ಮಲ್ಲಿನಾಥ ಜಿ.ಪಾಟೀಲ
ಶಹಾಬಾದ: ಬಿಸಿಲಿನ ತಾಪ, ಅಂತರ್ಜಲ ಕುಸಿತದಿಂದ ಕುಡಿಯಲು, ಬಟ್ಟೆ ಒಗೆಯಲು, ಮುಖ ತೊಳೆಯಲು ನೀರಿಲ್ಲದೇ ಜನ ನಿತ್ಯ ಪರದಾಡುವಂತಾಗಿದ್ದು, ನಿತ್ಯ ಕೆಲಸ-ಕಾರ್ಯ ಬಿಟ್ಟು ಬೆಳಗ್ಗೆಯಿಂದ ಸಂಜೆ ವರೆಗೂ ನೀರಿಗಾಗಿ ಅಲೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ತೊನಸನಹಳ್ಳಿ (ಎಸ್) ಗ್ರಾಪಂ ವ್ಯಾಪ್ತಿಯ ಗೋಳಾ (ಕೆ) ಗ್ರಾಮದ ನಿತ್ಯ ಗೋಳು.
ಗೋಳಾ (ಕೆ) ಗ್ರಾಮ ಕಾಗಿಣಾ ನದಿ ಪಕ್ಕದಲ್ಲಿದ್ದರೂ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೇ ಕೊಡ ನೀರಿಗೂ ಪರಿತಪಿಸುವಂತೆ ಆಗಿದೆ. ಗ್ರಾಮದಲ್ಲಿ ಸುಮಾರು ಐದು ಸಾವಿರ ಜನಸಂಖ್ಯೆಯಿದೆ. ಗ್ರಾಮದ ಮುಖಂಡರೇ ಗ್ರಾಪಂ ಅಧ್ಯಕ್ಷರಾದರೂ ನೀರಿಗೆ ಬರವಿದೆ. ಅದರಲ್ಲೂ ಗ್ರಾಮದ ಹೊಸಕೇರಿ, ನಿಜಾಮ ಬಜಾರ್‌ನಲ್ಲಿ ನೀರಿಗೆ ತೀವ್ರ ಬರವಿದೆ. ಕಳೆದ 20 ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗಿದೆ. ಶಾಲೆಗೆ ಹೋಗುವ ಮಕ್ಕಳನ್ನು ಬಿಡಿಸಿ ನೀರು ತರಲು ಕಳುಹಿಸಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯ ಡೋಲಾಯಮಾನ ಎನ್ನುವಂತಾಗಿದೆ.
ಇರುವ ಎರಡು ಕೊಳವೆ ಬಾವಿಯಲ್ಲಿ ಅಂತರ್ಜಲ ಕಡಿಮೆಯಾದ ಕಾರಣ ಮಹಿಳೆಯರು ರಾತ್ರಿ-ಹಗಲು ಎನ್ನದೇ ನೀರಿಗಾಗಿ ನೂರಾರು ಕೊಡಗಳನ್ನಿಟ್ಟು ಸರದಿಯಲ್ಲಿ ನಿಲ್ಲುವಂತಾಗಿದೆ. ಕುಡಿಯುವ ನೀರಿಗಾಗಿ ಪೈಪೋಟಿಗಿಳಿದು ವಾದಕ್ಕಿಳಿಯುವಂತ ಘಟನೆಗಳು ನಡೆಯುತ್ತಿವೆ. ನಿಜಾಮ ಬಜಾರ್‌ನಲ್ಲಿ ಇರುವ ಒಂದು ಬಾವಿಯಲ್ಲಿ ನೀರು ಗಬ್ಬೆದ್ದು ನಾರುತ್ತಿದೆ. ಅಲ್ಲದೇ ಕಳೆದ ಎರಡು ತಿಂಗಳ ಹಿಂದಷ್ಟೇ ಮಹಿಳೆಯೊಬ್ಬಳು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆ ಶರೀರವನ್ನು ತೆಗೆದು ಹಾಕಲಾಗಿತ್ತು. ಗ್ರಾಮಸ್ಥರು ಬಾವಿ ಸ್ವಚ್ಛಗೊಳಿಸಲು ಗ್ರಾ.ಪಂ.ಗೆ ತಿಳಿಸಿದ್ದರು. ಗ್ರಾಪಂ ಅಧ್ಯಕ್ಷರು ಸ್ಥಳಕ್ಕೆ ಧಾವಿಸಿ ಮೋಟಾರ ಅಳವಡಿಸಿ ನೀರನ್ನು ಹೊರತೆಗೆಯಲು ಕ್ರಮ ಕೈಗೊಂಡಿದ್ದರು. ಆದರೆ ವಿದ್ಯುತ್ ಟಿಸಿ ಸಮಸ್ಯೆಯಿಂದ ಸ್ವಚ್ಛಗೊಳಿಸುವ ಕಾರ್ಯ ನಿಂತು ಹೋಗಿದ್ದು, ಜನರು ನೀರಿಗಾಗಿ ಹಾತೊರೆಯುವುದು ಮಾತ್ರ ನಿಂತಿಲ್ಲ. ಈ ಹಿಂದೆ ಶಹಾಬಾದ ನಗರಸಭೆ ಹಳೆ ಜಾಕವೆಲ್ ಮುಖಾಂತರ ನಗರಕ್ಕೆ ಸರಬರಾಜು ಮಾಡುವ ನೀರಿನ ಪೈಪಲೈನ್ ಮೂಲಕ ಗ್ರಾಮಕ್ಕೆ ನೀರು ಸರಬರಾಜಾಗುತ್ತಿತ್ತು. ಇದರಿಂದ ಯಾವುದೇ ತೊಂದರೆ ಇರಲಿಲ್ಲ. ಆದರೆ ನಗರಸಭೆಯವರು ಎಡಿಬಿ ಯೋಜನೆ ಮೂಲಕ 24×7 ಶಾಶ್ವತ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡ ನಂತರ ಈ ಹಳೆ ಜಾಕವೆಲ್ನ ಪೈಪ್‌ಲೈನ್ ಬಂದ್ ಮಾಡಿದ್ದಾರೆ. ಇದೇ ಇಷ್ಟೆಲ್ಲ ಸಮಸ್ಯೆಗೆ ಕಾರಣವಾಗಿದೆ ಎನ್ನುತ್ತಾರೆ ನಿಜಾಮ ಬಜಾರ್‌ನ ರತನರಾಜ ಕೋಬಾಳಕರ್.
ಎಡಿಬಿ ನಿರ್ಲಕ್ಷ್ಯ: ಎಡಿಬಿಯವರು ಶುದ್ಧ ಕುಡಿಯುವ ನೀರಿನ ಯೋಜನೆಯನ್ನು ಭೀಮಾ ನದಿಯಿಂದ ಶಹಾಬಾದ ನಗರಕ್ಕೆ ಸರಬರಾಜು ಮಾಡುತ್ತಿದ್ದಾರೆ. ಈ ಪೈಪಲೈನ್ ಗೋಳಾ (ಕೆ) ಗ್ರಾಮದ ಮೂಲಕ ಹಾಯ್ದು ಹೋಗುವಾಗ ಗ್ರಾಮಸ್ಥರು ನಮಗೆ ನೀರು ಕೊಟ್ಟರೇ ಮಾತ್ರ ಪೈಪ್‌ಲೈನ್‌ನ್ನು ನಮ್ಮ ಗ್ರಾಮದಲ್ಲಿ ಹಾಕಲು ಅನುಮತಿ ನೀಡುತ್ತೇವೆ. ಇಲ್ಲವಾದರೆ ಪೈಪ್‌ಲೈನ್ ಹಾಕಲು ಬಿಡುವುದಿಲ್ಲ ಎಂದಾಗ, ಎಡಿಬಿ ಅಧಿಕಾರಿಗಳು ಗೋಳಾ ಗ್ರಾಮದಲ್ಲಿ ವಾಲ್ ಮಾಡಿದ್ದಾರೆಯೇ ಹೊರತು ಪೈಪ್‌ಲೈನ್ ಹಾಕಿಲ್ಲ. ಎರಡು ವರ್ಷದಿಂದ ನೀರಿನ ಸಮಸ್ಯೆಯಿದೆ. ಪೈಪ್‌ಲೈನ್ ಹಾಕಿ ನೀರು ಕೊಡಿ ಎಂದು ಗ್ರಾಮಸ್ಥರು ಅಂಗಲಾಚಿದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ. ಇಷ್ಟೆಲ್ಲ ಆದರೂ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಗ್ರಾಪಂ ಅಥವಾ ತಾಲೂಕಾ ಆಡಳಿತ ಮುಂದಾಗದೇ ಇರುವುದು ಮಾತ್ರ ವಿಪರ್ಯಾಸವೇ ಸರಿ.