾಣದ ಒಳಗೆ ಪ್ರವೇಶಿಸುವ ಮುಂಚೆ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಅಡೆತಡೆಯಾಗುತ್ತಿದೆ. ಒಬ್ಬ ವ್ಯಕ್ತಿಯೂ ಸರಳವಾಗಿ ನಡೆದುಕೊಂಡು ಹೋಗದ ರೀತಿಯಲ್ಲಿ ವಾಹನಗಳನ್ನು ನಿಲ್ಲಿಸಿರುತ್ತಾರೆ. ರಾತ್ರಿಯಂತೂ ಈ ಕಡೆ ಮಹಿಳೆಯರನ್ನು ಕಳಿಸಲು ಹಿಂದೇಟು ಹಾಕುವಂತಿದೆ.
ಸೂರ್ಯಕಾಂತ ಕುಂಟನ್‌,
ಸ್ಥಳೀಯ ನಿವಾಸಿ

ಮಲ್ಲಿನಾಥ ಪಾಟೀಲ

Advertisement

Udayavani is now on Telegram. Click here to join our channel and stay updated with the latest news.

Next